Bengaluru City
ಆಕಾಶವಾಣಿಯಲ್ಲಿ SSLC ಪರೀಕ್ಷಾ ಸಿದ್ಧತೆ ಕಾರ್ಯಕ್ರಮ

ಬೆಂಗಳೂರು: ಮಾರ್ಚ್ ಕೊನೆಯ ವಾರ-ಏಪ್ರಿಲ್ ಮೊದಲ ವಾರದಲ್ಲಿ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗಳು ನಡೆಯಲಿವೆ. ಮಕ್ಕಳಿಗೆ ಪರೀಕ್ಷಾ ಸಿದ್ಧತೆಯ ಮಾಹಿತಿ ನೀಡಲು ಎಸ್‍ಎಸ್‍ಎಲ್‍ಸಿ ಬೋರ್ಡ್ ಹೊಸ ಪ್ರಯತ್ನಕ್ಕೆ ಕೈಹಾಕಿದೆ. ಪ್ರತಿದಿನ ಆಕಾಶವಾಣಿಯಲ್ಲಿ ಪರೀಕ್ಷಾ ಸಿದ್ಧತೆ ಬಗ್ಗೆ ಕಾರ್ಯಕ್ರಮ ನಡೆಸುತ್ತಿದೆ. ಕಾರ್ಯಕ್ರಮ ಇಂದಿನಿಂದ ಪ್ರಾರಂಭವಾಗಿದ್ದು, ಶಿಕ್ಷಣ ಸಚಿವ ಸುರೇಶ್ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇಂದಿನಿಂದ ಮಾರ್ಚ್ 24 ವರೆಗೆ ಈ ಕಾರ್ಯಕ್ರಮ ನಡೆಯಲಿದೆ. ಆಕಾಶವಾಣಿಯಲ್ಲಿ ಪ್ರತಿದಿನ ಮಧ್ಯಾಹ್ನ 2:35 ರಿಂದ 3 ಗಂಟೆಯವರೆಗೆ ಕಾರ್ಯಕ್ರಮ ಪ್ರಸಾರವಾಗಲಿದೆ. ರಾಜ್ಯದ 13 ಆಕಾಶವಾಣಿ ಕೇಂದ್ರಗಳಲ್ಲಿ ಏಕಕಾಲದಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ. ರಾಜ್ಯದ ನುರಿತ ಶಿಕ್ಷಕರು, ಶಿಕ್ಷಣ ತಜ್ಞರು, ಮಾನಸಿಕ ತಜ್ಞರು, ವೈದ್ಯರು, ಸಚಿವರು ಇಲಾಖೆ ಅಧಿಕಾರಿಗಳು ಪರೀಕ್ಷೆಯ ವಿವಿಧ ಆಯಾಮದ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಇಂದಿನಿಂದ (ಮಧ್ಯಾಹ್ನ 2.30 ಗಂಟೆಯಿಂದ) ಶಿಕ್ಷಣ ಇಲಾಖೆ ಮತ್ತು ಆಕಾಶವಾಣಿಯ ಸಹಯೋಗದೊಂದಿಗೆ ಎಸ್ಎಸ್ಎಲ್ ಸಿ ಮಕ್ಕಳಿಗೆ ಮಾರ್ಗದರ್ಶನ ಕಾರ್ಯಕ್ರಮ ಪ್ರಾರಂಭವಾಗುತ್ತವೆ.
ಎಲ್ಲ ಮಕ್ಕಳೂ ಇದರ ಪ್ರಯೋಜನ ಪಡೆಯಲಿ. pic.twitter.com/dvRn5571bX
— S.Suresh Kumar, Minister – Govt of Karnataka (@nimmasuresh) March 2, 2020
ಆಕಾಶವಾಣಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮ ಸಂಜೆ 5:30 ಕ್ಕೆ ಬೆಂಗಳೂರಿನ ಎಫ್‍ಎಂ ರೇನ್ ಬೋ 101.3 ರಲ್ಲಿ ಮರು ಪ್ರಸಾರವಾಗಲಿದೆ. ಅಲ್ಲದೆ ವಿಶ್ವದಾದ್ಯಂತ ಮಧ್ಯಾಹ್ನ 2:35 ಕ್ಕೆ ಪ್ರಸಾರವಾಗಲಿದೆ. ಇದಲ್ಲದೆ NEWS on AIR ಆಪ್ ನಲ್ಲೂ ಮತ್ತು DTHನಲ್ಲೂ ಪ್ರಸಾರವಾಗಲಿದೆ. ಕನ್ನಡ, ಇಂಗ್ಲಿಷ್, ಗಣಿತ, ವಿಜ್ಞಾನ ವಿಷಯ, ಸಮಾಜ ವಿಜ್ಞಾನ ಸೇರಿದಂತೆ ಎಲ್ಲಾ ವಿಷಯಗಳ ಸಮಸ್ಯೆ, ಪರೀಕ್ಷಾ ಸಮಯ ನಿರ್ವಹಣೆ ಕುರಿತು ಮಾಹಿತಿ ಸೇರಿದಂತೆ ಅನೇಕ ವಿಷಯಗಳ ಮಾಹಿತಿ ಲಭ್ಯವಾಗಲಿದೆ.
