– 31ನೇ ಸ್ಥಾನದಿಂದ 1ನೇ ಸ್ಥಾನಕ್ಕೆ ಏರಿಕೆ
– ರೇಡಿಯೋ ಮೂಲಕ ಮಕ್ಕಳಿಗೆ ಮಾಹಿತಿ
– ಆರಂಭದಲ್ಲೇ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ
– ಖಾಸಗಿ ಶಾಲೆಗಳು, ಅಧಿಕಾರಿಗಳು, ಶಿಕ್ಷಕರ ಸಹಕಾರ
ವಿಶೇಷ ವರದಿ
ಬೆಂಗಳೂರು: ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಫಲಿತಾಂಶದಲ್ಲಿ ಹಾಸನ ರಾಜ್ಯದಲ್ಲೇ ಪ್ರಥಮ ಫಲಿತಾಂಶ ಪಡೆದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಈ ಅಚ್ಚರಿಯ ಫಲಿತಾಂಶಕ್ಕೆ ಕಾರಣವಾಗಿದ್ದು ಜಿಲ್ಲಾಡಳಿತ ನಡೆಸಿದ ಸತತ ಪ್ರಯತ್ನ. ಈ ಸತತ ಪ್ರಯತ್ನದಿಂದ ಇದೇ ಮೊದಲ ಬಾರಿಗೆ ಹಾಸನ 10ನೇ ತರಗತಿ ಪರೀಕ್ಷೆಯಲ್ಲಿ ಶೇ.89.33 ಫಲಿತಾಂಶದೊಂದಿಗೆ ದಾಖಲೆ ಬರೆದಿದೆ.
ಹೌದು, ಇದಕ್ಕೆಲ್ಲಾ ಕಾರಣ ಈ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರು ಫಲಿತಾಂಶ ಮೇಲಕ್ಕೆ ಎತ್ತಲು ಮಾಡಿದ ಪ್ಲ್ಯಾನ್. ಈ ಪ್ಲ್ಯಾನ್ ಯಶಸ್ವಿಯಾಗಲು ಶಿಕ್ಷಣ ಇಲಾಖೆಯ ಅಧಿಕಾರಿಗಳು ನಿರ್ವಹಿಸಿದ ಕೆಲಸ ಮತ್ತು ಜಿಲ್ಲೆಯ ಶಿಕ್ಷಕರ ಕಠಿಣ ಪರಿಶ್ರಮದಿಂದ ಹಾಸನ ಜಿಲ್ಲೆ ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಈ ಬಾರಿ ಹೊಸ ಇತಿಹಾಸ ಸೃಷ್ಟಿಸಿದೆ.
Advertisement
Advertisement
ಈ ಸಾಧನೆಯ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರೋಹಿಣಿ ಸಿಂಧೂರಿ ಅವರು, ನಾನು ಹಾಸನ ಜಿಲ್ಲಾಧಿಕಾರಿಯಾಗಿ ಬಂದಾಗ ಎಸ್‍ಎಸ್‍ಎಲ್‍ಸಿ ಫಲಿತಾಂಶ ನೋಡಿ ಬಹಳ ಬೇಸರವಾಯಿತು. ಉತ್ತರ ಕರ್ನಾಟಕ ಭಾಗದಲ್ಲಿ ಮೂಲಭೂತ ಸೌಕರ್ಯ ಇತ್ಯಾದಿ ಕಾರಣಗಳಿಂದ ಫಲಿತಾಂಶ ಕಡಿಮೆ ಬಂದಿದ್ದಕ್ಕೆ ಕಾರಣ ನೀಡುತ್ತಾರೆ. ಆದರೆ ದಕ್ಷಿಣ ಕರ್ನಾಟಕದ ಭಾಗವಾಗಿರುವ ಹಾಸನದಲ್ಲಿ ಯಾವುದೇ ಸಮಸ್ಯೆ ಇಲ್ಲ. ದಕ್ಷಿಣ ಕರ್ನಾಟಕದ ಜಿಲ್ಲೆಗಳು ಉತ್ತಮ ಫಲಿತಾಂಶ ದಾಖಲಿಸಿಕೊಂಡೇ ಬರುತ್ತಿದೆ. ಹೀಗಾಗಿ ಫಲಿತಾಂಶ ಮೇಲಕ್ಕೆ ಎತ್ತಲು ನಾವು ಪ್ಲಾನ್ ಮಾಡಿದ್ವಿ. ಈ ನಿಟ್ಟಿನಲ್ಲಿ ಶಿಕ್ಷಕರು, ಅಧಿಕಾರಿಗಳು ಸಹಕರಿಸಿದ್ದರಿಂದ ಈ ಫಲಿತಾಂಶ ಬಂದಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.
Advertisement
ಹಾಸನದಲ್ಲಿ ಆಗಿದ್ದು ಏನು?
ರೋಹಿಣಿ ಸಿಂಧೂರಿ ಅವರು ಹಾಸನದಲ್ಲಿ ಅಧಿಕಾರ ಸ್ವೀಕರಿಸಿದ್ದ ಸಮಯದಲ್ಲಿ ಹಾಸನಕ್ಕೆ ಎಸ್‍ಎಸ್‍ಎಲ್‍ಸಿಯಲ್ಲಿ 31ನೇ ಸ್ಥಾನ ಸಿಕ್ಕಿತ್ತು. ಫಲಿತಾಂಶವನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಕಳೆದ 2 ವರ್ಷಗಳಿಂದ ರೇಡಿಯೋ ಮೂಲಕ ಮಕ್ಕಳಿಗೆ ಪಾಠ, ಹೇಗೆ ಪರೀಕ್ಷೆಗೆ ಓದಬೇಕು, ಯಾವ ರೀತಿ ಬರೆಯಬೇಕು ಇತ್ಯಾದಿ ವಿಚಾರಗಳನ್ನು ಪ್ರಸಾರ ಮಾಡಲಾಯಿತು.
Advertisement
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಬುದ್ಧಿವಂತರಾಗಿದ್ದರೂ ಅವರಿಗೆ ನುರಿತ ಶಿಕ್ಷಕರಿಂದ ತರಬೇತಿ ಸಿಗದ ಕಾರಣ ಫೇಲ್ ಆಗುತ್ತಿದ್ದಾರೆ ಎನ್ನುವ ವಿಚಾರ ಜಿಲ್ಲಾಡಳಿತಕ್ಕೆ ಗೊತ್ತಾಯಿತು. ಇದಕ್ಕಾಗಿ ರೋಹಿಣಿ ಸಿಂಧೂರಿ ಅವರು ಖಾಸಗಿ ಶಾಲೆಯ ಜೊತೆ ಮಾತನಾಡಿ ಅಲ್ಲಿರುವ ನುರಿತ ಶಿಕ್ಷಕರಿಂದ ಮಕ್ಕಳಿಗೆ ಪಾಠ ಮಾಡಿಸಿಕೊಡುವಂತೆ ಮನವಿ ಮಾಡಿದರು. ಈ ಸಂಬಂಧ ಜಿಲ್ಲಾಡಳಿತ ಮೂರು ಮೂರು ಬಾರಿ ಖಾಸಗಿ ಶಾಲೆಯ ಪ್ರಿನ್ಸಿಪಾಲ್ ಜೊತೆ ಸಭೆ ನಡೆಸಿ ನಡೆಸಿ ಸಹಕಾರ ಕೋರಿದ್ದರು. ಅಷ್ಟೇ ಅಲ್ಲದೇ ವೈಯಕ್ತಿಕವಾಗಿ ಪ್ರಾಂಶುಪಾಲರಿಗೆ ಪತ್ರ ಬರೆದು ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ ದಾಖಲಾಗಲು ನಿಮ್ಮ ಸಹಕಾರ ಬೇಕು ಎಂದು ರೋಹಿಣಿ ಸಿಂಧೂರಿ ಅವರು ಮನವಿ ಮಾಡಿದ್ದರು. ಈ ಮನವಿಗೆ ಖಾಸಗಿ ಶಾಲೆಗಳಿಂದ ಉತ್ತಮ ಪ್ರತಿಕ್ರಿಯೆ ದೊರೆಯಿತು. ಶಾಲೆಯ ಶಿಕ್ಷಕರು ಗ್ರಾಮೀಣ ಭಾಗದ ಮಕ್ಕಳಿಗೂ ಶಿಕ್ಷಣ ನೀಡಿದರು.
ಪರೀಕ್ಷೆ ಹತ್ತಿರ ಬಂದಾಗ ಸ್ಪೆಷಲ್ ಕ್ಲಾಸ್ ಮಾಡಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾರೆ ಎನ್ನುವುದು ಜಿಲ್ಲಾಡಳಿತಕ್ಕೆ ಗೊತ್ತಾಯಿತು. ಪರೀಕ್ಷೆ ಹತ್ತಿರ ಬಂದಾಗ ಫಲಿತಾಂಶ ಉತ್ತಮ ಬರುತ್ತದೆ ಎಂದಾದರೆ ಯಾಕೆ ಶಾಲೆಗಳು ಆರಂಭಗೊಳ್ಳುವಾಗಲೇ ವಿಶೇಷ ಕೋಚಿಂಗ್ ನೀಡಬಾರದು ಎಂದು ತೀರ್ಮಾನಿಸಲಾಯಿತು. ಆರಂಭದಲ್ಲೇ ತರಬೇತಿ ನೀಡಿದರೆ ಉತ್ತಮ ಫಲಿತಾಂಶ ಬರಬಹುದು ಎನ್ನುವ ಲೆಕ್ಕಾಚಾರ ಹಾಕಿ ಕಳೆದ ವರ್ಷ ನಾವು ಆರಂಭದಲ್ಲೇ ಕೋಚಿಂಗ್ ಕ್ಲಾಸ್ ನೀಡಿ ಮಕ್ಕಳನ್ನು ಶಿಕ್ಷಣದಲ್ಲಿ ಮೇಲುಗೈ ಸಾಧಿಸುವಂತೆ ಮಾಡಿ ಎಂದು ಸಲಹೆ ನೀಡಿದ್ದೆವು. ಈ ಸಲಹೆ ಯಶಸ್ವಿಯಾಗಿದ್ದು ಕಳೆದ ವರ್ಷ ಜಿಲ್ಲೆಗೆ 7ನೇ ಸ್ಥಾನ ಸಿಕ್ಕಿತು. ಈಗ ಇದು ಮತ್ತಷ್ಟು ಯಶಸ್ವಿಯಾಗಿದ್ದು ಮೊದಲ ಸ್ಥಾನ ಸಿಕ್ಕಿದೆ ಎಂದು ರೋಹಿಣಿ ಸಿಂಧೂರಿ ಅವರು ಹೇಳಿದರು.
ಈ ಬಾರಿಯ ಫಲಿತಾಂಶಲ್ಲಿ ಟಾಪ್ 3 ಒಳಗಡೆ ಬರಬಹುದು ಎಂದು ನಿರೀಕ್ಷೆ ಮಾಡಿದ್ದೆವು. ಅದರಲ್ಲೂ ಉಡುಪಿಯನ್ನು ನಾವು ಹಿಂದೆ ಹಾಕುತ್ತೇವೆ ಎನ್ನುವ ನಿರೀಕ್ಷೆ ಮಾಡಿರಲಿಲ್ಲ. ಆದರೆ ಈ ಬಾರಿ ಮೊದಲ ಸ್ಥಾನ ಹಾಸನಕ್ಕೆ ಬಂದಿದ್ದು ಸಂತೋಷ ನೀಡಿದೆ. ಜಿಲ್ಲಾಡಳಿತದ ಪ್ರಯತ್ನಕ್ಕೆ ಎಲ್ಲ ಅಧಿಕಾರಿಗಳು, ಶಿಕ್ಷಕರು ಸ್ಪಂದಿಸಿದ ಪರಿಣಾಮ ಈ ಸಾಧನೆ ನಿರ್ಮಾಣವಾಗಿದೆ. ಚೀಟಿಂಗ್ ನಡೆಸಿ ಈ ಫಲಿತಾಂಶ ಬಂದಿದೆ ಎಂದು ಕೆಲವರು ಹೇಳಬಹುದು. ಆದರೆ ನಮ್ಮ ಅಧಿಕಾರಿಗಳು ಮತ್ತು ಶಿಕ್ಷಕರು ಉತ್ತಮವಾಗಿ ಕೆಲಸ ಮಾಡಿದ ಪರಿಣಾಮದಿಂದಲೇ ಈ ಫಲಿತಾಂಶ ಬಂದಿದೆ. ಹೀಗಾಗಿ ಈ ಸಾಧನೆಗೆ ನಿರ್ಮಾಣಕ್ಕೆ ಕಾರಣರಾದ ಎಲ್ಲರಿಗೂ ಧನ್ಯವಾದಗಳು ಎಂದು ಅವರು ಹೇಳಿದರು.
ಯಾವ ವರ್ಷ ಎಷ್ಟನೇ ಸ್ಥಾನ?
2014-15 ರಲ್ಲಿ 9ನೇ ಸ್ಥಾನ ಸಿಕ್ಕಿದರೆ, 2015-16 ರಲ್ಲಿ 18ನೇ ಸ್ಥಾನಕ್ಕೆ ಕುಸಿದಿತ್ತು, 2016-17ರ ಅವಧಿಯಲ್ಲಿ ಮತ್ತಷ್ಟು ಕುಸಿದು 31ನೇ ಸ್ಥಾನ ಸಿಕ್ಕಿತ್ತು. 2017-18 ರಲ್ಲಿ 7ನೇ ಸ್ಥಾನಕ್ಕೆ ಏರಿದರೆ ಈ ವರ್ಷ ಪ್ರಥಮ ಸ್ಥಾನ ಪಡೆದಿದೆ.
ಡಿಸಿ ಪ್ರಯತ್ನಕ್ಕೆ ಹಿನ್ನಡೆಯಾಗಿತ್ತು!
ಎಸ್‍ಎಸ್‍ಎಲ್‍ಸಿ ಫಲಿತಾಂಶ ಉತ್ತಮಗೊಳಿಸಲು ರೋಹಿಣಿ ಸಿಂಧೂರಿ ಅವರು ಕಳೆದ ವರ್ಷದ ಜುಲೈನಲ್ಲಿ ಶಿಕ್ಷಕರಿಗೆ ಪರೀಕ್ಷೆ ನಡೆಸಲು ತೀರ್ಮಾನಿಸಿದ್ದರು. ಬದಲಾದ ಪಠ್ಯ ಕ್ರಮಕ್ಕೆ ಶಿಕ್ಷಕರು ಹೊಂದಿಕೊಂಡಿರುವ ಬಗ್ಗೆ ಪರಿಶೀಲಿಸಲು ಈ ಪರೀಕ್ಷೆ ನಡೆಸಲು ಮುಂದಾಗಿದ್ದರು. ಆದರೆ ಡಿಸಿ ನಿರ್ಧಾರಕ್ಕೆ ಸರ್ಕಾರದಿಂದಲೇ ಬ್ರೇಕ್ ಬಿದ್ದಿತ್ತು.
ವಿಧಾನ ಪರಿಷತ್‍ನಲ್ಲಿ ಈ ಬಗ್ಗೆ ಶಿಕ್ಷಣ ಸಚಿವರಾಗಿದ್ದ ಎನ್.ಮಹೇಶ್ ಲಿಖಿತ ಉತ್ತರ ನೀಡಿ, ತರಬೇತಿ ಮೂಲಕವೇ ಶಿಕ್ಷಣ ಗುಣಮಟ್ಟ ಹೆಚ್ಚಿಸಲು ಸಾಧ್ಯ. ಪರೀಕ್ಷೆಯ ಅವಶ್ಯಕತೆ ಇಲ್ಲ. ಪರೀಕ್ಷೆ ನಡೆಸದಂತೆ ನಿರ್ದೇಶನ ನೀಡುತ್ತೇನೆ ಎಂದು ಹೇಳಿದ್ದರು. ಈ ವೇಳೆ ಉದ್ದೇಶಿತ ಪರೀಕ್ಷೆಯಿಂದ ಶಿಕ್ಷಕರ ಬೋಧನಾ ಆಸಕ್ತಿ ಕಡಿಮೆಯಾಗಲಿದ್ದು, ಶಿಕ್ಷಕರು ಆತಂಕ ಮತ್ತು ಒತ್ತಡಕ್ಕೆ ಒಳಗಾಗುತ್ತಾರೆಂದು ಸದಸ್ಯ ಮರಿತಿಬ್ಬೇಗೌಡ ಕಳವಳ ವ್ಯಕ್ತಪಡಿಸಿದ್ದರು.
ಯಾರು ರೋಹಿಣಿ ಸಿಂಧೂರಿ?
ಈ ಹಿಂದೆ ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದರು. ರಾಜ್ಯದಲ್ಲಿ ಮೊದಲ ಬಾರಿಗೆ ಭೂ ದಾಖಲೆಗಳ ಕುರಿತಂತೆ ವಿನ್ಯಾಸಗೊಂಡಿರುವ ಎಂ-ಆಸ್ತಿ ಅಪ್ಲಿಕೇಷನ್ ತಂದಿದ್ದರು. ಬಯಲು ಶೌಚಾಲಯ ಮುಕ್ತ ಜಿಲ್ಲೆಯನ್ನಾಗಿ ರೂಪಿಸಲು ಪಣ ತೊಟ್ಟಿದ್ದ ರೋಹಿಣಿ ಸಿಂಧೂರಿ ಅವರು ಹಳ್ಳಿ ಹಳ್ಳಿಗೆ ಹೋಗಿ, ಬಯಲು ಶೌಚಕ್ಕೆ ಹೋಗುವವರಿಗೆ ಶೌಚಾಲಯ ಬಳಸುವಂತೆ ತಿಳುವಳಿಕೆ ಹೇಳುವ ಮೂಲಕ ವಿಶೇಷ ಅಭಿಯಾನ ಮಾಡುತ್ತಿದ್ದರು.
ನಿರ್ಮಲ್ ಭಾರತ್ ಯೋಜನೆಯಡಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಶೌಚಾಲಯ ನಿರ್ಮಾಣ ಗುರಿ ಸಾಧಿಸಿದ್ದ ಇವರ ಅಧಿಕಾರ ಅವಧಿಯಲ್ಲಿ ಶೌಚಾಲಯ ನಿರ್ಮಾಣದಲ್ಲಿ ಮಂಡ್ಯ ಜಿಲ್ಲೆ ಭಾರತದಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಕರ್ನಾಟಕದಲ್ಲಿ ಪ್ರಥಮ ಸ್ಥಾನ ಪಡೆದಿತ್ತು. ಸಿಇಓ ಅವರ ಕಾರ್ಯವೈಖರಿಯನ್ನು ನೋಡಿ ಮಂಡ್ಯದ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದರು.
2015ರ ಸೆಪ್ಟೆಂಬರ್‍ನಲ್ಲಿ ರೋಹಿಣಿ ಸಿಂಧೂರಿ ಅವರನ್ನು ಸರ್ಕಾರ ಆಹಾರ ನಿಗಮದ ವ್ಯವಸ್ಥಾಪಕ ನಿರ್ದೇಶಕಿಯಾಗಿ ನೇಮಿಸಿ ವರ್ಗಮಾಡಿತ್ತು. ಈಗ ಅಲ್ಲಿಂದ ಮೊದಲ ಬಾರಿಗೆ ಜಿಲ್ಲಾಧಿಕಾರಿಯಾಗಿ ಹಾಸನಕ್ಕೆ ಬಂದಿದ್ದರು. ಕಳೆದ 2017ರ ಜುಲೈ 14ರಿಂದ ಹಾಸನದ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದ ಇವರು ಅಲ್ಪಾವಧಿಯಲ್ಲಿ ದಕ್ಷ ಆಡಳಿತಾಧಿಕಾರಿ ಎಂದು ಹೆಸರು ಪಡೆದುಕೊಂಡಿದ್ದರು. ತಮ್ಮ ಕೆಲಸದಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಪ್ರಶಸ್ತಿಯನ್ನು ಪಡೆದಿದ್ದರು. ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕ ಸೇರಿದಂತೆ ಹಾಸನದ ಹಲವು ಯೋಜನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಕ್ರಿಯಾಶೀಲರಾಗಿದ್ದರು. ಈ ವರ್ಷದ ಫೆಬ್ರವರಿಯಲ್ಲಿ ಚುನಾವಣಾ ಮಾರ್ಗಸೂಚಿ ಪಾಲಿಸುವ ಉದ್ದೇಶದಿಂದ ಸರ್ಕಾರ ರೋಹಿಣಿ ಸಿಂಧೂರಿ ಅವರನ್ನು ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಿತ್ತು.
https://www.youtube.com/watch?v=RIlr3y8t7ow
https://www.youtube.com/watch?v=c6PoH0rh1XE
https://www.youtube.com/watch?v=I0pUTEiRfSo