ಹೈದರಾಬಾದ್: ವಿಡಿಯೋ ಗೇಮ್ ಪಬ್‍ಜಿಯಿಂದಾಗಿ 16 ವರ್ಷದ 10ನೇ ತರಗತಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‍ನ ಮಲ್ಕಾಜ್ ಗಿರಿಯಲ್ಲಿ ನಡೆದಿದೆ.
ಕಲ್ಲಕುರಿ ಸಾಂಬಶಿವ(16) ಆತ್ಮಹತ್ಯೆ ಮಾಡಿಕೊಂಡ ಹುಡುಗ. ಈತ ಪರೀಕ್ಷೆಯ ಸಮಯದಲ್ಲಿ ಓದಿಕೊಳ್ಳದೇ ಪಬ್‍ಜೀ ಆಟವನ್ನು ಆಡುತ್ತಿದ್ದನು. ಹೀಗಾಗಿ ಈತನ ತಂದೆ-ತಾಯಿಗಳು ಬೈದಿದ್ದಾರೆ. ಇದರಿಂದ ನೊಂದ ಸಾಂಬಶಿವ ತನ್ನ ಮನೆಯಲ್ಲಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸಾಂಬಶಿವ ಭಾರತ್ ರಾಜ್ ಮತ್ತು ಉಮಾದೇವಿಯವರ ಎರಡನೇ ಪುತ್ರನಾಗಿದ್ದು, ಮಲ್ಕಾಜ್ ಗಿರಿಯ ಖಾಸಗಿ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದನು. ಇವರು ವಿಷ್ಣುಪುರಿಯಲ್ಲಿ ವಾಸಿಸುತ್ತಿದ್ದರು. ಸಾಂಬಶಿವ ತಂದೆ ವೃತ್ತಿಯಲ್ಲಿ ಅರ್ಚಕರಾಗಿದ್ದರೆ, ತಾಯಿ ಗೃಹಿಣಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈಗ 10ನೇ ತರಗತಿಯ ಪರೀಕ್ಷೆಗಳು ಆರಂಭವಾಗಿದ್ದು, ಸಾಂಬಶಿವ ಒಂದು ಪರೀಕ್ಷೆಯನ್ನು ಮಾತ್ರ ಬರೆದಿದ್ದನು. ಇಂದು ಇನ್ನೊಂದು ಪರೀಕ್ಷೆ ನಿಗದಿಯಾಗಿತ್ತು. ಆದರೆ ಸಾಂಬಶಿವ ಕೆಲವು ತಿಂಗಳುಗಳ ಹಿಂದೆ ತನ್ನ ತಾಯಿಯ ಮೊಬೈಲ್ ಫೋನಿನಲ್ಲಿ ವಿಡಿಯೋ ಗೇಮ್ ಡೌನ್ಲೋಡ್ ಮಾಡಿಕೊಂಡಿದ್ದು, ಸದಾ ಗೇಮ್ ಆಡುತ್ತಿದ್ದನು. ಭಾನುವಾರ ಸಂಜೆ ಸಾಂಬಶಿವ ಪಬ್‍ಜೀ ಆಟವಾಡುತ್ತಿದ್ದಾಗ ಆತನ ತಾಯಿ ಅವನನ್ನು ಬೈದು ಓದುವಂತೆ ಗದರಿಸಿದ್ದಾರೆ. ಇದರಿಂದ ಬೇಸರಗೊಂಡ ಸಾಂಬಶಿವ ರೂಮಿಗೆ ಹೋಗಿ ಲಾಕ್ ಮಾಡಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.
ಪೋಷಕರು ಬೈದಿದ್ದಕ್ಕೆ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.