ಮಡಿಕೇರಿ: ಸಚಿವ ಸಂಪುಟ ವಿಸ್ತರಣೆ ಸಂದರ್ಭ ಉಪಮುಖ್ಯಮಂತ್ರಿ ಸ್ಥಾನ ಸಿಗದಿರುವುದಕ್ಕೆ ಯಾವುದೇ ಅಸಮಾಧಾನವಿಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಮಡಿಕೇರಿಯಲ್ಲಿ ಮಾತನಾಡಿದ ಅವರು, ಬೇರೆ ಪಕ್ಷಗಳಿಂದ ಶಾಸಕರು ಬರುವಾಗ ಅವರಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಲಾಗಿತ್ತು. ಅದರಂತೆ ಅವರಿಗೆ ಸಚಿವ ಸ್ಥಾನ ಕೊಡಲಾಗುತ್ತಿದೆ. ನಾನು ಕಾರ್ಯಕ್ರಮದಿಂದ ಹೊರಗುಳಿದಿರುವುದಕ್ಕೆ ಬೇರೆ ಅರ್ಥ ಬೇಡ. ಮನೆಯಲ್ಲಿ ನನ್ನ ಮಗಳ ಲಗ್ನವಿರುವುದರಿಂದ ಅದರ ತಯಾರಿಯಲ್ಲಿ ನಾನಿದ್ದೇನೆ ಎಂದರು.
ಇನ್ನು ಇದರಲ್ಲಿ ಮೂಲ ಬಿಜೆಪಿಗರು, ವಲಸಿಗ ಬಿಜೆಪಿಗರು ಎನ್ನುವ ಪ್ರಶ್ನೆಯೇ ಇಲ್ಲ. ಅವರೆಲ್ಲರೂ ಪಕ್ಷದ ಸದಸ್ಯತ್ವ ಪಡೆದು ಚುನಾವಣೆಯಲ್ಲಿ ಗೆದ್ದು ಬಂದಿದ್ದಾರೆ. ಅವರಿಗೆ ಸಚಿವ ಸ್ಥಾನ ಕೊಡಲಾಗುತ್ತಿದೆ. ನಮ್ಮ ನಾಯಕರಾದ ಯಡಿಯೂರಪ್ಪನವರು ಅದನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಎಂದು ಹೇಳಿದರು.
ನೀವು ಉಪಮುಖ್ಯಮಂತ್ರಿ ಸ್ಥಾನದ ಅಕ್ಷಾಂಕ್ಷಿಯಾಗಿದ್ದವರು ಎಂಬ ಪ್ರಶ್ನೆಗೆ ಪಕ್ಷ ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಪ್ರತಿಕ್ರಿಯಿಸಿದರು.