‘ಪ್ರಚೋದನಕಾರಿ ಹೇಳಿಕೆ ನೀಡುವವರು ಈ ಮಣ್ಣಿನಲ್ಲಿ ಇರಬಾರದು’- ಸಿದ್ದರಾಮಯ್ಯ ವಿರುದ್ಧ ರಾಮುಲು ಕಿಡಿ

Public TV
2 Min Read
SRIRAMULU BLR

ಚಿತ್ರದುರ್ಗ: ವೀರ ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವ ಕೇಂದ್ರ ಸರ್ಕಾರ ಚಿಂತನೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಆರೋಗ್ಯ ಸಚಿವ ಶ್ರೀರಾಮುಲು ಕಿಡಿಕಾರಿದ್ದು, ವೀರ ಸಾವರ್ಕರ್ ಬಗ್ಗೆ ಓದಿಕೊಂಡು ಮಾತನಾಡಲಿ ಎಂದು ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಜನರನ್ನು ಪ್ರಚೋದಿಸಿ ಸಮಸ್ಯೆ ಉಂಟು ಮಾಡುತ್ತಿದ್ದಾರೆ. ಅವರು ಅದೇ ಸಂಸ್ಕಾರದಿಂದ ಬೆಳೆದು ಬಂದ ಕಾರಣದಿಂದ ಈ ರೀತಿ ಮಾತನಾಡುತ್ತಿದ್ದಾರೆ. ಆದರೆ ಅವರು ಸಾರ್ವಕರ್ ಅವರ ಬಗ್ಗೆ ಓದಿಕೊಂಡು ಮಾತನಾಡಲಿ. ಆದರೆ ಈ ರೀತಿ ಮಾತನಾಡುವವರನ್ನು ಜನರು ಸಹಿಸಬಾರದು. ಹಗುರವಾಗಿ ಮಾತನಾಡುವವರು ಈ ಮಣ್ಣಿನಲ್ಲಿ ಇರಬಾರದು ಎಂದರು.

MNG SIDDARAMAIAH

ಪ್ರಚೋದನಕಾರಿ ಭಾಷಣಗಳನ್ನು ಮಾಡುವ ಮೂಲಕ ಜನರನ್ನು ಪ್ರಚೋದಿಸುವ ಕೆಲಸವನ್ನು ಮಾಡುವವರು ಈ ಮಣ್ಣಿನಲ್ಲಿ ಇರಬಾರದರು. ಅಲ್ಲದೇ ಇಂತಹ ಹೇಳಿಕೆಗಳನ್ನು ಜನರು ಕೂಡ ಸಹಿಸಿಕೊಳ್ಳಬಾರದು. ಪ್ರಶಸ್ತಿ ನೀಡುವುದನ್ನು ಸರ್ಕಾರ ನಿರ್ಧರಿಸುತ್ತದೆ. ಆದರೆ ಇಷ್ಟು ಮಾತನಾಡುವವರು ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಭಾರತರತ್ನ ನೀಡಲು ಆಗಲಿಲ್ಲ. ಇಂತಹವರಿಗೆ ಪ್ರಶಸ್ತಿ ಕೊಡುವ ಬಗ್ಗೆ ಮಾತಾಡುವ ನೈತಿಕತೆ ಏನಿದೆ ಎಂದು ಪ್ರಶ್ನೆ ಮಾಡಿದರು. ಅಲ್ಲದೇ ಸಿದ್ದಗಂಗಾ ಶ್ರೀಗಳು ಹಾಗೂ ಪುಟ್ಟರಾಜ ಗವಾಯಿ ಅವರಿಗೂ ಭಾರತರತ್ನ ಕೊಡಬೇಕಿತ್ತು ಎಂದರು.

ಇದೇ ವೇಳೆ ವಿಜಯಪುರ ಆಸ್ಪತ್ರೆ ಹೊರ ಆವರಣದಲ್ಲೇ ಮಹಿಳೆ ಮಗುವಿಗೆ ಜನ್ಮ ನೀಡಿದ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಘಟನೆ ಬಗ್ಗೆ ಮಾಹಿತಿ ಪಡೆದಿದ್ದೇನೆ. ಆ ಆಸ್ಪತ್ರೆಯಲ್ಲಿ 24 ಗಂಟೆ ಇರುವ ಆಸ್ಪತ್ರೆ ವ್ಯವಸ್ಥೆ ಇಲ್ಲ. ಬೆಳಗ್ಗೆ ತಡವಾಗಿ ಬಂದ ಕಾರಣ ಇಂತಹ ಘಟನೆ ನಡೆದಿದ್ದು, ನಿರ್ಲಕ್ಷ ತೋರಿದ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ತಾಯಿ ಮಗು ಸುರಕ್ಷಿತವಾಗಿದ್ದಾರೆ, ಅವರಿಗೆ ಸೂಕ್ತ ಸೌಲಭ್ಯ ಕೊಡುವ ವ್ಯವಸ್ಥೆ ಮಾಡುತ್ತೇವೆ. ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುತ್ತೇವೆ ಎಂದರು.

ಸಿದ್ದರಾಮಯ್ಯ ಹೇಳಿದ್ದೇನು?: ಗಾಂಧೀಜಿ ಹತ್ಯೆಗೆ ಸ್ಕೆಚ್ ಹಾಕಿದ್ದ ಸಾವರ್ಕರ್ ಗೆ ಬಿಜೆಪಿ ಭಾರತ ರತ್ನ ನೀಡಲು ಮುಂದಾಗುತ್ತಿದೆ. ಸಾವರ್ಕರ್, ಗೋಡ್ಸೆಯ ಹಿಂದೆ ನಿಂತು ಹತ್ಯೆಗೆ ಸಂಚು ರೂಪಿಸಿದ್ದರು. ಸೂಕ್ತ ಸಾಕ್ಷ್ಯ ಇಲ್ಲದೆ ಆರೋಪಿಯಾಗಿ ಗುರುತಿಸಿರಲಿಲ್ಲ ಅಷ್ಟೇ. ಆದರೆ ಅಂಥ ವ್ಯಕ್ತಿಗೆ ಭಾರತ ರತ್ನ ಕೊಡಲು ಬಿಜೆಪಿ ಮುಂದಾಗಿದೆ. ಗೋಡ್ಸೆಗೂ ಭಾರತ ರತ್ನ ನೀಡಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *