ಮಂಗಳೂರು: ನ್ಯಾಶನಲ್ ಲೆವಲ್ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿದ್ದ ವಿದ್ಯಾರ್ಥಿನಿಯೊಬ್ಬಳು ಮಂಗಳೂರಿನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದು, ಇದು ಕೊಲೆ ಅಂತ ಈಗ ಪೋಷಕರು ಆರೋಪಿಸಿದ್ದಾರೆ.
ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿನಿಯಾಗಿದ್ದ ಕಾವ್ಯ(15) ಜುಲೈ 20ರಂದು ಹಾಸ್ಟೆಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಶಾಲೆಯಿಂದ ತಿಳಿಸಲಾಗಿತ್ತು. ಆದರೆ ಹೆತ್ತವರು ಅಲ್ಲಿಗೆ ತೆರಳುವಷ್ಟರಲ್ಲಿ ವಿದ್ಯಾರ್ಥಿನಿಯ ಶವವನ್ನು ಆಳ್ವಾಸ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು.
ಇದೀಗ ಹೆತ್ತವರು ಕಾವ್ಯ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ಪ್ರಕರಣವನ್ನು ಮುಚ್ಚಿ ಹಾಕಲು ಸಂಸ್ಥೆಯ ಆಡಳಿತ ಮಂಡಳಿ ಪ್ರಯತ್ನಿಸುತ್ತಿದೆ. ನಮ್ಮ ಹುಡುಗಿ ಕ್ರೀಡಾಪಟುವಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳುವಂಥವಳಲ್ಲ. ಆಕೆಯನ್ನು ಶಾಲೆಯವರೇ ಕಿರುಕುಳ ಕೊಟ್ಟು ಕೊಲೆಗೈದಿರುವ ಸಂಶಯ ಇದೆ ಎಂದು ವಿದ್ಯಾರ್ಥಿನಿಯ ತಾಯಿ ಬೇಬಿ ಆರೋಪಿಸಿದ್ದಾರೆ.
ಘಟನೆ ನಡೆದ ರಾತ್ರಿ ಎಂಟು ಗಂಟೆಗೆ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಾಲೆಯ ದೈಹಿಕ ಶಿಕ್ಷಕರು ತಿಳಿಸಿದ್ದಾರೆ. ಆದರೆ ನಾವು ಅಲ್ಲಿಗೆ ತಲುಪುವ ಮುನ್ನವೇ ಶವವನ್ನು ಶವಾಗಾರದಲ್ಲಿರಿಸಿದ್ದಲ್ಲದೆ ತಮಗೆ ಸರಿಯಾಗಿ ನೋಡುವುದಕ್ಕೂ ಅವಕಾಶ ಮಾಡಿಲ್ಲ. ಹೀಗಾಗಿ ನಮ್ಮ ಹುಡುಗಿ ಹೇಗೆ ಸಾವನ್ನಪ್ಪಿದ್ದಾಳೆ ಅನ್ನೋದು ಗೊತ್ತಾಗಬೇಕು. ಪೊಲೀಸರು ಸೂಕ್ತ ತನಿಖೆ ನಡೆಸಿ ನ್ಯಾಯ ದೊರಕಿಸಬೇಕೆಂದು ಪೊಲೀಸ್ ಆಯುಕ್ತರಿಗೆ ಪೋಷಕರು ದೂರು ನೀಡಿದ್ದಾರೆ.
ಕಟೀಲು ಬಳಿಯ ದೇವರಗುಡ್ಡ ಎಂಬಲ್ಲಿನ ನಿವಾಸಿಗಳಾದ ಲೋಕೇಶ್ ಮತ್ತು ಬೇಬಿ ದಂಪತಿಯ ಏಕೈಕ ಪುತ್ರಿಯಾಗಿರುವ ಕಾವ್ಯ ಚಿಕ್ಕಂದಿನಿಂದಲೇ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿದ್ದಳು. ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿಯೂ ಪಾಲ್ಗೊಂಡಿದ್ದು ಕಟೀಲು ಶಾಲೆಗೆ ಕೀರ್ತಿ ತಂದಿದ್ದಳು. ಅದರಂತೆ ಆಳ್ವಾಸ್ ಹೈಸ್ಕೂಲಿನ ದೈಹಿಕ ಶಿಕ್ಷಕರೇ ಕಾವ್ಯಾ ಹೆತ್ತವರನ್ನು ಸಂಪರ್ಕಿಸಿ, ತಮ್ಮ ಶಾಲೆಗೆ ಕಳಿಸಿಕೊಡಿ ಕ್ರೀಡಾ ಕೋಟಾದಲ್ಲಿ ಉಚಿತವಾಗಿ ಶಿಕ್ಷಣ ಕೊಡಿಸುತ್ತೇವೆಂದು ಹೇಳಿ ಕರೆಸಿಕೊಂಡಿದ್ದರು.
ಇದೇ ಜುಲೈ ಆರಂಭದಲ್ಲಿ ಕಟೀಲು ಶಾಲೆಯಿಂದ ಆಳ್ವಾಸ್ ಹೈಸ್ಕೂಲು ಸೇರಿದ್ದ ಕಾವ್ಯಾ ಇದೀಗ ನಿಗೂಢವಾಗಿ ಸಾವನ್ನಪ್ಪಿರುವುದು ಹೆತ್ತವರನ್ನು ಆತಂಕಕ್ಕೀಡುಮಾಡಿದೆ.
ಒಂದು ಸಾವು, ಹಲವು ಪ್ರಶ್ನೆ:
1. ಹಾಸ್ಟೆಲ್‍ನೊಳಗೆ ನೇಣು ಹಾಕಲು ಸೀರೆ ಸಿಕ್ಕಿದ್ದು ಎಲ್ಲಿಂದ?
2. ಹೆತ್ತವರು ಬರುವ ಮೊದಲೇ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದು ಯಾಕೆ?
3. ಸತ್ತ ಸುದ್ದಿ ನೀಡಿದ ಅರ್ಧಗಂಟೆಯೊಳಗೆ ಹೆತ್ತವರು ತಲುಪಿದ್ದರೂ ಶವಾಗಾರದಲ್ಲಿ ಇರಿಸಿದ್ಯಾಕೆ?
4. ಮುಂಜಾನೆ 4 ಗಂಟೆಗೆ ದೈಹಿಕ ಶಿಕ್ಷಕ ತರಬೇತಿಗೆಂದು ಕರೆದದ್ದು ಯಾಕೆ?
5. ಸಾಯುವ ಮೊದಲ ದಿನ ಹೆತ್ತವರಲ್ಲಿ ಸಂತೋಷದಿಂದಲೇ ಮಾತನಾಡಿದ್ದಾಕೆ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?
6. ಟ್ರಾಕ್ ಸೂಟ್‍ನಲ್ಲೇ ಮೃತದೇಹ ಇದ್ದದ್ದು ಯಾಕೆ?