ನವದೆಹಲಿ: ರಾಜ್ಯದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳಿಗೆ ತಡೆ ಕೋರಿ ಸುಪ್ರೀಂಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿ ನಾಳೆ ವಿಚಾರಣೆ ನಡೆಯುವ ಸಾಧ್ಯತೆ ಇದೆ. ನಾಳಿನ ವಿಚಾರಣಾ ಪಟ್ಟಿಯಲ್ಲಿ ಅರ್ಜಿ ಪರಿಗಣಿಸಿದ್ದು ನ್ಯಾ. ನಾಗೇಶ್ವರ್ ರಾವ್ ನೇತೃತ್ವದ ತ್ರಿ ಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಲಿದೆ.
ರಾಜ್ಯ ಸರ್ಕಾರದ ವಿರುದ್ಧ ಅರ್ಜಿ ಸಲ್ಲಿಕೆ ಹಿನ್ನೆಲೆ ರಾಜ್ಯ ಸರ್ಕಾರದ ವರ ವಕೀಲ ಸುಬ್ರಾಂಶು ಕೆವಿಯೇಟ್ ಸಲ್ಲಿಸಿದ್ದು, ರಾಜ್ಯದ ಸರ್ಕಾರದ ಅಭಿಪ್ರಾಯ ಕೇಳಿದ ಬಳಿಕವಷ್ಟೇ ಆದೇಶ ನೀಡುವಂತೆ ಸುಪ್ರೀಂಕೋರ್ಟ್ ಗೆ ಮನವಿ ಮಾಡಿದ್ದಾರೆ.
Advertisement
Advertisement
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವಾಗ ರಾಜ್ಯ ಸರ್ಕಾರ ಜೂನ್ 25ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಲು ಮುಂದಾಗಿರುವುದನ್ನು ಪ್ರಶ್ನಿಸಿ ಬೆಳಗಾವಿ ನಿವಾಸಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆ ಮುಖ್ಯಸ್ಥೆ ರಾಜಶ್ರೀ ನಾಗರಾಜ್ ಎಂಬವರು ಅರ್ಜಿ ಸಲ್ಲಿಸಿದ್ದಾರೆ.
Advertisement
Advertisement
ಸುಪ್ರೀಂಕೋರ್ಟ್ ಮುನ್ನ ಈ ಅರ್ಜಿಯನ್ನು ಹೈಕೋರ್ಟಿಗೆ ಸಲ್ಲಿಸಲಾಗಿತ್ತು. ಸರ್ಕಾರ ಅಪ್ರಾಪ್ತ ಮಕ್ಕಳು, ಅವರ ಪೋಷಕರು ಮತ್ತು ಶಿಕ್ಷಣಾಧಿಕಾರಿಗಳ ಜೀವನವನ್ನು ಅಪಾಯಕ್ಕೆ ಸಿಲುಕಿಸಿದೆ ಎಂದು ರಾಜಶ್ರೀ ಆರೋಪಿಸಿದ್ದರು. ಆದರೆ ಈ ಅಂಶಗಳನ್ನು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಪರಿಗಣಿಸಲು ನಿರಾಕರಿಸಿತ್ತು. ಈ ಹಿನ್ನೆಲೆ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗಿದ್ದು ನಾಳೆ ಸುಪ್ರೀಂಕೋರ್ಟ್ ನೀಡುವ ಆದೇಶ ಮಹತ್ವದಾಗಿದೆ.