ವಿಜಯಪುರ: ಕಳೆದ ರಾತ್ರಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ತುಂಬು ಗರ್ಭಿಣಿಗೆ ಆಸ್ಪತ್ರೆಗೆ ರವಾನಿಸುತ್ತಿದ್ದ ವೇಳೆ 108 ವಾಹನದಲ್ಲಿಯೇ ಸಿಬ್ಬಂದಿ ಹೆರಿಗೆ ಮಾಡಿಸಿ ತಾಯಿ, ಮಗುವಿನ ಜೀವ ಉಳಿಸಿದ್ದಾರೆ.
ವಿಜಯಪುರ ತಾಲೂಕಿನ ಹಡಗಲಿ ಗ್ರಾಮದ ಬಳಿ 108 ಅಂಬುಲೆನ್ಸ್ ಸಿಬ್ಬಂದಿ ಗರ್ಭಿಣಿಗೆ ಹೆರಿಗೆ ಮಾಡಿಸಿದ್ದಾರೆ. ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಕಣಮೇಶ್ವರ ಗ್ರಾಮದ ನಿವಾಸಿ ದಿಲಶಾದ್ ಇಸ್ಮಾಯಿಲ್ ಹಚಡದ ಅವರಿಗೆ ಸಿಬ್ಬಂದಿ ಹೆರಿಗೆ ಮಾಡಿಸಿದ್ದು, ಗಂಡು ಮಗು ಜನನವಾಗಿದೆ. ಬಳಿಕ ಸಿಬ್ಬಂದಿ ತಾಯಿ-ಮಗುವನ್ನು ಸುರಕ್ಷಿತವಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹೆರಿಗೆ ನೋವಿನಿಂದ ದಿಲಶಾದ್ ಅವರು ಯಂಕಂಚಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಗಮಿಸಿದ್ದರು. ದಿಲಶಾದ್ ಅವರಿಗೆ ಮೊದಲನೇ ಹೆರಿಗೆ ಸಿಸೇರಿಯನ್ ಆಗಿತ್ತು, ಹೀಗಾಗಿ ಎರಡನೇ ಹೆರಿಗೆ ನಾರ್ಮಲ್ ಡೆಲಿವರಿ ಆಗುವುದು ಕಷ್ಟವೆಂದು ವೈದ್ಯರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಎಂದು ಸೂಚಿಸಿದ್ದರು. ಆದ್ದರಿಂದ 108 ಅಂಬುಲೆನ್ಸ್ ನಲ್ಲಿ ಮಹಿಳೆಯನ್ನು ಜಿಲ್ಲಾಸ್ಪತ್ರಗೆ ಕೊಂಡೊಯ್ಯಲಾಗುತ್ತಿತ್ತು. ಈ ವೇಳೆ ಮಾರ್ಗ ಮಧ್ಯದಲ್ಲಿಯೇ ದಿಲಶಾದ್ ಅವರಿಗೆ ಹೆರಿಗೆ ನೋವು ತೀವ್ರವಾಗಿದ್ದು, ಸರಿಯಾದ ಸಮಯಕ್ಕೆ 108 ಎಮರ್ಜೆನ್ಸಿ ಮೆಡಿಕಲ್ ಟೆಕ್ನಿಶಿಯನ್ ಶೋಭಾ ಕೋಳಿ ಹಾಗೂ 108 ಚಾಲಕ ಬಾವುರಾಜ ಮಂಗಳವೆಡೆ ಅವರು ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ.
ಬಳಿಕ ಸುರಕ್ಷಿತವಾಗಿ ತಾಯಿ-ಮಗುವನ್ನು ಜಿಲ್ಲಾಸ್ಪತ್ರಗೆ ದಾಖಲಿಸಿದ್ದಾರೆ. ಸಿಬ್ಬಂದಿ ಸರಿಯಾದ ಸಮಯಕ್ಕೆ ಸಹಾಯ ಮಾಡಿ ಎರಡು ಜೀವಗಳನ್ನು ಉಳಿಸಿದ್ದಕ್ಕೆ ದಿಲಶಾದ್ ಹಾಗೂ ಅವರ ಕುಟುಂಬಸ್ಥರು ಧನ್ಯವಾದ ಹೇಳಿದ್ದಾರೆ.