ಚಿಕ್ಕಬಳ್ಳಾಪುರ: ಪ್ರೀತಿ ಮಾಡಲು ನಿರಾಕರಿಸಿದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿನಿಯನ್ನ ಆಕೆಯ ಸಂಬಂಧಿಯೇ ನಡುರಸ್ತೆಯಲ್ಲಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಗಂಗಾಧರಪುರದಲ್ಲಿ ನಡೆದಿದೆ.
ನಗರದ ಬಿಎಸ್‍ಎ ಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿ ವ್ಯಾಸಂಗ ಮಾಡುತ್ತಿದ್ದ ಕೀರ್ತನಾ ಕೊಲೆಯಾದ ವಿದ್ಯಾರ್ಥಿನಿ. ಮೃತ ಕೀರ್ತನಾಳ ಸಂಬಂಧಿ ನವೀನ್ ಕೊಲೆ ಮಾಡಿದ್ದಾನೆ. ಅಸಲಿಗೆ ಮೃತ ಕೀರ್ತನಾ ಹಾಗೂ ನವೀನ್ ಸಂಬಂಧಿಗಳಾಗಿದ್ದು, ಕೀರ್ತನಾಗೆ 18 ವರ್ಷ ತುಂಬಿದ ನಂತರ ಇಬ್ಬರಿಗೂ ವಿವಾಹ ಮಾಡಬೇಕೆಂದು ಮನೆಯವರು ನಿರ್ಧರಿಸಿದ್ದರು.
ಆರೋಪಿ ನವೀನ್ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದನು. ಈತನನ್ನು ಮದುವೆಯಾಗಲು ವಿದ್ಯಾರ್ಥಿನಿ ಕೀರ್ತನಾಗೆ ಇಷ್ಟವಿರಲಿಲ್ಲ. ಹೀಗಾಗಿ ಮದುವೆ ವಿಷಯ ಪ್ರಸ್ತಾಪ ಮಾಡಿದಾಗ ತನಗೆ ಬೇಡ ಅಂತ ಹೇಳಿದ್ದಳು. ಆದರೂ ಅಪ್ರಾಪ್ತ ಬಾಲಕಿಯಾದ ಕಾರಣ ಇಂದಲ್ಲ ನಾಳೆ ಮನಸ್ಸು ಬದಲಾಯಿಸಿಕೊಳ್ಳುತ್ತಾಳೆ ಎಂದು ಮನೆಯವರೆಲ್ಲರೂ ಸುಮ್ಮನಾಗಿದ್ದರು ಎಂದು ತಿಳಿದು ಬಂದಿದೆ.
ಇತ್ತೀಚೆಗೆ ಕೀರ್ತನಾ ಬೇರೊಬ್ಬನ ಯುವಕನನ್ನು ಪ್ರೀತಿ ಮಾಡುತ್ತಿದ್ದಳಂತೆ. ಈ ವಿಷಯ ತಿಳಿದ ನವೀನ್ ತನ್ನನ್ನ ಪ್ರೀತಿ ಮಾಡುವಂತೆ ಕೀರ್ತನಾಳಿಗೆ ಪೀಡಿಸಿದ್ದಾನೆ. ಇದಕ್ಕೆ ಕೀರ್ತನಾ ಒಪ್ಪಲಿಲ್ಲ. ಇದರಿಂದ ಕೋಪಗೊಂಡ ನವೀನ್ ಇಂದು ಬೆಳಗ್ಗೆ ಶಾಲೆಗೆ ಹೋಗುತ್ತಿದ್ದ ಕೀರ್ತನಾಳನ್ನ ಹಿಂಬಾಲಿಸಿ ಮಚ್ಚಿನಿಂದ ಕುತ್ತಿಗೆಗೆ ಹೊಡೆದಿದ್ದಾನೆ. ಪರಿಣಾಮ ಕೀರ್ತನಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಕೊಲೆ ಮಾಡಿದ ಬಳಿಕ ನವೀನ್ ಮನೆಗೆ ತೆರಳಿ ವಿಷ ಸೇವಿಸಿದ್ದಾನೆ. ಹೀಗಾಗಿ ಅಸ್ವಸ್ಥಗೊಂಡಿರುವ ನವೀನ್ ನನ್ನ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ದೊಡ್ಡಬಳ್ಳಾಪುರ ನಗರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಸಂಬಂಧ ಹೇಗೆ..?
ಮೃತ ಕೀರ್ತನಾಳ ಅಕ್ಕನನ್ನು ಆರೋಪಿ ನವೀನ್ ತಮ್ಮ ಅರುಣ್ ಮದುವೆಯಾಗಿದ್ದನು. ಹೀಗಾಗಿ ಕೀರ್ತನಾಳಿಗೆ ನವೀನ್ ಬಾವನಾಗುತ್ತಾನೆ. ಇದರಿಂದ ನವೀನ್ ಗೆ ಕೀರ್ತನಾಳನ್ನ ಮದುವೆಯಾಗುವ ಆಸೆ ಇತ್ತು. ಇದಕ್ಕೆ ಕೆಲ ಬಾರಿ ಎರಡು ಕಡೆ ಪೋಷಕರು ಒಪ್ಪಿದ್ದರು. ಬಳಿಕ ಕೆಲವು ಬಾರಿ ನಿರಾಕರಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv