ಬೆಂಗಳೂರು: ಕೆಲವರು ಮಗನಿಗೆ, ಸೊಸೆಗೆ ಮಾತ್ರ ರಾಜಕೀಯ ಅವಕಾಶ ಕೊಡುತ್ತಾರೆ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಎಲ್ಲ ಜಾತಿ, ಸಮುದಾಯದವರನ್ನು ರಾಜಕೀಯವಾಗಿ ಬೆಳೆಸಿದ್ದಾರೆ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಅವರು, ಪರೋಕ್ಷವಾಗಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ನಗರದ ನೈಸ್ ರಸ್ತೆಯ ಸೋಂಪುರ ಗೇಟ್ ಸಮೀಪದ ಜಟ್ಟಿಗರಹಳ್ಳಿಯಲ್ಲಿ ನಡೆದ ನೂತನ ಕನಕ ಸಮುದಾಯ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಇನ್ನೂ 5 ವರ್ಷ ಅಧಿಕಾರದಲ್ಲಿ ಇದ್ದಿದ್ದರೆ ಬೆಂಗಳೂರು ಮತ್ತಷ್ಟು ಅಭಿವೃದ್ಧಿ ಆಗುತಿತ್ತು. ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು 7 ತಿಂಗಳು ಕಳೆದರೂ ರಸ್ತೆ ಅಭಿವೃದ್ಧಿ ಆಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.
Advertisement
Advertisement
ಸಿದ್ದರಾಮಯ್ಯ ಅವರು ನನ್ನನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷನನ್ನಾಗಿ ಮಾಡಿದರು. ಸಮ್ಮಿಶ್ರ ಸರ್ಕಾರದಲ್ಲಿ ಒಂದು ಮಾತು ಹೇಳಿದರೂ ಹೆಚ್ಚು ಕಡಿಮೆ ಆಗುತ್ತದೆ. ಸಿದ್ದರಾಮಯ್ಯ ಅವರು 5 ವರ್ಷ ಸಿಎಂ ಆಗಿದ್ದರೂ ಕಳೆದ ವಿಧಾನಸಭಾ ಚುನಾವಣೆ ವೇಳೆ ಸಾಲಮಾಡಿ ಸ್ಪರ್ಧಿಸಿದರು. ಆದರೆ ಅವರ ವಿರುದ್ಧವೇ ಒಳಸಂಚು ರೂಪಿಸಿ ಪ್ರತಿಸ್ಪರ್ಧಿ ಅಭ್ಯರ್ಥಿ ಹಾಕಿದರು ಎಂದು ಹೆಸರು ಹೇಳದೇ ಜೆಡಿಎಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Advertisement
ನಮಗೆ ಸಿದ್ದರಾಮಯ್ಯ ಅವರೇ ನಮ್ಮ ಮುಖ್ಯಮಂತ್ರಿ. ನಮ್ಮ ಕಷ್ಟಗಳು ಏನೇ ಇದ್ದರೂ ನಾವು ಅವರ ಬಳಿಯೇ ಹೇಳಿಕೊಳ್ಳುತ್ತೇವೆ. ನಾನು ಮೂರು ಬಾರಿ ಶಾಸಕನಾಗಲು ಸಿದ್ದರಾಮಯ್ಯ ಅವರೇ ಕಾರಣ. ಅವರು ನಿಜವಾದ ಮಣ್ಣಿನ ಮಗ. ಯಾರು ಏನೇ ಹೇಳಿದರೂ ಶಾಸಕ ಸುಧಾಕರ್ ಹೇಳಿದ್ದಂತೆ ನಮಗೆ ಸಿದ್ದರಾಮಯ್ಯ ಅವರೇ ಸಿಎಂ ಎಂದು ಹಿಂದುಳಿದ ಕಲ್ಯಾಣ ಇಲಾಖೆ ಸಚಿವ ಪುಟ್ಟರಂಗ ಶೆಟ್ಟಿ ಹೇಳಿದರು.
Advertisement
ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಹಿಂದುಳಿದ ವರ್ಗದವರಿಗೆ ದೇವರಾಜು ಅರಸ್ ಬಳಿಕ ಸಿದ್ದರಾಮಯ್ಯ ಅವರು ಸಿಕ್ಕಿದ್ದಾರೆ. ನಿರ್ಲಕ್ಷ್ಯಕ್ಕೆ ಒಳಗಾದ ಸಮುದಾಯದ ಧ್ವನಿಯಾದರು. ಸಿದ್ದರಾಮಯ್ಯ ಹಸು ಇದ್ದಂತೆ. ಹಸು ತನ್ನ ಹಾಲು ತಾನೇ ಕುಡಿಯಲ್ಲ. ಹಾಗೇ ಸಿದ್ದರಾಮಯ್ಯ ಯಾವಾಗಲೂ ಪರೋಪಕಾರಿ. ಅವರು ಮತ್ತೆ ಸಿಎಂ ಆಗಬೇಕು ಎಂದರು.
ನಾಡಿನ ಜನರಿಗೆ ಸಿದ್ದರಾಮಯ್ಯ ಕೊಟ್ಟ ಯೋಜನೆ ಪೂರ್ಣವಾಗಬೇಕು. ಅವರು ಘೋಷಿಸಿದ ಅನುದಾನ ಈವರೆಗೂ ಬಿಡುಗಡೆ ಆಗಿಲ್ಲ. ಸಿಎಂ ಕುಮಾರಸ್ವಾಮಿ ಅವರು ನಿರ್ದೇಶನ ನೀಡುವ ಮೂಲಕ ಅನುದಾನ ಬಿಡುಗಡೆಗೆ ಶ್ರಮಿಸಲಿ ಎಂದು ಈಶ್ವರಾನಂದಪುರಿ ಸ್ವಾಮೀಜಿ ಮನವಿ ಸಲ್ಲಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv