ಮುಂಬೈ: ಬಾಲಕನೊಬ್ಬ ಮಧ್ಯರಾತ್ರಿ ವೇಳೆ ತನ್ನ ತಾಯಿಗಾಗಿ ಕೂಗಿ ನುಗೂಢವಾಗಿ ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಇಲ್ಲಿನ ವೊರ್ಲಿಯ ಆದರ್ಶ್ ನಗರ್ ನಿವಾಸಿಯಾದ ಋತ್ವಿಕ್ ಘಾದ್ಶಿ ಮೃತ ಬಾಲಕ. ಈತ ದಾದರ್‍ನ ಶಿಶುವಿಹಾರ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಗುರುವಾರದಂದು ಆರಂಭವಾಗಬೇಕಿದ್ದ 10ನೇ ತರಗತಿ ಪರೀಕ್ಷೆಗಾಗಿ ಋತ್ವಿಕ್ ಸಿದ್ಧತೆ ನಡೆಸಿದ್ದ. ಬುಧವಾರ ರಾತ್ರಿ 11.30 ವೇಳೆಗೆ ಮಲಗುವಾಗ ಬೆಳಗ್ಗೆ 5 ಗಂಟೆಗೆ ಎದ್ದೇಳಿಸುವಂತೆ ತಾಯಿಗೆ ಹೇಳಿದ್ದ. ಆದ್ರೆ ಮಧ್ಯರಾತ್ರಿ ಸುಮಾರು 1.15ರ ಹೊತ್ತಿಗೆ ಅಮ್ಮನಿಗಾಗಿ ಕೂಗಿ ಬಳಿಕ ಸಾವನ್ನಪ್ಪಿದ್ದಾನೆ.
Advertisement
ಋತ್ವಿಕ್ ಒಳ್ಳೇ ವಿದ್ಯಾರ್ಥಿಯಾಗಿದ್ದ. ಆತನಿಗೆ ಪರೀಕ್ಷೆಯ ಭಯ ಇರಲಿಲ್ಲ ಎಂದು ಕುಟುಂಬಸ್ಥರು ಹೇಳಿದ್ದಾರೆ. ಬುಧವಾರದಂದು ತನ್ನ ಸ್ನೇಹಿತರ ಜೊತೆ ಖುಷಿಯಿಂದ ಹೋಳಿ ಆಡಿದ್ದ. ಋತ್ವಿಕ್ ಹಾಗೂ ಇಬ್ಬರು ಸಹೋದರಿಯರನ್ನ ತಾಯಿ ಒಬ್ಬರೇ ಮನೆಗೆಲಸ ಮಾಡಿ ಸಾಕುತ್ತಿದ್ದರು ಎಂದು ವರದಿಯಾಗಿದೆ.
Advertisement
Advertisement
ಮಧ್ಯರಾತ್ರಿ 1.15ರ ವೇಳೆಗೆ ತಾಯಿಗಾಗಿ ಕಿರುಚಿ, ಆತನಿಗೆ ಸ್ಥಳದಲ್ಲೇ ಮಲ ಮೂತ್ರ ವಿಸರ್ಜನೆಯಾಯಿತು. ಕೆಲವೇ ನಿಮಿಷಗಳಲ್ಲಿ ಪ್ರಜ್ಞೆ ತಪ್ಪಿದ ಎಂದು ಕಾಲೇಜು ವಿದ್ಯಾರ್ಥಿನಿಯಾದ ಋತ್ವಿಕ್ ಸಹೋದರಿ ಮನಾಲಿ ಹೇಳಿದ್ದಾರೆ. ಋತ್ವಿಕ್‍ನ ಮತ್ತೊಬ್ಬ ಸಹೋದರಿ ನರ್ಸ್ ತರಬೇತಿ ಪಡೆಯುತ್ತಿದ್ದು, ಕೆಲಸಕ್ಕಾಗಿ ಹೋಗಿದ್ದರು. ಘಟನೆ ನಡೆದಾಗ ಮನಾಲಿ ಕೂಡಲೇ ನೆರೆಹೊರೆಯವರಿಗೆ ವಿಷಯ ತಿಳಿಸಿದ್ದು, ಅವರು ಋತ್ವಿಕ್‍ನಲ್ಲಿ ಕೆಇಎಮ್ ಆಸ್ಪತ್ರೆಗೆ ರವಾನಿಸಿದ್ದರು ಎಂದು ವರದಿಯಾಗಿದೆ.
Advertisement
ಆಸ್ಪತ್ರೆಯ ಡೀನ್ ಡಾ. ಅವಿನಾಶ್ ಸುಪೇ ಈ ಬಗ್ಗೆ ಪ್ರತಿಕ್ರಿಯಿಸಿ, ಬಾಲಕನನ್ನು ಆಸ್ಪತ್ರೆಗೆ ಕರೆತರುವ ವೇಳೆಗಾಗಲೇ ಸಾವನ್ನಪ್ಪಿದ್ದ. ಪ್ರಾಥಮಿಕ ಮರಣೋತ್ತರ ಪರೀಕ್ಷೆ ಅನಿಶ್ಚಿತವಾಗಿದ್ದು, ಹೆಚ್ಚಿನ ತನಿಖೆಗಾಗಿ ಶ್ವಾಸಕೋಶ ಹಾಗೂ ಅಂಗಾಂಶಗಳನ್ನು ಕಲೀನಾದ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಹೇಳಿದ್ದಾರೆ.
ಋತ್ವಿಕ್ ಒಂದು ತಿಂಗಳ ಹಿಂದೆ ಜಾಂಡೀಸ್‍ನಿಂದ ಬಳಲುತ್ತಿದ್ದ. ಎರಡು ವಾರಗಳ ಹಿಂದಷ್ಟೇ ಆತನ ಚಿಕಿತ್ಸೆ ಮುಗಿದಿತ್ತು ಎಂದು ಮನಾಲಿ ತಿಳಿಸಿದ್ದಾರೆ.