ಬೆಂಗಳೂರು: ದಾವಣಗೆರೆ ಟಿಕೆಟ್ ವಿಚಾರವಾಗಿ ಎಸ್.ಎಸ್.ಮಲ್ಲಿಕಾರ್ಜುನ್ (S.S. Mallikarjun) ಹಾಗೂ ಜಮೀರ್ ನಡುವಿನ ಕದನ ತಾರಕ್ಕೇರಿದೆ. ನಾನು ಟಿಕೆಟ್ ಕೊಡಲು ಆಗುತ್ತಾ? ಟಿಕೆಟ್ ಕೊಡೋದು ನಮ್ಮ ಹೈಕಮಾಂಡ್. ಕೇಳೋದು ನಮ್ಮ ಹಕ್ಕು ಎಂದು ಸಚಿವ ಜಮೀರ್ ಅಹ್ಮದ್ (Zameer Ahmed) ಟಾಂಗ್ ಕೊಟ್ಟಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾನು ತೀರ್ಮಾನ ಮಾಡೋಕೆ ಆಗಲ್ಲ. ಮಲ್ಲಿಕಾರ್ಜುನನೂ ತೀರ್ಮಾನ ಮಾಡೋಕೆ ಆಗಲ್ಲ. ಹೈಕಮಾಂಡ್ ತೀರ್ಮಾನ ಮಾಡಬೇಕು. ಟಿಕೆಟ್ ಕೇಳಿದ್ದೇವೆ. ಕೇಳೋದ್ರಲ್ಲಿ ತಪ್ಪೇನಿದೆ. ಅಂದ್ರೆ ನಾನು ಕೇಳಲೇಬಾರದಾ? ಒತ್ತಾಯ ಮಾಡಲೇಬಾರದಾ? ಟಿಕೆಟ್ ಕೇಳೋದು ನಮ್ಮ ಹಕ್ಕು, ಹೀಗಾಗಿ ನಾವು ಕೇಳುತ್ತಿದ್ದೇವೆ. ಅಲ್ಲಿ ಅಭ್ಯರ್ಥಿ ಅಂತ ಯಾರು ಇಲ್ಲ. ಅಲ್ಪಸಂಖ್ಯಾತರಿಗೆ ಕೊಡಿ, ಯಾರಿಗಾದ್ರೂ ಕೊಡಿ ಅಂತ ಕೇಳುತ್ತಿದ್ದಾರೆ. ದಾವಣಗೆರೆ ಕಾಂಗ್ರೆಸ್ ಭದ್ರಕೋಟೆ, ಯಾರಿಗೆ ಕೊಟ್ರು ಗೆಲ್ಲುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಯಾರನ್ನು ಭೇಟಿ ಮಾಡುತ್ತೇನೆ ಎಂದು ಹೇಳಲು ಆಗುವುದಿಲ್ಲ: ಡಿಕೆಶಿ
ಶಾಮನೂರು ಶಿವಶಂಕರಪ್ಪ ಇದ್ದಾಗ ಇದು ನನ್ನ ಕೊನೆ ಚುನಾವಣೆ. ಅದಾದ ಮೇಲೆ ಅಲ್ಪಸಂಖ್ಯಾತರಿಗೆ ನಾನೇ ನಿಲ್ಲಿಸಿ ಗೆಲ್ಲಿಸಿಕೊಂಡು ಬರ್ತೀನಿ ಅಂತ ಹೇಳಿದ್ದರು. ಆ ಹಿನ್ನೆಲೆ ನಾಯಕರು ಬಂದು ನಮ್ಮ ಅಲ್ಪಸಂಖ್ಯಾತರದ್ದು 80 ಸಾವಿರ ವೋಟು ಇದೆ. ಶಾಮನೂರು ಶಿವಶಂಕಪ್ಪ ಕಳೆದ ಚುನಾವಣೆಯಲ್ಲಿ ಮಾತು ಕೊಟ್ಟಿದ್ರು. ಈ ಬಾರಿ ಬೈ ಎಲೆಕ್ಷನ್‌ನಲ್ಲಿ ನಮ್ಮ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡಿಸಬೇಕು ಅಂತ ಕೇಳಿದ್ದಾರೆ. ಕೊಡೋದು ಬಿಡೋದು ಹೈಕಮಾಂಡ್‌ಗೆ ಬಿಟ್ಟಿದ್ದು. ಅವರು ಹಿರಿಯರಿದ್ದಾರೆ ನಾಯಕರಿದ್ದಾರೆ, ನಾನು ಕೇಳಿದ್ದೇನೆ, ಮುಂದೇನೂ ಕೇಳುತ್ತೇನೆ ಎಂದಿದ್ದಾರೆ.
ನಾನು ಅಲ್ಪಸಂಖ್ಯಾತ ನಾಯಕ ಅಂತಾ ನನ್ನನ್ನು ಕೇಳಿದ್ದಾರೆ. ನನ್ನ ಹತ್ತಿರ ಅಲ್ಲದೇ ಯಾರ ಹತ್ತಿರ ಹೋಗಿ ಕೇಳ್ತಾರೆ? ನನ್ನದೇನಿದೆ? ನಾನು ವರದಿಯನ್ನ ಹೈಕಮಾಂಡ್‌ಗೆ ಕೊಡ್ತೀನಿ. ತೀರ್ಮಾನ ಮಾಡೋದು ಹೈಕಮಾಂಡ್? ನಾನು ಟಿಕೆಟ್ ಕೊಡೋಕೆ ಆಗುತ್ತಾ? ನಾನು ದಾವಣಗೆರೆಗೆ ಹೋದಾಗ ಸಮುದಾಯದ ಮುಖಂಡರು ಬಂದು ಕೇಳಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ನಮ್ಮ ಕ್ಷೇತ್ರದಲ್ಲಿ ಬಂದು ಮಾತನಾಡೋಕೆ ಅವನ್ಯಾರು ಎಂಬ ಮಲ್ಲಿಕಾರ್ಜುನ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ನಮ್ಮ ಕ್ಷೇತ್ರ, ಅವರ ಕ್ಷೇತ್ರ ಅಂತ ಯಾರದ್ದು ಇಲ್ಲ. ಚಾಮರಾಜಪೇಟೆ ನನ್ನ ಕ್ಷೇತ್ರ ಅಂತ ಹೇಳೋಕೆ ಆಗುತ್ತಾ? ನಮ್ಮ ಪಕ್ಷ, ಹೈಕಮಾಂಡ್ ಪಕ್ಷ. 224 ಕ್ಷೇತ್ರನೂ ಕಾಂಗ್ರೆಸ್ ಕ್ಷೇತ್ರ, ಹೈಕಮಾಂಡ್ ಕ್ಷೇತ್ರ. ನಾವು ಕಾಂಗ್ರೆಸ್‌ನ ಶಿಸ್ತಿನ ಸಿಪಾಯಿಗಳು ಎಂದು ತಿರುಗೇಟು ನೀಡಿದ್ದಾರೆ.
ನಿಮ್ಮ ಕ್ಷೇತ್ರದಲ್ಲಿ ಟಿಕೆಟ್ ಕೇಳಿದ್ರೆ ಬಿಟ್ಟು ಕೊಡ್ತೀರಾ ಎಂಬ ಪ್ರಶ್ನೆಗೆ, ಖಂಡಿತವಾಗಿಯೂ ಬಿಟ್ಟುಕೊಡುತ್ತೇನೆ. ನನಗೆ ಹೇಳಿದ್ರೆ ನಾನು ಬಿಟ್ಟು ಕೊಡುತ್ತೇನೆ ಎಂದಿದ್ದಾರೆ.ಇದನ್ನೂ ಓದಿ: ಕಾಂಗ್ರೆಸ್‌ಗೆ ದೇಶದ ಹಿತಾಸಕ್ತಿ ಬೇಕಿಲ್ಲ, ಅವ್ಯವಸ್ಥೆ ಸೃಷ್ಟಿಸುವುದೇ ಅದರ ಗುರಿ: ಜೋಶಿ

