ಮುಂಬೈ: ಪೋಷಕರನ್ನು ಕಳೆದುಕೊಂಡ ಪಿಯೋನ್‍ಗೆ ಶಾಲಾ ಸಿಬ್ಬಂದಿಯೇ ಮದುವೆ ಮಾಡಿಸುವ ಮೂಲಕ ಎಲ್ಲರಿಗೂ ಮಾದರಿ ಆಗಿದೆ.
ಅಂಕುಶ್ ಶಾಲಾ ಆವರಣದಲ್ಲಿ ಪ್ರತಿಭಾ ಅಡ್ಗಾಲೆ ಅವರನ್ನು ಸರಳವಾಗಿ ಮದುವೆ ಆಗಿದ್ದಾರೆ. ಅಂಕುಶ್ ಬೋಸ್ಲೆ ಪುಣೆಯ ಎಸ್‍ವಿಎಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಎರಡು ವರ್ಷದಿಂದ ಪಿಯೋನ್ ಆಗಿ ಕೆಲಸ ಮಾಡುತ್ತಿದ್ದಾರೆ. ಶಾಲಾ ಸಿಬ್ಬಂದಿ ಹಣ ಸಂಗ್ರಹಿಸಿ ಅಂಕುಶ್ ಮದುವೆ ಮಾಡಿಸಿದ್ದಾರೆ.
ನನ್ನ ತಾಯಿ ಕಳೆದ 8 ತಿಂಗಳ ಹಿಂದೆ ಬ್ಲಡ್ ಕ್ಯಾನ್ಸರ್ ನಿಂದ ಮೃತಪಟ್ಟಿದ್ದರು. ಅವರು ಸಾವನ್ನಪ್ಪುವ ಮೊದಲು ನನಗೆ ಮದುವೆ ಮಾಡಿಕೋ ಎಂದು ಹೇಳುತ್ತಿದ್ದರು. ನಾನು ಬಿಟ್ಟರೆ ನನ್ನ ಮಗನನ್ನು ನೋಡಿಕೊಳ್ಳಲು ಯಾರೂ ಇಲ್ಲ ಎಂದು ನನ್ನ ತಾಯಿ ಯೋಚಿಸುತ್ತಿದ್ದರು. ಆದರೆ ನನ್ನ ತಾಯಿಗೆ ಚಿಕಿತ್ಸೆಗೆ ಖರ್ಚು ಮಾಡುತ್ತಿದ್ದರಿಂದ ಮದುವೆ ಆಗಲು ಸಾಧ್ಯವಾಗಲಿಲ್ಲ ಎಂದು ಅಂಕುಶ್ ಹೇಳಿದ್ದಾರೆ.
ನನ್ನ ತಂದೆ ಐದು ವರ್ಷದ ಹಿಂದೆ ಮರಣ ಹೊಂದಿದ್ದರು. ನನಗೆ ಮೂವರು ಸಹೋದರಿಯರಿದ್ದು, ಮೂವರಿಗೂ ಈಗಾಗಲೇ ಮದುವೆ ಆಗಿದೆ. ನಾನು ಮದುವೆ ಆಗುತ್ತೇನೆ ಎಂದುಕೊಂಡಿರಲಿಲ್ಲ. ಆದರೆ ಈಗ ಶಾಲಾ ಸಿಬ್ಬಂದಿ ಹಾಗೂ ಶಿಕ್ಷಕರು ಹಣ ಸಂಗ್ರಹಿಸಿ ನನಗೆ ಮದುವೆ ಮಾಡಿಸಿದ್ದಾರೆ ಎಂದು ಅಂಕುಶ್ ತಿಳಿಸಿದ್ದಾರೆ.
ಅಂಕುಶ್ ಮದುವೆಯಲ್ಲಿ 300ರಿಂದ 400ಕ್ಕೂ ಹೆಚ್ಚು ಅತಿಥಿಗಳು ಬಂದಿದ್ದು, ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಮದುವೆಗೆ ಬಂದ ಅತಿಥಿಗಳಲ್ಲಿ ಶಾಲೆಯ ನಿವೃತ್ತ ಶಿಕ್ಷಕರು ಹಾಗೂ ಮಾಜಿ ಪ್ರಾಂಶುಪಾಲರು ಭಾಗಿಯಾಗಿದ್ದರು.