ಬೆಂಗಳೂರು: ರಾಜ್ಯದಲ್ಲಿ ಎಸ್‍ಎಸ್‍ಎಲ್‍ಸಿ, ದ್ವಿತೀಯ ಪಿಯುಸಿ ಪರೀಕ್ಷೆಗಳ ಭವಿಷ್ಯ ನಾಳೆ ಪ್ರಕಟವಾಗುವ ಸಾಧ್ಯತೆ ಇದೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಬೆಳಗ್ಗೆ 10 ಗಂಟೆಗೆ ಸುದ್ದಿಗೋಷ್ಟಿ ಕರೆದಿದ್ದು, ನಾಳೆ ಮಹತ್ವದ ತೀರ್ಮಾನ ಘೋಷಿಸಲಿದ್ದಾರೆ.
ಪರೀಕ್ಷೆ ರದ್ದು ಮಾಡಬೇಕಾ? ರದ್ದು ಮಾಡದಿದ್ದರೆ ಪರೀಕ್ಷಾ ಪದ್ಧತಿ ಹೇಗೆ? ಯಾವ ಮಾನದಂಡ ಆಧರಿಸಿ ಪರೀಕ್ಷೆ ನಡೆಸಬೇಕು? ಅನ್ನೋದರ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಜ್ಞರು, ಸಚಿವರ ಅಭಿಪ್ರಾಯ ಪಡೆದಿದ್ದಾರೆ. ಪರೀಕ್ಷಾ ಗೊಂದಲದ ಬಗ್ಗೆ ಸಿಎಂ ಯಡಿಯೂರಪ್ಪ ಕೂಡ ಹೇಳಿಕೆ ನೀಡಿದ್ದು, ಪರೀಕ್ಷೆ ಬಗ್ಗೆ ಚರ್ಚೆ ನಡೆಸಿದ್ದೇವೆ. ಸದ್ಯದಲ್ಲೇ ನಿರ್ಧಾರ ಹೇಳುತ್ತೇವೆ ಅಂದಿದ್ದಾರೆ.
ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಪರೀಕ್ಷೆ ಅಗತ್ಯವಾಗಿದೆ. 1 ತಿಂಗಳ ಬಳಿಕವಾದರೂ ಎಕ್ಸಾಂ ನಡೆಸೋ ಚಿಂತನೆ ನಡೆದಿದೆ ಅಂತ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಇನ್ನೊಂದೆಡೆ, ಸಚಿವ ಸೋಮಣ್ಣ ಕೂಡ ಸಿಬಿಎಸ್‍ಇ ಮಾದರಿ ರಾಜ್ಯದಲ್ಲಿ ಪರೀಕ್ಷೆ ರದ್ದು ಸರಿಯಲ್ಲ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಣ್ಣ ಪರೀಕ್ಷೆಯಾದ್ರೂ ಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಸೋಂಕು ಇಳಿದ ಮೇಲೆ ಪರೀಕ್ಷೆ ನಡೆಸುವಂತೆ ಖಾಸಗಿ ಶಾಲೆಗಳ ಒಕ್ಕೂಟ ಕೂಡ ಸರ್ಕಾರಕ್ಕೆ ಮನವಿ ಮಾಡಿದೆ.
ಪರೀಕ್ಷೆ ನಡೆಸೋ ಬಗ್ಗೆ ಬಹುತೇಕ ಒಲವು ಹೊಂದಿರುವ ಸರ್ಕಾರ 2 ಆಯ್ಕೆಗಳನ್ನು ಮುಂದಿಟ್ಟುಕೊಂಡಿದೆ. ಪರೀಕ್ಷೆ ರದ್ದು ಮಾಡೋದಾ? ಅಥವಾ ಪರೀಕ್ಷೆ ವಿಧಾನವನ್ನೇ ಬದಲಿಸೋದಾ? ಅನ್ನೋದರ ಬಗ್ಗೆ ಚಿಂತನೆ ನಡೆಸಿದೆ. ಒಂದೆರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳೋ ಸಾಧ್ಯತೆ ಇದೆ.
* ಸರ್ಕಾರದ ಮುಂದಿರುವ ಆಯ್ಕೆ 1
1. ಪ್ರಧಾನಿ ಮೋದಿ ಆದೇಶದಂತೆ 10, 12ನೇ ಕ್ಲಾಸ್ ಪರೀಕ್ಷೆ ರದ್ದು ಮಾಡೋದು.
2. ಪರೀಕ್ಷೆ ಬದಲಾಗಿ ವಿದ್ಯಾರ್ಥಿಗಳ ಸಂಪೂರ್ಣ ಶೈಕ್ಷಣಿಕ ವರದಿ ಆಧರಿಸಿ ಮೌಲ್ಯಮಾಪನ.
3. ಎ, ಬಿ, ಸಿ, ಡಿ ಗ್ರೇಡ್ ಮಾದರಿಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಅಳೆಯೋದು.
* ಸರ್ಕಾರದ ಮುಂದಿರುವ ಆಯ್ಕೆ 2
1. ಸೋಂಕು ನಿಯಂತ್ರಣಕ್ಕೆ ಬಂದ್ಮೇಲೆ ಪರೀಕ್ಷೆ ನಡೆಸೋದು.
2. ಪರೀಕ್ಷಾ ವಿಧಾನ, ಪರೀಕ್ಷಾ ಸಮಯ ಬದಲಾವಣೆ.
3. 1 ಅಥವಾ 2 ದಿನದಲ್ಲಿ ಎಲ್ಲಾ ಪರೀಕ್ಷೆ ಮುಗಿಸೋದು.
4. ಸಿಇಟಿ ಮಾದರಿಯಲ್ಲಿ ಅಂಕ ಕಡಿತ ಮಾಡಿ ಪರೀಕ್ಷೆ.
5. 6 ವಿಷಯಗಳಿಗೆ ಬದಲಾಗಿ ಒಂದೇ ಪ್ರಶ್ನೆ ಪತ್ರಿಕೆ.
6. ಪಬ್ಲಿಕ್ ಪರೀಕ್ಷೆ ಬದಲಾಗಿ ಶಾಲಾ-ಕಾಲೇಜು ಹಂತದಲ್ಲೇ ಪರೀಕ್ಷೆ.