CoronaDistrictsKarnatakaLatestRaichur

ಮೊದಲ ಬಾರಿಗೆ ಶ್ರೀಶೈಲ ಖಾಲಿ ಖಾಲಿ – ಯುಗಾದಿ ಜಾತ್ರೆ ರಥೋತ್ಸವ ರದ್ದು

ರಾಯಚೂರು: ಯುಗಾದಿ ಹಬ್ಬಕ್ಕೆ ಲಕ್ಷಾಂತರ ಸಂಖ್ಯೆಯ ಭಕ್ತರಿಂದ ಕೂಡಿರುತ್ತಿದ್ದ ಆಂಧ್ರಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನ ಈಗ ಕೊರೊನಾ ವೈರಸ್ ಭೀತಿಯಿಂದ ಬಣಗುಡುತ್ತಿದೆ. ಅಲ್ಲದೇ ಇತಿಹಾಸದಲ್ಲೇ ಮೊದಲ ಬಾರಿಗೆ ಯುಗಾದಿ ವೇಳೆ ದೇವಾಲಯ ಖಾಲಿ ಖಾಲಿಯಾಗಿದೆ. ಜೊತೆಗೆ ಜಾತ್ರೆ ರಥೋತ್ಸವ ಕೂಡ ರದ್ದಾಗಿದೆ.

ರಾಯಚೂರು ಮಾರ್ಗವಾಗಿ ಸಾವಿರಾರು ಜನ ಪಾದಯಾತ್ರೆ ತೆರಳುತ್ತಿದ್ದು, ಯುಗಾದಿ ರಥೋತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದರು. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಿಂದ ಭಕ್ತರು ಪಾದಯಾತ್ರೆ ಹಾಗೂ ಬಸ್ಸಿನಲ್ಲಿ ತೆರಳುತ್ತಿದ್ದರು. ಆದರೆ ಕೊರೊನಾ ಎಫೆಕ್ಟ್‌ನಿಂದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನವನ್ನು ಮುಚ್ಚಲಾಗಿದೆ.

ಕೊರೊನಾ ಭೀತಿ ಹಿನ್ನೆಲೆಯಲ್ಲಿ ಈ ಮೊದಲೇ ಶ್ರೀಶೈಲ ಜಗದ್ಗುರುಗಳು ಜಾತ್ರೆ ಹಾಗೂ ರಥೋತ್ಸವ ರದ್ದಾಗಿರುವುದನ್ನ ಘೋಷಣೆ ಮಾಡಿದ್ದರು. ಆಗ ಸಾವಿರಾರು ಸಂಖ್ಯೆಯಲ್ಲಿ ಪಾದಯಾತ್ರೆ ಹೊರಟಿದ್ದ ಜನ ವಾಪಸ್ ಮನೆಗೆ ಹೋಗಿದ್ದರು. ಅಲ್ಲದೇ ದರ್ಶನಕ್ಕಾಗಿ ಬಂದಿದ್ದ ಸಾವಿರಾರು ಭಕ್ತರು ದರ್ಶನವೂ ಸಿಗದೆ, ವಾಪಸ್ ಬರಲು ಬಸ್ ಸೇರಿದಂತೆ ವಾಹನ ವ್ಯವಸ್ಥೆಯಿಲ್ಲದೆ ಪರದಾಡಿದ್ದಾರೆ. ಈಗ ಯುಗಾದಿ ಹಬ್ಬಕ್ಕೆ ಒಂದು ದಿನ ಬಾಕಿ ಇರುವಾಗಲೇ ಇಡೀ ಶ್ರೀಶೈಲ ಸಂಪೂರ್ಣ ಖಾಲಿ ಖಾಲಿಯಾಗಿದೆ.

ಜಾತ್ರೆ, ರಥೋತ್ಸವ ರದ್ದಾದ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ದೇವಾಲಯ ಹಾಗೂ ದೇವಾಲಯದ ಸುತ್ತಲಿನ ಪ್ರದೇಶ ಖಾಲಿಯಾಗಿ ಕಾಣುತ್ತಿದೆ. ಶ್ರೀಶೈಲದ ಈಗಿನ ದೃಶ್ಯಗಳು ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಯಾವ ವಾಹನಗಳು, ಜನರ ಓಡಾಟವೂ ಇಲ್ಲದೆ ಶ್ರೀಕ್ಷೇತ್ರ ಸಂಪೂರ್ಣ ಸ್ತಬ್ಧವಾಗಿದೆ.

Leave a Reply

Your email address will not be published.

Back to top button