ಬೆಂಗಳೂರು: ಇಂದು ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟವಾಗಿದ್ದು, ಎಂದಿನಂತೆ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಒಟ್ಟು ಶೇ.73.70 ಫಲಿತಾಂಶ ದಾಖಲಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಶೇ.1.7ರಷ್ಟು ಏರಿಕೆಯಾಗಿದೆ.
ಶೇ.89.33 ಫಲಿತಾಂಶ ದಾಖಲಿಸುವ ಮೂಲಕ ಹಾಸನ ಮೊದಲ ಸ್ಥಾನ ಪಡೆದುಕೊಂಡರೆ, ಶೇ.88.49 ಫಲಿತಾಂಶ ದಾಖಲಿಸಿ ರಾಮನಗರ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಶೇ.88.49 ಫಲಿತಾಂಶ ದಾಖಲಿಸುವ ಮೂಲಕ ಬೆಂಗಳೂರು ಗ್ರಾಮಾಂತರ ಮೂರನೇ ಸ್ಥಾನ ಪಡೆದುಕೊಂಡರೆ ಶೇ.53.95 ಫಲಿತಾಂಶದೊಂದಿಗೆ ಯಾದಗಿರಿ ಕೊನೆಯ ಸ್ಥಾನ ಪಡೆದುಕೊಂಡಿದೆ.
Advertisement
Advertisement
ಶೇ.79 ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದರೆ, ಶೇ.68 ರಷ್ಟು ಬಾಲಕರು ಉತ್ತೀರ್ಣರಾಗಿದ್ದಾರೆ. ಪರೀಕ್ಷೆಗೆ ಬರೆದ ಒಟ್ಟು 8.41 ಲಕ್ಷ ವಿದ್ಯಾರ್ಥಿಗಳಲ್ಲಿ 6,08,336 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 2,99,587 ಬಾಲಕರು, 3,08,749 ಬಾಲಕಿಯರು ತೇರ್ಗಡೆಯಾಗಿದ್ದಾರೆ. ಇಬ್ಬರು ವಿದ್ಯಾರ್ಥಿನಿಯರು 625ಕ್ಕೆ 625 ಅಂಕ ಪಡೆದರೆ 11 ವಿದ್ಯಾರ್ಥಿಗಳು 624 ಅಂಕ ಪಡೆದು ವಿಶೇಷ ಸಾಧನೆ ನಿರ್ಮಿಸಿದ್ದಾರೆ.
Advertisement
ಆನೇಕಲ್ ತಾಲೂಕಿನ ಸೈಂಟ್ ಫಿಲೋಮಿನಾ ಶಾಲೆಯ ಸೃಜನಾ ಮತ್ತು ಉತ್ತರ ಕನ್ನಡದ ಕುಮುಟದ ವಿದ್ಯಾಗಿರಿ ಶಾಲೆಯ ನಾಗಾಂಜಲಿ ನಾಯಕ್ 625ಕ್ಕೆ 625 ಅಂಕಗಳನ್ನು ಪಡೆದು ವಿಶಿಷ್ಟ ಸಾಧನೆ ನಿರ್ಮಿಸಿದ್ದಾರೆ.
Advertisement
ಫೇಲ್ ಆದವರಿಗೆ ಜೂನ್ 21 ರಿಂದ ಜೂನ್ 28ರವರೆಗೆ ಪೂರಕ ಪರೀಕ್ಷೆ ನಡೆಯಲಿದೆ. ಪೊಟೋ ಕಾಪಿ ಪಡೆಯಲು ಮೇ 13 ಕೊನೆಯ ದಿನಾಂಕವಾಗಿದ್ದು, ಫೋಟೋ ಕಾಪಿಗೆ ಒಂದು ವಿಷಯಕ್ಕೆ 405 ರೂ. ದರವನ್ನು ನಿಗದಿ ಪಡಿಸಲಾಗಿದೆ. ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಕೆಗೆ ಮೇ17 ಕೊನೆ ದಿನಾಂಕವಾಗಿದೆ.
ಈ ಬಾರಿ ಎರಡು ರೀತಿಯಲ್ಲಿ ಜಿಲ್ಲಾವಾರು ಫಲಿತಾಂಶ ಪ್ರಕಟವಾಗಿದೆ. ಪಾಸಿಂಗ್ ಪರ್ಸೆಂಟೇಜ್ ಜಿಲ್ಲೆಗಳು ಮತ್ತು ಕ್ವಾಲಿಟಿ ರಿಸಲ್ಟ್ ಜಿಲ್ಲೆಗಳು ಎಂದು ವಿಭಾಗ ಮಾಡಿ ಜಿಲ್ಲೆಗಳಿಗೆ ಶ್ರೇಯಾಂಕ ನೀಡಲಾಗಿದೆ.
ಮಧ್ಯಾಹ್ನ 12 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಎಸ್‍ಎಸ್‍ಎಲ್‍ಸಿ ಬೋರ್ಡ್ ಮಂಡಳಿ ಫಲಿತಾಂಶವನ್ನು ಪ್ರಕಟಿಸಿತು. ಬುಧವಾರ ಎಲ್ಲಾ ಶಾಲೆಗಳಲ್ಲಿ ಫಲಿತಾಂಶ ಲಭ್ಯವಾಗಲಿದೆ. ಮಾರ್ಚ್ 21 ರಿಂದ ಏಪ್ರಿಲ್ 24ರವರೆಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆದಿತ್ತು. ರಾಜ್ಯಾದ್ಯಂತ 2,847 ಕೇಂದ್ರಗಳಲ್ಲಿ ಒಟ್ಟು 8.41 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ರಾಜ್ಯಾದ್ಯಂತ 2,857 ಪರೀಕ್ಷೆ ಕೇಂದ್ರಗಳಲ್ಲಿ, 46 ಸೂಕ್ಷ್ಮ ಕೇಂದ್ರಗಳು ಮತ್ತು 7 ಅತಿ ಸೂಕ್ಷ್ಮ ಕೇಂದ್ರಗಳ ಎಂದು ವಿಂಗಡಿಸಲಾಗಿತ್ತು.