ಚಿತ್ರದುರ್ಗ: ಮಾಜಿ ಸಿಎಂ ಸಿದ್ದರಾಮಯ್ಯ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಜಾಯಮಾನದವರೆಂದು ಆರೋಗ್ಯ ಸಚಿವ ಶ್ರೀರಾಮುಲು ಲೇವಡಿ ಮಾಡಿದ್ದಾರೆ.
ಚಿತ್ರದುರ್ಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತೆ ಸಿಎಂ ಆಗಲು ಹೊರಟಿದ್ದಾರೆ, ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅವರನ್ನೇ ಸಿಎಂ ಅಭ್ಯರ್ಥಿ ಅಂತ ಘೋಷಿಸಿದ್ದರೂ ರಾಜ್ಯದಲ್ಲಿ ಕಾಂಗ್ರೆಸ್ ಕೇವಲ 79 ಸ್ಥಾನ ಗೆದ್ದಿತು. ಅಲ್ಲದೆ ಸಮ್ಮಿಶ್ರ ಸರ್ಕಾರವಿದ್ದಾಗಲೂ ಅವರು ಪ್ರಚೋದನಾಕಾರಿ ಮಾತುಗಳನ್ನು ಆಡಿ ಸರ್ಕಾರ ಬೀಳಿಸಿದರು. ಸದಾ ಕೆಣಕುವ ಮಾತುಗಳನ್ನಾಡುವುದೇ ಸಿದ್ದರಾಮಯ್ಯನವರ ಕೆಲಸವೆಂದು ವಾಗ್ದಾಳಿ ನಡೆಸಿದರು.
ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ಜಾಮೀನು ಮಂಜೂರಾದ ಬಗ್ಗೆ ಪ್ರತಿಕ್ರಿಯಿಸಿ, ಡಿಕೆಶಿ ಅವರು ಜೈಲಿಂದ ಬಿಡುಗಡೆ ಆಗಲಿ ಅಂತ ನಾವು ಸಹ ಪ್ರಾರ್ಥಿಸಿದ್ದೇವೆ. ಡಿಕೆಶಿ ಕಾನೂನು ಬದ್ಧ ಜಾಮೀನು ಪಡೆದು ಹೊರಗಡೆ ಬಂದಿದ್ದಾರೆ ಎಂದರು. ಹಿಂದೂ ಧರ್ಮದಲ್ಲಿ ಕೇಡು ಬಯಸಿದರೆ ಅವರು ಹಿಂದೂಗಳಲ್ಲ. ನಮ್ಮ ಧರ್ಮದಲ್ಲಿ ಶತ್ರು ಆಗಿದ್ದರೂ ಕಷ್ಟದಿಂದ ಪಾರು ಮಾಡಲು ಬಯಸಿದ್ದೇವೆ ಹೊರತು ಬಿಜೆಪಿ ಎಂದೂ ಕೇಡು ಬಯಸಿಲ್ಲ, ಬಯಸುವುದೂ ಇಲ್ಲ ಎಂದು ಸ್ಪಷ್ಟಪಡಿಸಿದರು.