ನವದೆಹಲಿ: ಎಲಾನ್ ಮಸ್ಕ್ (Elon Musk) ಒಡೆತನದ ಉಪಗ್ರಹ ಆಧಾರಿತ ಇಂಟರ್ನೆಟ್ (Internet) ಕಂಪನಿ ಸ್ಟಾರ್‌ಲಿಂಕ್ (Starlink) ಭಾರತದಲ್ಲಿ (India) ತನ್ನ ಸೇವೆ ಒದಗಿಸಲು ಸಿದ್ಧವಾಗುತ್ತಿದೆ. ಭಾರತ ಸರ್ಕಾರವು ಸ್ಟಾರ್‌ಲಿಂಕ್‌ಗೆ ಅನುಮತಿ ನೀಡಿದೆ. ಈ ಬಗ್ಗೆ ದೂರಸಂಪರ್ಕ ಇಲಾಖೆ (DoT) ಸ್ಟಾರ್‌ಲಿಂಕ್‌ಗೆ ಅನುಮತಿ ಪತ್ರವನ್ನು (LoI) ನೀಡಿದೆ ಎಂದು ವರದಿಯಾಗಿದೆ.
ಸ್ಟಾರ್‌ಲಿಂಕ್ ಉಪಗ್ರಹಗಳ ಸಮೂಹವನ್ನು ಬಳಸಿಕೊಂಡು ಇಂಟರ್ನೆಟ್ ಒದಗಿಸುತ್ತದೆ. ಈ ಉಪಗ್ರಹಗಳು ಬೇರೆ ಉಪಗ್ರಹಗಳಿಗಿಂತ ಭೂಮಿಗೆ ಹೆಚ್ಚು ಹತ್ತಿರದಲ್ಲಿರುತ್ತವೆ. ಇದರಿಂದಾಗಿ ಗ್ರಾಹಕರಿಗೆ ವೇಗವಾದ ಇಂಟರ್ನೆಟ್ ಸೌಲಭ್ಯ ಸಿಗುತ್ತದೆ. ಸ್ಟಾರ್‌ಲಿಂಕ್ ಈಗಾಗಲೇ 100 ಕ್ಕೂ ಹೆಚ್ಚು ದೇಶಗಳಲ್ಲಿ ಸಕ್ರಿಯವಾಗಿದೆ. ಈಗ ಭಾರತಕ್ಕೂ ಕಾಲಿಡುತ್ತಿದ್ದು, ಮುಖ್ಯವಾಗಿ ಗ್ರಾಮೀಣ ಭಾಗಗಳಿಗೆ ಇಂಟರ್ನೆಟ್ ಸೇವೆ ಒದಗಿಸುವ ಉದ್ದೇಶಹೊಂದಿದೆ.
ಇಂಟರ್ನೆಟ್ ಬೆಲೆ, ವೇಗ ಎಷ್ಟಿರತ್ತೆ?
ಸ್ಟಾರ್‌ಲಿಂಕ್ ಭಾರತದಲ್ಲಿ ಅನಿಯಮಿತ ಡೇಟಾ ಯೋಜನೆಗಳನ್ನು ಪ್ರಾರಂಭಿಸುವ ಸಾಧ್ಯತೆಯಿದೆ. ಇದಕ್ಕೆ ಸರಿಸುಮಾರು 840 ರೂ., ನಗರ ಪ್ರದೇಶಗಳಲ್ಲಿನ ಬಳಕೆದಾರರಿಗೆ ಮಾಸಿಕ 500ರೂ. ಶುಲ್ಕ, ವಾರ್ಷಿಕ 3,500 ರೂ. ಕನಿಷ್ಠ ಶುಲ್ಕವನ್ನು TRAI ಪ್ರಸ್ತಾಪಿಸಿದೆ. ಇದು ಆರಂಭಿಕ ಹಂತಗಳಲ್ಲಿ ಹೆಚ್ಚಿನ ಸಂಖ್ಯೆಯ ಬಳಕೆದಾರರನ್ನು ಆಕರ್ಷಿಸುವ ಪ್ರಯತ್ನವಾಗಿದೆ. ಭಾರತದಲ್ಲಿ ವಾಣಿಜ್ಯಿಕವಾಗಿ ಸೇವೆಗಳನ್ನು ನೀಡಲು ಸ್ಟಾರ್‌ಲಿಂಕ್ 8% ಪರವಾನಗಿ ಶುಲ್ಕವನ್ನು ಸಹ ಪಾವತಿಸಬೇಕಾಗುತ್ತದೆ.
ಭಾರತದಲ್ಲಿ ಸ್ಟಾರ್‌ಲಿಂಕ್ ಇಂಟರ್ನೆಟ್ ಪಡೆಯಲು ಬೇಕಾಗುವ ಸಾಧನಗಳ ಬೆಲೆಯನ್ನು ಇದು ಬಹಿರಂಗಪಡಿಸಿಲ್ಲ. ಅಮೆರಿಕಾದಲ್ಲಿ ಸ್ಟಾರ್‌ಲಿಂಕ್ ಕಿಟ್‌ನ ಬೆಲೆ 30,000 ರೂ. ಮತ್ತು ಕಾಂಪ್ಯಾಕ್ಟ್ ಸ್ಟಾರ್‌ಲಿಂಕ್ ಸಾಧನದ ಬೆಲೆ ಸುಮಾರು ರೂ. 43,000 ಆಗಿದೆ. ಭಾರತದಲ್ಲಿ ಇಂಟರ್ನೆಟ್ ವೇಗವು ಸ್ಥಳ ಮತ್ತು ಉಪಗ್ರಹ ವ್ಯಾಪ್ತಿಯನ್ನು ಅವಲಂಬಿಸಿ 25 Mbps ನಿಂದ 220 Mbps ವರೆಗೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಭಾರತದಲ್ಲಿ ಸ್ಟಾರ್‌ಲಿಂಕ್ ಯಾವಾಗ ಬಿಡುಗಡೆಯಾಗುತ್ತದೆ?
ಸ್ಟಾರ್‌ಲಿಂಕ್ ಕಂಪನಿಯು ಇನ್ನೂ ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರದಿಂದ ಅಂತಿಮ ಅನುಮೋದನೆಯನ್ನು ಪಡೆಯಬೇಕಾಗಿದೆ. ಅದು ಜಾರಿಗೆ ಬಂದ ನಂತರ, ಸ್ಟಾರ್‌ಲಿಂಕ್ ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ತನ್ನ ಸೇವೆಗಳನ್ನು ಪ್ರಾರಂಭಿಸುವ ನಿರೀಕ್ಷೆಯಿದೆ.
ಸ್ಟಾರ್‌ಲಿಂಕ್ ಎಂದರೇನು?
ಸ್ಟಾರ್‌ಲಿಂಕ್ ಅನ್ನೋದು ಎಲೋನ್ ಮಸ್ಕ್ ಸ್ಥಾಪಿಸಿದ ಏರೋಸ್ಪೇಸ್ ಕಂಪನಿಯಾದ ಸ್ಪೇಸ್‌ಎಕ್ಸ್‌ನಿಂದ ಪ್ರಾರಂಭಿಸಲಾದ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಯಾಗಿದೆ. ಈ ಸೇವೆ ಪಡೆಯಬೇಕಾದರೆ ಕಂಪನಿಯ ಡಿಶ್ ಮತ್ತು ರೂಟರ್ ಬೇಕಾಗುತ್ತದೆ.
ಬ್ರಾಡ್‌ಬ್ಯಾಡ್ ಸೇವೆ ಪಡೆಯಬೇಕಾದ್ರೆ ಫೈಬರ್ ಆಪ್ಟಿಕ್ ಕೇಬಲ್ ನೆಲಕ್ಕೆ ಹಾಕಬೇಕಾಗುತ್ತದೆ. ಆದ್ರೆ ಈ ಸ್ಟಾರ್ ಲಿಂಕ್‌ಗೆ ಗುಂಡಿ ತೋಡಿ ಆಪ್ಟಿಕಲ್ ಕೇಬಲ್ ಹಾಕುವ ಅಗತ್ಯ ಇಲ್ಲ. ಸ್ಟಾರ್‌ಲಿಂಕ್ 50 Mbps ನಿಂದ 150 Mbps ವರೆಗಿನ ವೇಗ ವೇಗದ ಇಂಟರ್ನೆಟ್ ನೀಡುತ್ತೆ. ಕೇಬಲ್‌ಗಳನ್ನು ಹಾಕುವುದು ತುಂಬಾ ದುಬಾರಿಯಾಗಿರುವ ಗ್ರಾಮೀಣ, ದೂರದ ಅಥವಾ ತಲುಪಲು ಕಷ್ಟಕರವಾದ ಪ್ರದೇಶಗಳಿಗೆ ಈ ಸ್ಯಾಟಲೈಟ್ ಇಂಟರ್‌ನೆಟ್ ಉತ್ತಮ.
ಡಿಶ್ ಇದೆ ಹೌದು ಮಳೆ ಬಂದ್ರೆ ಇಂಟರ್‌ನೆಟ್ ಸಮಸ್ಯೆ ಆಗಲ್ವ ಅಂತ ನೀವು ಕೇಳಬಹುದು. ಸ್ಟಾರ್‌ಲಿಂಕ್‌ನಲ್ಲಿ ಸಮಸ್ಯೆ ಆಗಲ್ಲ. ತೀವ್ರ ಶೀತ ಮತ್ತು ಶಾಖ, ಹಿಮಪಾತ, ಭಾರೀ ಮಳೆ ಮತ್ತು ಬಿರುಗಾಳಿ ಬೀಸಿದ್ರೂ ಯಾವುದೇ ಸಮಸ್ಯೆ ಆಗಲ್ಲ.