ಅ.9ರಿಂದ 11ರವರೆಗೆ ಶ್ರೀರಂಗಪಟ್ಟಣ ದಸರಾ ಮಹೋತ್ಸವ

Public TV
1 Min Read
mandya narayanagowda

ಮಂಡ್ಯ: ದಸರಾ ಮೂಲ ನೆಲೆ ಶ್ರೀರಂಗಪಟ್ಟಣ ದಸರಾಗೆ ಡೇಟ್ ಫಿಕ್ಸ್ ಆಗಿದೆ. ದಸರಾ ಮಹೋತ್ಸವದ ಅಂಗವಾಗಿ ಶ್ರೀರಂಗಪಟ್ಟಣದಲ್ಲಿಂದು ಪೂರ್ವಭಾವಿ ಸಭೆ ನಡೆಸಲಾಯಿತು. ಕ್ರೀಡಾ ಸಚಿವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿರುವುದರಿಂದ ಈ ಬಾರಿಯ ದಸರಾದಲ್ಲಿ ಕ್ರೀಡೆಗೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆ ಇದೆ.

ಮೈಸೂರು ದಸರಾದ ಮೂಲ ನೆಲೆ ಶ್ರೀರಂಗಪಟ್ಟಣ. ಈ ಬಾರಿಯ ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ದಿನಾಂಕ ಫಿಕ್ಸ್ ಆಗಿದೆ. ಅಕ್ಟೋಬರ್ 9ರಿಂದ 11ರವರೆಗೆ 3 ದಿನಗಳ ಕಾಲ ಶ್ರೀರಂಗಪಟ್ಟಣ ದಸರಾ ಮಹೋತ್ಸವ ನಡೆಯಲಿದೆ. ಅಕ್ಟೋಬರ್ 9ರಂದು ಅಭಿಜಿನ್ ಲಗ್ನದಲ್ಲಿ ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ನೆರವೇರಿಸಲಾಗುತ್ತೆ. ಬಳಿಕ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಯಲಿದೆ. ಇದನ್ನೂ ಓದಿ: ಗದಗಿಗೆ ಸಿಎಂ ಬಾರ್ತಾರೆಂದು ತರಾತುರಿಯಲ್ಲಿ ರಸ್ತೆ ದುರಸ್ತಿ

ಶ್ರೀರಂಗಪಟ್ಟಣದಲ್ಲಿ ಇಂದು ದಸರಾ ಪೂರ್ವಭಾವಿ ಸಭೆ ನಡೆಸಲಾಯಿತು. ಸಚಿವ ಕೆ.ಸಿ.ನಾರಾಯಣ ಗೌಡರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ಸ್ಥಳೀಯರು ಭಾಗಿಯಾಗಿದ್ದರು. ಸಭೆ ಆರಂಭದಲ್ಲೇ ಸಚಿವ ನಾರಾಯಣ ಗೌಡ ಅಧಿಕಾರಿಗಳ ವಿರುದ್ಧ ಗರಂ ಆದರು. ಸಭೆಯನ್ನು ಶಿಸ್ತುಬದ್ಧವಾಗಿ ಆಯೋಜಿಸದ ಹಾಗೂ ಮೈಕ್ ಸರಿಯಿಲ್ಲದ ಬಗ್ಗೆ ಟೇಬಲ್ ಗೆ ಮೈಕ್ ಕುಟ್ಟಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಈ ಬಾರಿ ಮೈಸೂರು ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳನ್ನು ಕರೆಸಿ ಅಂಬಾರಿಯಲ್ಲಿ ನಾಡದೇವತೆ ಮೆರವಣಿಗೆ ನಡೆಸಲಾಗುವುದು. ದಸರಾ ಮಹೋತ್ಸವಕ್ಕೆ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಕ್ರೀಡಾ ಸಚಿವರೇ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿರುವುದರಿಂದ ಈ ಬಾರಿಯ ಶ್ರೀರಂಗಪಟ್ಟಣ ದಸರಾದಲ್ಲಿ ಗ್ರಾಮೀಣ ಕ್ರೀಡೆಗೆ ಹೆಚ್ಚಿನ ಒತ್ತು ನೀಡುವುದಾಗಿ ಸಚಿವರು ಹೇಳಿದರು. ಇದನ್ನೂ ಓದಿ: ದೇಶಕ್ಕೆ 600 ವೈದ್ಯಕೀಯ ಕಾಲೇಜು, ಏಮ್ಸ್‌ನಂಥ 50 ಸಂಸ್ಥೆ ಬೇಕು: ನಿತಿನ್ ಗಡ್ಕರಿ

ಕಳೆದ ವರ್ಷ ಕೊರೊನಾ ಹಿನ್ನೆಲೆಯಲ್ಲಿ ಒಂದು ದಿನಕ್ಕಷ್ಟೇ ಸೀಮಿತವಾಗಿದ್ದ ಶ್ರೀರಂಗಪಟ್ಟಣ ದಸರಾ, ಈ ಬಾರಿ ಮೂರು ದಿನಕ್ಕೆ ವಿಸ್ತರಣೆಯಾಗಿದೆ. ಈ ಮೂಲಕ ದಸರಾ ಮೂಲ ನೆಲೆ ಶ್ರೀರಂಗಪಟ್ಟಣದಲ್ಲಿ ದಸರಾ ಸಂಭ್ರಮ ಮನೆ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *