ಡಿಸಿಎಂ ಸ್ಥಾನ ತಪ್ಪಿಸಲು ಯತ್ನಿಸಿದ್ರು- ಪರಮೇಶ್ವರ್ ಪರ ಅನರ್ಹ ಶಾಸಕ ಸೋಮಶೇಖರ್ ಬ್ಯಾಟಿಂಗ್

Public TV
2 Min Read
ST Somashekar

ಬೆಂಗಳೂರು: ಮಾಜಿ ಡಿಸಿಎಂ ಪರಮೇಶ್ವರ್ ಅವರಿಗೆ ಮೈತ್ರಿ ಸರ್ಕಾರದಲ್ಲಿ ಡಿಸಿಎಂ ಸ್ಥಾನ ತಪ್ಪಿಸಲು ಯತ್ನಿಸಿದ್ದರು ಎಂದು ಅನರ್ಹ ಶಾಸಕ ಸೋಮಶೇಖರ್ ಅವರು ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ಅವರನ್ನು ಬಿಟ್ಟು ಕಾಂಗ್ರೆಸ್ ಪಕ್ಷ ಕಟ್ಟಲು ಆಗಲ್ಲ. ಯಾರಾದರೂ ಪರಮೇಶ್ವರ್ ಅವರನ್ನು ಬಿಟ್ಟು ಪಕ್ಷ ಕಟ್ಟುತ್ತೇವೆ ಎಂದರೆ ಅದು ಸುಳ್ಳು. ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ಒಂದೇ ನಾಣ್ಯದ ಎರಡು ಮುಖಗಳು. ಸುಮ್ಮನೆ ಕೆಲವರು ಅವರನ್ನು ಹಾವು, ಮುಂಗುಸಿ ಎಂದು ಬಿಂಬಿಸುತ್ತಿದ್ದಾರೆ. ಡಿಸಿಎಂ ಸ್ಥಾನ ತಪ್ಪಿಸಲು ಕೂಡ ಪ್ರಯತ್ನ ನಡೆಸಿದ್ದರು. ಅದು ಸಾಧ್ಯವಾಗಲಿಲ್ಲ, ಈ ಕುರಿತು ಸೂಕ್ತ ಸಂದರ್ಭದಲ್ಲಿ ಬಹಿರಂಗ ಪಡಿಸುತ್ತೇವೆ ಎಂದರು.

Dr. Prameshwara 1

ಇದೇ ವೇಳೆ ಮಧ್ಯಂತರ ಚುನಾವಣೆ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಎಚ್‍ಡಿ ದೇವೇಗೌಡ, ಸಿದ್ದರಾಮಯ್ಯ ಅವರು ಏನೇ ಹೇಳಲಿ. ಚುನಾವಣೆಯ ಕುರಿತು ಅಧಿಕೃತವಾಗಿ ಹೇಳುವುದು ಆಯೋಗ ಮಾತ್ರ. ಕಾಂಗ್ರೆಸ್ ನಾಯಕರಿಗೆ ಮಾಡಲು ಕೆಲಸ ಇಲ್ಲ. ಬೆಳಗ್ಗೆ ಎದ್ದ ಕ್ಷಣವೇ ನಮ್ಮದೇ ಚಿಂತೆ ಎಂದು ಕಿಡಿಕಾರಿದರು.

ಅಭಿವೃದ್ಧಿಗಾಗಿ ಭಿಕ್ಷೆ: ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಾವು ಕ್ಷೇತ್ರದ ಅಭಿವೃದ್ಧಿಗಾಗಿ ಭಿಕ್ಷೆ ಕೇಳುತ್ತಿದ್ದೇವೆ. ಹುಲಿ ಎಲ್ಲೇ ಇದ್ದರು ಹುಲಿಯೇ. ಅಶ್ವಥ್ ನಾರಾಯಣ್ ಹಾಗೂ ಯೋಗೇಶ್ವರ್ ಅವರಿಗೂ ನಮಗೂ ಯಾವುದೇ ಸಂಬಂಧವಿಲ್ಲ, ನಮ್ಮ ಪ್ರಕರಣ ಸದ್ಯದಲ್ಲೇ ನ್ಯಾಯಾಲಯದಲ್ಲಿ ವಿಚಾರಣೆಗೆ ಬರುತ್ತೆ. ನಮ್ಮ ಪರ ತೀರ್ಪು ಬರುವ ವಿಶ್ವಾಸವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

siddaramaiah

ನಾವು ಕಾಂಗ್ರೆಸ್ ನಾಯಕರಿಗೆ ಸಚಿವರಾಗುತ್ತೇವೆ ಎಂದು ಹೇಳಿಲ್ಲ. ಅಲ್ಲದೇ ನಾವು ಯಾರು ಬಿಜೆಪಿಗೆ ಸೇರ್ಪಡೆಯಾಗುತ್ತೇವೆ ಎಂದು ಹೇಳಿಲ್ಲ. ನ್ಯಾಯಾಲಯದ ವಿಚಾರಣೆ ನಡೆದ ಬಳಿಕ ಏನಾಗುತ್ತದೆ ತೀರ್ಮಾನ ಮಾಡುತ್ತೇವೆ. ಚುನಾವಣೆ ಬಗ್ಗೆ ಈಗಾಗಲೇ ಆಯೋಗಕ್ಕೂ ಪತ್ರ ಬರೆದಿದ್ದೇವೆ. ಆದರೆ ಕಾಂಗ್ರೆಸ್ ನಾಯಕರಿಗೆ ಹೇಳಲು ಬೇರೆ ಏನು ಇಲ್ಲದ ಕಾರಣ ಮಧ್ಯಂತರ ಚುನಾವಣೆ ಬಗ್ಗೆ ಹೇಳಿಕೆ ನೀಡುತ್ತಾರೆ ಅಷ್ಟೇ. ಅವರಿಗೆ ಅನರ್ಹ ಶಾಸಕರ ಕ್ಷೇತ್ರದಲ್ಲಿ ಚುನಾವಣೆಯದ್ದೆ ಬಹುದೊಡ್ಡ ಚಿಂತೆಯಾಗಿದೆ ಎಂದರು. ಅಲ್ಲದೇ ನಾವು ಕಾಂಗ್ರೆಸ್ ಪಕ್ಷವನ್ನ ಕ್ಷೇತ್ರದಲ್ಲಿ ಕಟ್ಟಿ ಬೆಳೆಸಿದ್ದೇವೆ, ನಮ್ಮನ್ನು ಉಚ್ಛಾಟನೆ ಮಾಡಲು ಆಗಲ್ಲ. ಇನ್ನೂ ಮೂರು ವರ್ಷ ಶಾಸಕರಾಗಿ ಇರಬೇಕು ಎಂದೇ ನ್ಯಾಯಾಲಯಕ್ಕೆ ಹೋಗಿದ್ದೇವೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *