– RCB ಮ್ಯಾನೇಜ್ಮೆಂಟ್ನಿಂದಲೂ NO COMMENTS ಅಂತ ಪ್ರತಿಕ್ರಿಯೆ
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕ್ಟರಿ ಪರೇಡ್ ಸಂಭ್ರಮದ ವೇಳೆ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ʻಪಬ್ಲಿಕ್ ಟಿವಿʼಗೆ (Public TV) ಪ್ರತಿಕ್ರಿಯೆ ನೀಡಲು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನುಣುಚಿಕೊಂಡಿದೆ. ಪ್ರತಿಕ್ರಿಯೆ ಕೇಳಿದ್ರೆ, ಹಿಂದೆ – ಮುಂದೆ ತಪ್ಪಿಸಿಕೊಂಡು, ಓಡಿದ್ದಾರೆ. ಕೆಎಸ್ಸಿಎ (KSCA) ಅಧಿಕಾರಿಗಳ ಈ ನಡೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಹೌದು. ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ʻಪಬ್ಲಿಕ್ ಟಿವಿʼ ಕೆಎಸ್ಸಿಎ ಪ್ರಧಾನ ಕಾರ್ಯದರ್ಶಿ ಎ. ಶಂಕರ್ ಅವರನ್ನ ಸಂಪರ್ಕಿಸಿತ್ತು. ನಿರಂತರ ಪ್ರಯತ್ನ ಮಾಡಿದ್ರೂ, ಒಂದೇ ಒಂದು ಮಾತೂ ಆಡದ ಅಧಿಕಾರಿ ಹಿಂದೆ ಮುಂದೆ ತಪ್ಪಿಸಿಕೊಂಡು ಓದಿದ್ದಾರೆ. ಅತ್ತ ಆರ್ಸಿಬಿ ಆಡಳಿತ ಮಂಡಳಿ ಕೋಡ ನೋ ಕಾಮೆಂಟ್ಸ್ ಅಂತ ಪ್ರತಿಕ್ರಿಯೆ ನೀಡಿದೆ. ಜೊತೆಗೆ KSCA ಕಡೆಗೆ ಬೆರಳು ತೋರಿಸಿ ಸುಮ್ಮನಾಗಿದೆ. ಇದನ್ನೂ ಓದಿ: ಟೀಂ ಇಂಡಿಯಾದ್ದು 5 ದಿನ, ಸಿಎಸ್ಕೆ 3 ದಿನದ ನಂತರ ಆಚರಣೆ ಮಾಡಿದ್ರೆ ಒಂದೇ ದಿನದಲ್ಲಿ ವಿಜಯೋತ್ಸವ ಆಚರಿಸಿದ್ದು ಯಾಕೆ? – ಜೆಡಿಎಸ್ ಆಕ್ರೋಶ
ಕೆಎಸ್ಸಿಎ, ಆರ್ಸಿಬಿ ಮ್ಯಾನೇಜ್ಮೆಂಟ್ ವಿರುದ್ಧ ದೂರು:
ಇನ್ನೂ ಈ ನಡುವೆ ವಕೀಲ ರಂಗನಾಥ್ ರೆಡ್ಡಿ ಅವರು, ಚಿನ್ನಸ್ವಾಮಿ ಮೈದಾನದ ಬಳಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂದಿಸಿದಂತೆ ಕೆಎಸ್ಸಿಎ ಹಾಗೂ RCB ಮ್ಯಾನೇಜ್ಮೆಂಟ್ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಕೇಸ್ – ಪೊಲೀಸರನ್ನ ಸಂಪರ್ಕಿಸದೇ ವಿಕ್ಟರಿ ಪೆರೇಡ್ ಘೋಷಿಸಿದ್ದ RCB ಫ್ರಾಂಚೈಸಿ
ಏನಿದು ಪ್ರಕರಣ?
ರಾಯಲ್ ಚಾಲೆಂಜರ್ಸ್ ಬೆಂಗಳೂರು 18 ವರ್ಷಗಳ ಬಳಿಕ ಐಪಿಎಲ್ ಚಾಂಪಿಯನ್ ಪಟ್ಟವನ್ನೇನೋ ಅಲಂಕರಿಸಿದೆ. ಆದರೆ, ಆರ್ಸಿಬಿ ಫ್ಯಾನ್ಸ್ ಐತಿಹಾಸಿಕ ಕ್ಷಣದ ಸಂಭ್ರಮದಲ್ಲಿ ದುರಂತ ಸಂಭವಿಸಿದೆ. 10ಕ್ಕೂ ಹೆಚ್ಚು ಅಭಿಮಾನಿಗಳು ಸಾವನ್ನಪ್ಪಿ ಸೂತಕವಾಗಿ ಆಗಿಬಿಟ್ಟಿದೆ. ಪಂಜಾಬ್ ವಿರುದ್ಧ ಬೆಂಗಳೂರು 6 ರನ್ಗಳ ಭರ್ಜರಿ ಜಯ ಸಾಧಿಸ್ತಿದ್ದಂತೆಯೇ ಸಿಲಿಕಾನ್ ಸಿಟಿಯಲ್ಲಿ ನಿನ್ನೆ ರಾತ್ರಿಯೇ ದೀಪಾವಳಿಯಂಥಹ ಸಂಭ್ರಮ ಇತ್ತು. ಇವತ್ತು ಇಡೀ ದಿನ ಹೆಚ್ಎಎಲ್ ಏರ್ಪೋರ್ಟ್ ರೋಡ್, ತಾಜ್ ವೆಸ್ಟ್ ಎಂಡ್ ಹೊಟೇಲ್ ರೋಡ್, ವಿಧಾನಸೌಧ, ಚಿನ್ನಸ್ವಾಮಿ ಸ್ಟೇಡಿಯಂ ರಸ್ತೆ ಸುತ್ತ ಮುತ್ತ ರೆಡ್ ಆರ್ಮಿ ಎಲ್ಲಾ ಕಡೆ ಆರ್ಸಿಬಿ ತಂಡಕ್ಕೆ ತಮ್ಮ ಅಭಿಮಾನ ತೋರಿದರು. ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣದ ಹೊಣೆ ಡಿಕೆಶಿ ಹೊರಬೇಕು: ಜೆಡಿಎಸ್
ಇವತ್ತು ದಿಢೀರನೆ ವಿಜಯೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರಿಂದ ಅಭಿಮಾನಿಗಳ ಸುನಾಮಿಯೇ ಸೃಷ್ಟಿ ಆಯ್ತು… ಉಚಿತ ಪ್ರವೇಶ ಆಗಿದ್ದರಿಂದ ಕ್ರೀಡಾಂಗಣಕ್ಕೆ ಫ್ಯಾನ್ಸ್ ಹರಿದುಬಂದಿತ್ತು. ಗೇಟ್ ನಂಬರ್ 18, 19, 20ರ ಬಳಿ ಅಭಿಮಾನಿ ಸಾಗರ ತಡೆಯಲು ಪೊಲೀಸರು ಹೈರಾಣಾಗಿ ಹೋದರು. ಒಂದು ಹಂತದಲ್ಲಿ ಲಾಠಿಯನ್ನೂ ಬೀಸಿದರು. ಕ್ಷಣ ಕ್ಷಣಕ್ಕೂ ಆರ್ಸಿಬಿ ಅಭಿಮಾನಿಗಳ ಸುನಾಮಿ ಹೆಚ್ಚುತ್ತಲೇ ಇತ್ತು. ಆದರೆ, ಗೇಟ್ ನಂ.12ರ ಬಳಿ ಗೇಟ್ ತೆಗೆಯುತ್ತಿದ್ದಂತೆಯೇ ಭಾರೀ ಪ್ರಮಾಣದಲ್ಲಿ ನೂಕು ನುಗ್ಗಲು ನಡೀತು. ಒಬ್ಬರ ಮೇಲೋಬ್ಬರು ಬಿದ್ದರು, ಉಸಿರಾಡೋಕೂ ಕೂಡ ಸಾಧ್ಯವಾಗಲಿಲ್ಲ. ತಕ್ಷಣವೇ ಹತ್ತಿರದ ಬೌರಿಂಗ್ ಆಸ್ಪತ್ರೆ, ವೈದೇಹಿ ಆಸ್ಪತ್ರೆ (ಮಲ್ಯ ರಸ್ತ್ರೆ), ಮಣಿಪಾಲ್ಗೆ ದಾಖಲಿಸಲಾಯಿತು. ಆದರೆ, ಬೌರಿಂಗ್ ಆಸ್ಪತ್ರೆಯಲ್ಲಿ 6, ವೈದೇಹಿ ಆಸ್ಪತ್ರೆಯಲ್ಲಿ 4 ಹಾಗೂ ಮಣಿಪಾಲ ಆಸ್ಪತ್ರೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.