ಚಿಕ್ಕಬಳ್ಳಾಪುರ: ಕಳೆದ ಎರಡು ದಿನಗಳ ಹಿಂದೆ ಕಾಣೆಯಾಗಿದ್ದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿನಿ ತಡರಾತ್ರಿ ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ತುಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಹೊರವಲಯದ ರೈತರ ಜಮೀನಿನ ಕೃಷಿಹೊಂಡದಲ್ಲಿ 15 ವರ್ಷದ ವಿದ್ಯಾರ್ಥಿನಿ ಅಮೃತವರ್ಷಿಣಿ ಮೃತದೇಹ ಪತ್ತೆಯಾಗಿದೆ. ಜನವರಿ 15 ರಂದು ಅದೇ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿ ವ್ಯಾಸಂಗ ಮಾಡುತ್ತಿದ್ದ ಅಮೃತವರ್ಷಿಣಿ ಶಾಲೆಗೆ ತೆರಳಿದ್ದಳು. ಆದರೆ ಮಧ್ಯಾಹ್ನ ಕಿವಿ ನೋವು ಅಂತ ಮನೆಗೆ ವಾಪಸ್ಸಾಗಿದ್ದಳು. ಬಳಿಕ ಅಮೃತವರ್ಷಿಣಿ ಕಿವಿಗೆ ಡ್ರಾಪ್ಸ್ ಹಾಕಿಸಿಕೊಂಡು ಪುನಃ ಶಾಲೆಗೆ ಹೋಗುತ್ತೀನಿ ಎಂದು ಹೊರಟಿದ್ದಳು.
ಮಗಳು ಕಿವಿ ನೋವು ಅನ್ನುತ್ತಿದ್ದಳು ಎಂದು 2 ಗಂಟೆ ಸುಮಾರಿಗೆ ಪೋಷಕರು ಅಮೃತವರ್ಷಿಣಿಯನ್ನ ವಿಚಾರಿಸಲು ಶಾಲೆ ಬಳಿ ಹೋಗಿದ್ದಾರೆ. ಆದರೆ ಅಮೃತವರ್ಷಿಣಿ ಶಾಲೆಗೆ ಹೋಗಿರಲಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ. ಹೀಗಾಗಿ ಆತಂಕಗೊಂಡ ತಂದೆ-ತಾಯಿ ಗ್ರಾಮದ ಸುತ್ತ-ಮುತ್ತ ಹುಡುಕಾಡಿದ್ದಾರೆ. ಆದರೆ ಅಮೃತವರ್ಷಿಣಿ ಎಲ್ಲೂ ಪತ್ತೆಯಾಗಿರಲಿಲ್ಲ. ಶನಿವಾರ ತಡರಾತ್ರಿ ಕೃಷಿಹೊಂಡದಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ.
ಮೃತದೇಹದ ಮೇಲೆ ಕೆಲ ಗಾಯದ ಗುರುತುಗಳಿದ್ದು, ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಶಂಕೆ ಇದೆ ಅಂತ ಸಂಬಂಧಿಕರು ಹಾಗೂ ಗ್ರಾಮಸ್ಥರು ದೂರಿದ್ದಾರೆ. ಮತ್ತೊಂದೆಡೆ ಅಮೃತವರ್ಷಿಣಿ ಕಾಣೆಯಾದ ದಿನವೇ ಅದೇ ಗ್ರಾಮದ ಯುವಕ ಟಿ.ಎನ್ ಮುನಿರಾಜು ಅಪಹರಿಸಿದ್ದಾನೆ ಅಂತ ಅಮೃತವರ್ಷಿಣಿ ತಂದೆ ಟಿ.ಎಂ ಮುನಿರಾಜು ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರು.
ಯುವಕ ಮುನಿರಾಜು ಅಮೃತವರ್ಷಿಣಿಯನ್ನ ಪ್ರೀತಿಸುವಂತೆ ಪೀಡಿಸುತ್ತಿದ್ದನಂತೆ. ಹೀಗಾಗಿ ಮುನಿರಾಜುವಿನ ವಿರುದ್ಧವೇ ಅನುಮಾನವಿದೆ. ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಲಾಗಿದೆ. ತಡರಾತ್ರಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಶಿಡ್ಲಘಟ್ಟ ಸಿಪಿಐ ಆನಂದ್ ಹಾಗೂ ಸಿಬ್ಬಂದಿ ಮೃತದೇಹ ಹೊರ ತೆಗೆದು ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಆರೋಪಿತ ಯುವಕ ಮುನಿರಾಜು ಸಹ ನಾಪತ್ತೆಯಾಗಿರುವುದರಿಂದ ಅನುಮಾನ ಮೂಡಿದೆ. ಸದ್ಯಕ್ಕೆ ಪೊಲೀಸರು ಈ ಕುರಿತು ತನಿಖೆಯನ್ನು ಮುಂದುವರಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv