Connect with us

ಎಲ್ಲರಿಗಿಂತ ಮೊದಲು ಬಾಹುಬಲಿಯನ್ನು ವೀಕ್ಷಿಸಲಿದ್ದಾರಾ ಇಂಗ್ಲೆಂಡಿನ ರಾಣಿ?

ಎಲ್ಲರಿಗಿಂತ ಮೊದಲು ಬಾಹುಬಲಿಯನ್ನು ವೀಕ್ಷಿಸಲಿದ್ದಾರಾ ಇಂಗ್ಲೆಂಡಿನ ರಾಣಿ?

ನವದೆಹಲಿ: ಇಂಗ್ಲೆಂಡಿನ ರಾಣಿ ಎಲಿಜಬೆತ್ ಬಾಹುಬಲಿ 2 ಚಿತ್ರವನ್ನು ಎಲ್ಲರಿಗಿಂತ ಮೊದಲು ವೀಕ್ಷಿಸಲಿದ್ದಾರಾ ಹೀಗೊಂದು ಪ್ರಶ್ನೆ ಈಗ ಭಾರತೀಯ ಸಿನಿಮಾ ವಲಯದಲ್ಲಿ ಹರಿದಾಡುತ್ತಿದೆ.

ಬ್ರಿಟಿಷ್ ಫಿಲ್ಮ್ ಇನ್ಸಿಟ್ಯೂಟ್ ನಲ್ಲಿ ಆಯೋಜನೆಗೊಂಡಿರುವ  ‘ಚಲನಚಿತ್ರದಲ್ಲಿ ಭಾರತ’ ಕಾರ್ಯಕ್ರಮದಲ್ಲಿ ಎಸ್‍ಎಸ್ ರಾಜಮೌಳಿಯವರ ಬಾಹುಬಲಿ 2 ವಿಶೇಷ ಪ್ರದರ್ಶನವಿದ್ದು, ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಇಂಗ್ಲೆಂಡಿನ ರಾಣಿ ಚಲನ ಚಿತ್ರವನ್ನು ವೀಕ್ಷಣೆ ಮಾಡಲಿದ್ದಾರೆ ಎಂದು ‘ಇಂಡಿಯಾ ಟುಡೆ’ ವರದಿ ಮಾಡಿದೆ.

ಆದರೆ ರಾಜಮೌಳಿ ಕಡೆಯಿಂದ ಈ ವಿಚಾರದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಸಿಕ್ಕಿಲ್ಲ.

ಮಹಾಶಿವರಾತ್ರಿ ಪ್ರಯುಕ್ತ ಬಾಹುಬಲಿ ಕನ್ ಕ್ಲೂಷನ್ ಟೀಸರ್ ಬಿಡುಗಡೆಯಾಗಿತ್ತು. ‘ಬಲಿ ಬಲಿ ಬಲಿ ರಾ ಬಲಿ ಸಾಹೋರೆ ಬಾಹುಬಲಿ’ ಅನ್ನೋ ಹಾಡಿನ ತುಣುಕು ಹೊಂದಿರುವ ಟೀಸರ್ ವಿಡಿಯೋವನ್ನು ರಾಜಮೌಳಿ ಟ್ವೀಟ್ ಮಾಡಿದ್ದರು. ಈ ಟೀಸರ್‍ನಲ್ಲಿ ಪ್ರಭಾಸ್ ಆನೆಯ ಮೇಲೆ ನಿಂತುಕೊಂಡಿರುವ ದೃಶ್ಯವಿದೆ.

ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಬರೆದ ಕಥೆಯಾಧರಿತ ಬಾಹುಬಲಿ ಭಾಗ 2 ಚಿತ್ರದಲ್ಲಿ ಪ್ರಭಾಸ್, ರಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ಸತ್ಯರಾಜ್, ತಮನ್ನಾ, ರಮ್ಯಕೃಷ್ಣ ಅಭಿನಯಿಸಿದ್ದಾರೆ. ತೆಲುಗು, ತಮಿಳು, ಮಲೆಯಾಳಂ, ಹಿಂದಿ ಭಾಷೆಯಲ್ಲಿರುವ ಬಾಹುಬಲಿ 2 ಏಪ್ರಿಲ್ 28ರಂದು ಬಿಡುಗಡೆಯಾಗಲಿದೆ.

ಬಾಹುಬಲಿ ದಿ ಬಿಗ್‍ನಿಂಗ್ ಚಿತ್ರ 2015ರ ಜುಲೈ 10ರಂದು ಬಿಡುಗಡೆಯಾಗಿತ್ತು. ಅಂದಾಜು 120 ಕೋಟಿ ಬಜೆಟ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ 650 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಾಹುಬಲಿ- 1 ಭಾರೀ ಸದ್ದು ಮಾಡಿ ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿತ್ತು.

 

Advertisement
Advertisement