Connect with us

Bengaluru City

ಸಾರ್ವಜನಿಕವಾಗಿ ಕ್ಷಮೆ ಕೇಳಿದ್ರೂ ನಾನು ತಾರ್ಕಿಕ ಅಂತ್ಯ ಸಿಗೋವರೆಗೆ ಹೋರಾಡ್ತೀನಿ: ಶೃತಿ ಗುಡುಗು

Published

on

ಬೆಂಗಳೂರು: ಅರ್ಜುನ್ ಸರ್ಜಾ ಅವರ ವಿರುದ್ಧ ಮಾತನಾಡಿದ ಬಳಿಕ ನನಗೆ ಸರ್ಜಾ ಅಭಿಮಾನಿಗಳಿಂದ ಬೆದರಿಕೆ ಕರೆ ಬರುತ್ತಿದ್ದು ನಿರಂತರವಾಗಿ ನನ್ನ ಫೋನ್ ರಿಂಗ್ ಆಗುತ್ತಿದೆ ಎಂದು ಶೃತಿ ಹರಿಹರನ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅರ್ಜುನ್ ಸರ್ಜಾ ಅವರ ಮೇಲೆ ಆರೋಪ ಮಾಡಿದ ಬಳಿಕ ಹಲವು ಫೋನ್ ಕರೆ ಬಂದಿದೆ. ಆದರೆ ನಾನು ಯಾವುದಕ್ಕೂ ಉತ್ತರಿಸಿಲ್ಲ. ಟ್ರೂ ಕಾಲರ್ ಮೂಲಕ ನಂಬರ್ ಪರಿಶೀಲಿಸಿದ ವೇಳೆ ಸರ್ಜಾ ಅವರ ಫ್ಯಾನ್ಸ್ ಎಂಬುದು ಗೊತ್ತಾಗಿದೆ. ಆ ನಂಬರ್ ಗಳನ್ನು ಬಹಿರಂಗ ಪಡಿಸುತ್ತೇನೆ ಎಂದರು.

ಈ ವೇಳೆ ಸುದೀಪ್ ಸರ್, ದರ್ಶನ್ ಸರ್ ಸೇರಿದಂತೆ ಹಲವರ ಜೊತೆ ನಾನು ಅಭಿನಯಿಸಿದ್ದೇನೆ. ನನಗೆ ಎಲ್ಲಿಯೂ ಈ ರೀತಿಯ ಅನುಭವ ಆಗಿರಲಿಲ್ಲ. ಹೀಗಾಗಿ ನಾನು ಮುಕ್ತವಾಗಿ ಹೇಳಿಕೊಂಡಿದ್ದೇನೆ ಎಂದು ತಿಳಿಸಿದರು.

ಆರೋಪ ಮಾಡಲು ತಡವಾಗಿದ್ದೇಕೆ?
ಅರ್ಜುನ್ ಸರ್ಜಾ ಅವರ ನಡವಳಿಕೆ ಬಗ್ಗೆ ಈ ಮೊದಲು ನಾನು ಹೇಳಲು ನನಗೆ ಧೈರ್ಯ ಇರಲಿಲ್ಲ. ಆದರೆ ಮೀಟೂ ಅಭಿಯಾನದ ಮೂಲಕ ಧೈರ್ಯವಾಗಿ ಹೊರಬಂದಿದ್ದೇನೆ. ಸಿನಿಮಾ ವೇಳೆ ನನಗೆ ಆದ ಅನುಭವ ಹಂಚಿಕೊಂಡಿದ್ದೇನೆ. ಇದರಿಂದ ಇನ್ನೂ 4 ಜನರು ತಮಗೆ ಆದ ಕೆಟ್ಟ ಅನುಭವದ ಬಗ್ಗೆ ಹೇಳಿದ್ದಾರೆ. ಇಂದು ನಾನು ಬಹಿರಂಗವಾಗಿ ಹೇಳಿಕೆ ನೀಡಲು ಇದೇ ಕಾರಣ ಎಂದರು.

ಮಾತುಕತೆಗೆ ಸಿದ್ಧರಿದ್ದೀರಾ?
ಅರ್ಜುನ್ ಸರ್ಜಾ ಅವರು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವ ಬಗ್ಗೆ ಮುಂದಾದರೆ ಒಪ್ಪುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕುರಿತು ಮಾತನಾಡಲು ಓಕೆ, ಆದರೆ ಸಂಧಾನಕ್ಕೆ ಮಾಡಿಕೊಳ್ಳುವ ಪ್ರಶ್ನೆ ಇಲ್ಲ. ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಿದರೆ ನನಗೆ ಮಾತ್ರ ನ್ಯಾಯ ಸಿಗುತ್ತದೆ. ಆದರೆ ಇಂತಹ ಘಟನೆಗಳು ನಡೆಯಬಾರದು ಎಂಬುದು ನಮ್ಮ ಹೋರಾಟದ ಉದ್ದೇಶ. ತಾರ್ಕಿಕ ಅಂತ್ಯ ಸಿಗುವವರೆಗೂ ನಾನು ಹೋರಾಟ ನಡೆಸುತ್ತೇನೆ. ಈಗಾಗಲೇ ಈ ವಿಚಾರಕ್ಕೆ ಸಂಬಂಧಿಸಿದಂತೆ ವಕೀಲರ ಜೊತೆ ಮಾತುಕತೆ ನಡೆಸಿದ್ದೇನೆ ಎಂದು ತಿಳಿಸಿದರು.

ಕಾನೂನು ಹೋರಾಟ ಏನು?
ಫಿಲ್ಮ್ ಚೇಂಬರ್ ನ ಐಸಿಸಿ ಕಮಿಟಿಗೆ ದೂರು ನೀಡಲು ಘಟನೆ ನಡೆದ 6 ತಿಂಗಳು ಹಾಗೂ ಕೆಲ ಪ್ರಕರಣದಲ್ಲಿ 1 ವರ್ಷದ ಸಮಯ ಮಾತ್ರ ಅವಕಾಶವಿದೆ. ಇಲ್ಲವಾದರೆ ಕೋರ್ಟ್‍ಗೆ ದೂರು ನೀಡಬೇಕು. ಅದ್ದರಿಂದ ನಾನು ಕಾನೂನು ಕ್ರಮಕ್ಕೆ ಮುಂದಾಗಿದ್ದೇನೆ. ಕೆಲವೊಂದು ಕಾನೂನಾತ್ಮಕವಾಗಿ ಹೋಗಬೇಕು. ಇದಕ್ಕೆ ಸಮಯ ಬೇಕಿದೆ, ಆಗ ಮಾಹಿತಿ ಮಾಧ್ಯಮಗಳಿಗೆ ನೀಡುತ್ತೇನೆ ಎಂದರು.

ಇತರರ ಹೆಸರು ಹೇಳುತ್ತಿಲ್ಲ ಏಕೆ?
ಸೆಕ್ಸ್ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡುವ ನೀವು ಏಕೆ ಇತರೇ ನಟರ ಹೆಸರು ಹೇಳುತ್ತಿಲ್ಲ ಎಂಬ ಪ್ರಶ್ನೆಗೆ ಸ್ಪಷ್ಟವಾಗಿ ಉತ್ತರಿಸದ ಶೃತಿ ಅವರು, ರೇಡಿಯ ಜಾಕಿಯೊಬ್ಬರು ನಡೆಸಿಕೊಡುವ ಕಾರ್ಯಕ್ರಮದಲ್ಲಿ ಕೇವಲ ಹಾಸ್ಯಕ್ಕಾಗಿ ಆ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಅದು ತಪ್ಪು ಅಂದರೆ ನಾನು ಕ್ಷಮೆ ಕೇಳುತ್ತೇನೆ. ಆ ವಿಚಾರಕ್ಕೂ ಈಗ ಕರೆಯಲಾಗಿರುವ ಸದ್ದಿಗೋಷ್ಠಿಗೂ ಏನು ಸಂಬಂಧ ಎಂದು ಪ್ರಶ್ನೆ ಮಾಡಿ ಇತರರ ಹೆಸರು ಏಕೆ ಹೇಳಿಲ್ಲ ಎಂದು ಪ್ರಶ್ನೆ ಮಾಡಬೇಡಿ ಎಂದರು. ಈ ಉತ್ತರಕ್ಕೆ ಆಕ್ಷೇಪ ವ್ಯಕ್ತವಾದ ವೇಳೆ ಸಮಯ ಬಂದ ವೇಳೆ ಈ ಪ್ರಶ್ನೆಗೆ ಉತ್ತರಿಸುವುದಾಗಿ ತಿಳಿಸಿದರು.

ವಿಸ್ಮಯ ಸಿನಿಮಾ ಬಿಡುಗಡೆ ವೇಳೆ ನೀವು ಮತ್ತೆ ಅರ್ಜುನ್ ಸರ್ಜಾ ಅವರೊಂದಿಗೆ ಮಾಡಬೇಕೆಂಬ ಆಸೆ ಹೊಂದಿದ್ದಾಗಿ ಹೇಳಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿ, ಸಿನಿಮಾ ಬಿಡುಗಡೆ ವೇಳೆ ನಾನು ಮತ್ತೆ ಅವರೊಂದಿಗೆ ನಟನೆ ಮಾಡುವುದು ಇಷ್ಟ ಎಂದು ಎಲ್ಲೂ ಹೇಳಿಲ್ಲ. ಆದರೆ ನನಗೆ ಆ ವೇಳೆ ಇದರ ಬಗ್ಗೆ ಸಾರ್ವಜನಿಕವಾಗಿ ಹೇಳುವ ಧೈರ್ಯ ಇರಲಿಲ್ಲ. ಈಗ ಎಲ್ಲವೂ ಹೇಳಿ ಹೊರ ಬಂದಿದ್ದೇನೆ. ಈ ಹಿಂದೆ ಕಸ್ಟಿಂಗ್ ಕೌಚ್ ಬಗ್ಗೆ ನಾನು ಮಾತನಾಡಿದ್ದೆ. ಈಗ ಮೀಟೂವಿನಿಂದ ಧೈರ್ಯ ಬಂದಿದೆ. ಒಂದೊಮ್ಮೆ ನಾನು ಹಾಗೇ ಹೇಳಿದ್ದರೆ, ಆ ಕುರಿತು ಸಾಕ್ಷಿ ಇದೇಯಾ ಎಂದು ಮರುಪ್ರಶ್ನೆ ಮಾಡಿದರು.

ನಿರ್ಮಾಪಕರ ಪತ್ರ: ಆರೋಪ ಮಾಡಿರುವ ಕುರಿತು ನಿರ್ಮಾಪಕರಿಂದ ಯಾವುದೇ ಪತ್ರ ಬಂದಿಲ್ಲ. ಒಂದೊಮ್ಮೆ ಪತ್ರ ಬಂದರೆ ಉತ್ತರಿಸುತ್ತೇನೆ. ನನಗೆ ಮತ್ತೆ ಕನ್ನಡ ಸಿನಿಮಾದಲ್ಲಿ ಅವಕಾಶ ಸಿಗುತ್ತೆ. ಏಕೆಂದರೆ ನಾನು ನಟಿ, ನನ್ನ ಸಿನಿಮಾಗಳನ್ನು ಮುಂದೆಯೂ ನೀವು ನೋಡುತ್ತೀರಾ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *