ಬೆಂಗಳೂರು: ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಟಾಪರ್ ಆಗಿದ್ದ ಹುಡುಗ ಇಂದು ಸ್ಯಾಂಡಲ್ ವುಡ್ ನ ಟಾಪ್ ಖಳನಟನಾಗಿ ಮಿಂಚುತ್ತಿದ್ದಾರೆ.
ಟಗರು ಸಿನಿಮಾದ ಯಶಸ್ವಿನ ಗುಂಗಿನಲ್ಲಿರುವ, ಚಿತ್ರದ ಡಾಲಿ ಪಾತ್ರದ ಮೂಲಕವೇ ಧನಂಜಯ್ ಗುರುತಿಸಿಕೊಳ್ಳುತ್ತಿದ್ದಾರೆ. ನಟ ಧನಂಜಯ್ ಅಂದು ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದರು. ಇಂದು ಟಗರು ಸಿನಿಮಾದಲ್ಲಿ ಡಾಲಿ ಪಾತ್ರದಲ್ಲಿ ರೌಡಿಯಾಗಿ ಮಿಂಚಿದ್ದಾರೆ.
ಅರಸೀಕೆರೆ ತಾಲೂಕಿನ ಸೆಂಟ್ ಮೇರಿಸ್ ಪ್ರೌಢಶಾಲೆಯಲ್ಲಿ ಧನಂಜಯ್ ಓದಿದ್ದರು. ಅಂದು ಧನಂಜಯ್ ಎಸ್‍ಎಸ್‍ಎಲ್‍ಸಿ ಬೋರ್ಡ್ ಪರೀಕ್ಷೆಯಲ್ಲಿ 95.32% ಅಂಕಗಳನ್ನು ಪಡೆದುಕೊಂಡು ಟಾಪರ್ ಆಗಿದ್ದರು. ಟಾಪರ್ ಆಗಿದ್ದರಿಂದ ಧನಂಜಯ್ ಅವರ ಫೋಟೋ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಡೈರೆಕ್ಟರ್ ಸ್ಪೆಷಲ್, ಬಾಕ್ಸ್ ರ್, ರಾಟೆ ಮತ್ತು 2016 ರಲ್ಲಿ ಬಿಡುಗಡೆಗೊಂಡ ಪವನ್ ಒಡೆಯರ್ ನಿರ್ದೇಶನದ `ಜೆಸ್ಸಿ’ ಸಿನಿಮಾದಲ್ಲಿ ಹೀರೋ ಆಗಿ ಅಭಿನಯಿಸಿದ್ದಾರೆ.
ಇಲ್ಲಿಯವರೆಗೆ ಹೀರೋ ಪಾತ್ರ ಮಾಡುತ್ತಿದ್ದ ನಟ ಧನಂಜಯ್ ಸೂರಿ ನಿರ್ದೇಶನದ ಟಗರು ಸಿನಿಮಾದಲ್ಲಿ ಮೊದಲ ಬಾರಿಗೆ ವಿಲನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ನನ್ನ ವೃತ್ತಿ ಜೀವನದಲ್ಲಿ ಇದು ಹೊಸ ಆರಂಭವಾಗಿದೆ. ನಾನು ಎಲ್ಲೇ ಹೋದರೂ ಇದೀಗ ಡಾಲಿ ಅಂತಲೇ ಅಭಿಮಾನಿಗಳು ಕರೆಯುತ್ತಿದ್ದಾರೆ. ಅಭಿಮಾನಿಗಳ ರೆಸ್ಪಾನ್ಸ್ ಗೆ ಸಖತ್ ಖುಷಿಯಾಗುತ್ತಿದೆ. ಅಲ್ಲದೇ ಶಿವಣ್ಣನ ಜೊತೆ ನಟನೆ ಮಾಡಿರೋದು ತುಂಬಾ ಸಂತಸ ನೀಡಿದೆ ಎಂದು ಎಂದು ಧನಂಜಯ್ ಹೇಳಿದ್ದರು.
ಟಗರಿನ ಡಾಲಿ ನಂತರ ದರ್ಶನ್ ಅವರ ಮುಂದಿನ ಚಿತ್ರ ಯಜಮಾನದಲ್ಲಿ ಕೂಡ ಧನಂಜಯ್ ನೆಗೆಟಿವ್ ಪಾತ್ರ ಮಾಡುತ್ತಿದ್ದಾರೆ. ಇದು ಮತ್ತೊಂದು ಕುತೂಹಲಕಾರಿ ಪಾತ್ರವಾಗಿದ್ದು ದರ್ಶನ್ ಅವರ ಜೊತೆ ಮತ್ತೊಮ್ಮೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ.