– ವಾಣಿಜ್ಯ ಸೇವೆ ಆರಂಭಿಸುವ ಮೊದಲೇ ದರ ಪ್ರಕಟ
– ಹಾರ್ಡ್‌ವೇರ್ ಕಿಟ್‌ಗೆ 34 ಸಾವಿರ ರೂ.
ನವದೆಹಲಿ: ಎಲೋನ್ ಮಸ್ಕ್ (Elon Musk) ಒಡೆತನದ ಉಪಗ್ರಹ ಆಧಾರಿತ ಇಂಟರ್ನೆಟ್ (Internet) ಕಂಪನಿ ಸ್ಟಾರ್‌ಲಿಂಕ್ (Starlink) ಭಾರತದಲ್ಲಿ (India) ಸೇವೆ ಒದಗಿಸಲು ಸಿದ್ಧವಾಗುತ್ತಿದೆ. ಅಧಿಕೃತವಾಗಿ ವಾಣಿಜ್ಯ ಸೇವೆ ಆರಂಭಿಸುವ ಮೊದಲೇ ಸ್ಟಾರ್‌ಲಿಂಕ್ ತನ್ನ ವೆಬ್‌ಸೈಟ್‌ನಲ್ಲಿ ಈ ಸೇವೆಯ ದರವನ್ನು ಪ್ರಕಟಿಸಿದೆ.
ಸ್ಟಾರ್‌ಲಿಂಕ್ ವಿಶ್ವಾದ್ಯಂತ ಎರಡು ರೀತಿಯ ಪ್ಯಾಕೇಜಿನಲ್ಲಿ ಸೇವೆ ನೀಡುತ್ತಿದೆ. ಜನಸಾಮಾನ್ಯರಿಗೆ ರೆಸಿಡೆನ್ಶಿಯಲ್ ಮತ್ತು ಕಂಪನಿಗಳಿಗೆ ಬಿಸಿನೆಸ್ ಪ್ಯಾಕ್ ಅಡಿ ಇಂಟರ್‌ನೆಟ್ ನೀಡುತ್ತದೆ. ಸದ್ಯ ಭಾರತದಲ್ಲಿ ಜನಸಾಮಾನ್ಯರಿಗೆ ರೆಸಿಡೆನ್ಶಿಯಲ್ ಅಡಿಯಲ್ಲಿ ಮಾತ್ರ ಪ್ಯಾಕೇಜ್ ಪ್ರಕಟಿಸಿದೆ. ಬಿಸಿನೆಸ್ ಪ್ಯಾಕ್ ಬಗ್ಗೆ ತನ್ನ www.starlink.com ವೆಬ್‌ಸೈಟ್ ಯಾವುದೇ ಮಾಹಿತಿಯನ್ನು ಪ್ರಕಟಿಸಿಲ್ಲ.
ರೆಸೆಡೆನ್ಶಿಯಲ್ ಪ್ಲ್ಯಾನ್‌ಗೆ ತಿಂಗಳಿಗೆ 8,600 ರೂ. ದರ ನಿಗದಿ ಪಡಿಸಿದೆ. ಈ ಸೇವೆ ಪಡೆಯಬೇಕಾದರೆ ಗ್ರಾಹಕರು 34,000 ರೂ. ಬೆಲೆಯ ಹಾರ್ಡ್‌ವೇರ್ ಕಿಟ್ (ಸ್ಟಾರ್‌ಲಿಂಕ್ ಡಿಶ್, ವೈ-ಫೈ ರೂಟರ್, ಕೇಬಲ್, ಮೌಂಟಿಂಗ್ ಬೇಸ್/ಕಿಕ್‌ಸ್ಟ್ಯಾಂಡ್) ಪಡೆಯಬೇಕಾಗುತ್ತದೆ. ಈ ಸಂಪರ್ಕ ಪಡೆದ 30 ದಿನ ಟ್ರಯಲ್ ಆಯ್ಕೆ ನೀಡಲಾಗುತ್ತದೆ. ಈ ಅವಧಿಯ ಒಳಗಡೆ ಗ್ರಾಹಕರಿಗೆ ಸೇವೆ ಇಷ್ಟವಾಗದಿದ್ದರೆ ಹಣವನ್ನು ಸಂಪೂರ್ಣ ಮರುಪಾವತಿ ಮಾಡಲಾಗುತ್ತದೆ.
ಎಷ್ಟು ವೇಗದಲ್ಲಿ ಇಂಟರ್‌ನೆಟ್ ಸೇವೆ ನೀಡುತ್ತದೆ ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲ. ವಿಶ್ವಾದ್ಯಂತ ಸ್ಟಾರ್‌ಲಿಂಕ್ 50 Mbps (ಮೆಗಾಬಿಟ್ಸ್ ಪರ್ ಸೆಕೆಂಡ್) ನಿಂದ 150 Mbps ವರೆಗಿನ ವೇಗದ ಇಂಟರ್ನೆಟ್ ನೀಡುತ್ತದೆ.
ಇಲ್ಲಿಯವರೆಗೆ, ದೂರಸಂಪರ್ಕ ಇಲಾಖೆಯು ಮೂರು ಕಂಪನಿಗಳಿಗೆ ಉಪಗ್ರಹ ಸಂವಹನ ಸೇವೆಗಳೊಂದಿಗೆ ಮುಂದುವರಿಯಲು ಅವಕಾಶ ನೀಡಿದೆ. ಸ್ಟಾರ್‌ಲಿಂಕ್ ಜೊತೆಗೆ, ಭಾರ್ತಿ ಸಮೂಹ ಬೆಂಬಲಿತ ಯುಟೆಲ್‌ಸ್ಯಾಟ್ ಒನ್‌ವೆಬ್ ಮತ್ತು ಜಿಯೋದ ಉಪಗ್ರಹ ವಿಭಾಗವು ಅಗತ್ಯವಿರುವ ಅನುಮತಿಗಳನ್ನು ಪಡೆದಿವೆ. ವಾಣಿಜ್ಯ ಬಿಡುಗಡೆಯನ್ನು ಪ್ರಾರಂಭಿಸುವ ಮೊದಲು ಮೂರೂ ಕಂಪನಿಗಳು ಇನ್ನೂ ಸ್ಪೆಕ್ಟ್ರಮ್ ನಿಯೋಜನೆಗಾಗಿ ಕಾಯುತ್ತಿವೆ. ಇದನ್ನೂ ಓದಿ: ಏನಿದು ಸಿಮ್ ಬೈಂಡಿಂಗ್? ಇನ್ಮುಂದೆ ಮೊಬೈಲ್‌ನಿಂದ ಸಿಮ್ ತೆಗೆದ್ರೆ ವಾಟ್ಸಪ್ ಬಂದ್!
ನವೆಂಬರ್‌ನಲ್ಲಿ ಮಹಾರಾಷ್ಟ್ರ ಸರ್ಕಾರವು ಸ್ಟಾರ್‌ಲಿಂಕ್ ಕಂಪನಿಯೊಂದಿಗೆ ಪಾಲುದಾರಿಕೆಯನ್ನು ಘೋಷಿಸಿದೆ. ಮಸ್ಕ್ ಕಂಪನಿಯ ಜೊತೆ ಔಪಚಾರಿಕವಾಗಿ ಸಹಿ ಮಾಡಿದ ಮೊದಲ ರಾಜ್ಯವಾಗಿದೆ. ಈ ಸಹಯೋಗವು ಸರ್ಕಾರಿ ಸಂಸ್ಥೆಗಳು, ಗ್ರಾಮೀಣ ಪ್ರದೇಶಗಳು ಮತ್ತು ಪ್ರಮುಖ ಸಾರ್ವಜನಿಕ ಮೂಲಸೌಕರ್ಯಗಳಿಗೆ, ವಿಶೇಷವಾಗಿ ಗಡ್ಚಿರೋಲಿ, ನಂದುರ್ಬಾರ್, ವಾಶಿಮ್ ಮತ್ತು ಧಾರಾಶಿವ್‌ನಂತಹ ಜಿಲ್ಲೆಗಳಿಗೆ ಉಪಗ್ರಹ ಇಂಟರ್ನೆಟ್ ಸೇವೆಗಳನ್ನು ತರಲು ಸಹಾಯ ಮಾಡುತ್ತದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಮಸ್ಕ್ ಒಡೆತನದ ಸ್ಟಾರ್‌ಲಿಂಕ್ ಜನರನ್ನು ಸೆಳೆಯಲು ಒಂದೊಂದು ದೇಶದಲ್ಲಿ ಒಂದೊಂದು ಡೇಟಾ ಪ್ಲ್ಯಾನ್ ರಿಲೀಸ್ ಮಾಡಿದೆ. ಅಮೆರಿಕದಲ್ಲಿ ಪ್ರತಿ ತಿಂಗಳಿಗೆ 120 ಡಾಲರ್ (ಅಂದಾಜು 10,000 ರೂ.) ವಿಧಿಸಿದ್ದರೆ ಕೀನ್ಯಾದಲ್ಲಿ ಪ್ರತಿ ತಿಂಗಳಿಗೆ 10 ಡಾಲರ್ (ಅಂದಾಜು 844 ರೂ.) ದರವನ್ನು ವಿಧಿಸಿದೆ. ಸ್ಟಾರ್‌ಲಿಂಕ್ ಒಟ್ಟು 6,400 ಉಪಗ್ರಹವನ್ನು ಹಾರಿಸಿದ್ದು ವಿಶ್ವದಲ್ಲಿ 40 ಲಕ್ಷ ಗ್ರಾಹಕರಿದ್ದಾರೆ.
ಈ ಹಿಂದೆ ಭಾರತದಲ್ಲಿ ತಿಂಗಳಿಗೆ 3,500 ರೂ. ನಿಂದ 4,000 ರೂ. ದರ ವಿಧಿಸಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಏಷ್ಯಾದ ರಾಷ್ಟ್ರಗಳಲ್ಲಿ ದರ ನಿಗದಿಯಾಗಿರುವಂತೆ ಭಾರತದಲ್ಲೂ ಸ್ಟಾರ್‌ಲಿಂಕ್ ಅದೇ ದರವನ್ನು ನಿಗದಿ ಮಾಡಿದೆ.
ಸ್ಟಾರ್‌ಲಿಂಕ್ ಎಂದರೇನು?
ಸ್ಟಾರ್‌ಲಿಂಕ್ ಎಲೋನ್ ಮಸ್ಕ್ ಸ್ಥಾಪಿಸಿದ ಏರೋಸ್ಪೇಸ್ ಕಂಪನಿಯಾದ ಸ್ಪೇಸ್‌ಎಕ್ಸ್‌ನಿಂದ ಪ್ರಾರಂಭಿಸಲಾದ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಯಾಗಿದೆ. ಈ ಸೇವೆ ಪಡೆಯಬೇಕಾದರೆ ಕಂಪನಿಯ ಡಿಶ್ ಮತ್ತು ರೂಟರ್ ಬೇಕಾಗುತ್ತದೆ.
ಬ್ರಾಡ್‌ಬ್ಯಾಡ್ ಸೇವೆ ಪಡೆಯಬೇಕಾದ್ರೆ ಫೈಬರ್ ಆಪ್ಟಿಕ್ ಕೇಬಲ್ ನೆಲಕ್ಕೆ ಹಾಕಬೇಕಾಗುತ್ತದೆ. ಆದರೆ ಈ ಸ್ಟಾರ್ ಲಿಂಕ್‌ಗೆ ಗುಂಡಿ ತೋಡಿ ಆಪ್ಟಿಕಲ್ ಕೇಬಲ್ ಹಾಕುವ ಅಗತ್ಯ ಇಲ್ಲ. ಕೇಬಲ್‌ಗಳನ್ನು ಹಾಕುವುದು ತುಂಬಾ ದುಬಾರಿಯಾಗಿರುವ ಗ್ರಾಮೀಣ, ದೂರದ ಅಥವಾ ತಲುಪಲು ಕಷ್ಟಕರವಾದ ಪ್ರದೇಶಗಳಿಗೆ ಈ ಸ್ಯಾಟಲೈಟ್ ಇಂಟರ್‌ನೆಟ್ ಉತ್ತಮ. ಇದನ್ನೂ ಓದಿ: ಭಾರತೀಯರ ಪ್ರತಿಭೆಯಿಂದ ಅಮೆರಿಕ ಬೆಳವಣಿಗೆ ಸಾಧಿಸಿದೆ: ಮಸ್ಕ್



