ಚಿಕ್ಕಬಳ್ಳಾಪುರ: ದೀಪಾವಳಿ ಹಬ್ಬದ ದಿನವೇ ಕೆರೆಗೆ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಶ್ರೀನಿವಾಸ ಸಾಗರ ಜಲಾಶಯದ ಬಳಿ ನಡೆದಿದೆ.
ಗೌರಿಬಿದನೂರು ತಾಲೂಕಿನ ಬಿಕ್ಕಲಹಳ್ಳಿ ಗ್ರಾಮದ ದಿವ್ಯ(15) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಮಂಚೇನಹಳ್ಳಿಯ ಸಂಯುಕ್ತ ಫ್ರೌಢಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ದಿವ್ಯ ಎಂದಿನಂತೆ ಶಾಲೆಗೆ ಹೋಗುವುದಾಗಿ ತಿಳಿಸಿ ಮನೆಯಿಂದ ಬಂದಿದ್ದಾಳೆ.
ಆದರೆ ಶಾಲೆಗೆ ಹೋಗಬೇಕಾದ ವಿದ್ಯಾರ್ಥಿನಿ ಶಾಲೆಗೆ ಹೋಗದೆ ಸೀದಾ ಶ್ರೀನಿವಾಸ ಸಾಗರ ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೆರೆಯ ಏರಿಯ ಮೇಲೆ ಸ್ಕೂಲ್ ಬ್ಯಾಗ್ ಸೇರಿದಂತೆ ಶೂ ಹಾಗೂ ಶೂನಲ್ಲಿ ತಾನು ಧರಿಸಿದ್ದ ಎರಡು ಬೆಳ್ಳಿ ಉಂಗುರಗಳು ಪತ್ತೆಯಾಗಿವೆ.
ವಿದ್ಯಾರ್ಥಿನಿಯ ಮೃತದೇಹ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಮೃತದೇಹವನ್ನು ಜಲಾಶಯದಿಂದ ಹೊರತೆಗೆದಿದ್ದಾರೆ. ಮೃತ ದಿವ್ಯ ತಂದೆ ರಾಮಪ್ಪ ಹಾಗೂ ಅಣ್ಣ ಘಟನಾ ಸ್ಥಳಕ್ಕೆ ಬಂದಿದ್ದು, ಮಗಳ ಆತ್ಮಹತ್ಯೆಗೆ ಕಾರಣ ಗೊತ್ತಿಲ್ಲ ಅಂದಿದ್ದಾರೆ.
ಸದ್ಯ ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv