Connect with us

Bellary

ನಾನು 420 ಅಲ್ಲ, ನನ್ನನ್ನು 108 ಅಂಬುಲೆನ್ಸ್ ಶ್ರೀರಾಮುಲು ಅಂತಾರೆ

Published

on

ಬಳ್ಳಾರಿ: ನಾನು 420 ಅಲ್ಲ, ನನ್ನನ್ನು ಎಲ್ಲರೂ 108 ಆಂಬುಲೆನ್ಸ್ ಶ್ರೀರಾಮಲು ಎಂದು ಕರೆಯುತ್ತಾರೆ ಎನ್ನುವ ಮೂಲಕ ಬಿಜೆಪಿ ಶಾಸಕ ಶ್ರೀರಾಮುಲು ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಾಂಗ್ರೆಸ್ ಸೋಲುವ ಭೀತಿಯಿಂದ ಸಿದ್ದರಾಮಯ್ಯನವರು ನನ್ನ ವಿರುದ್ಧ ಸಾಕಷ್ಟು ಆರೋಪಗಳನ್ನು ಮಾಡುತ್ತಿದ್ದಾರೆ. ಶ್ರೀರಾಮುಲುಗೆ ಕನ್ನಡ ಬರಲ್ಲ ಅಂತಾ ಅಪಮಾನ ಮಾಡುತ್ತಿದ್ದಾರೆ. ನಾನು ಸಿದ್ದರಾಮಯ್ಯನಷ್ಟು ಜಾಣನಲ್ಲ. ಆದರೆ ನಾನು ದಡ್ಡನೂ ಅಲ್ಲ. ಅವರು ಶ್ರೀರಾಮಲುಗೆ ಅಪಮಾನ ಮಾಡುತ್ತಿಲ್ಲ. ಬದಲಾಗಿ ಈ ಭಾಗದ ಜನರ ಭಾಷೆಯ ಸೊಗಡನ್ನು ಅಪಮಾನ ಮಾಡುತ್ತಿದ್ದಾರೆ. ನನಗೆ 420 ಶ್ರೀರಾಮುಲು ಅಂತಾ ಹೇಳಿದ್ರು. ಆದರೆ ಅವರಿಗೆ ಗೊತ್ತಿಲ್ಲ ಎಲ್ಲರೂ ನನ್ನನ್ನು 108 ಅಂಬುಲೆನ್ಸ್ ಶ್ರೀರಾಮುಲು ಅಂತಾ ಕರೆಯುತ್ತಾರೆ ಎಂದು ತಿರುಗೇಟು ನೀಡಿದರು.

ಅಧಿಕಾರದ ಲಾಲಸೆ, ದುರುಪಯೋಗ ಮಾಡುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿ, ರಾಮನಗರ ಅಭ್ಯರ್ಥಿಯನ್ನು ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಮಾಡಿದ್ದಾರೆ. ಬಿಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದ ವಾಲ್ಮೀಕಿ ಜಯಂತಿಗೆ ಸಮ್ಮಿಶ್ರ ಸರ್ಕಾರ ಅಪಮಾನ ಮಾಡಿದೆ. ಮಾಜಿ ಪ್ರಧಾನಿ ದೇವೇಗೌಡರು ವಾಲ್ಮೀಕಿ ಜಯಂತಿಯಂದು ಪ್ರಶಸ್ತಿ ಸ್ವೀಕರಿಸಿಲ್ಲ. ಅಲ್ಲದೇ ಸಿಎಂ ಕುಮಾರಸ್ವಾಮಿ ಹಾಗೂ ಡಿಸಿಎಂ ಜಿ.ಪರಮೇಶ್ವರ್ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ ನಮ್ಮ ಸಮಾಜಕ್ಕೆ ಅಪಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿಯವರು ಬಳ್ಳಾರಿ ಜಿಲ್ಲೆಯಿಂದ ಗೆದ್ದಿದ್ದರು. ಆದರೆ ಅವರು ತಮ್ಮ ಅಮೇಥಿ ಕ್ಷೇತ್ರವನ್ನು ಉಳಿಸಿಕೊಂಡು, ಬಳ್ಳಾರಿ ಜಿಲ್ಲೆಯ ಜನರನ್ನು ನೋಡಲು ಸಹ ಬರಲಿಲ್ಲ. ಬಳ್ಳಾರಿ ಜನ ಅವರು ಬಾರದೇ ಇರುವುದನ್ನು, ಇನ್ನೂ ಮರೆತಿಲ್ಲ. ಅಲ್ಲದೇ ಬಳ್ಳಾರಿ ಜಿಲ್ಲೆಯಿಂದ ಗೆದ್ದಿದ್ದಕ್ಕೆ, ವಿಶೇಷ ಪ್ಯಾಕೇಜ್ ನೀಡಿದ್ದರೂ ಇಲ್ಲಿಯವರೆಗೂ ಆ ಪ್ಯಾಕೇಜ್ ಜಿಲ್ಲೆಯ ಅಭಿವೃದ್ಧಿಗೆ ಬಂದೇ ಇಲ್ಲ ತಿಳಿಸಿದ್ರು.

ಅಪ್ಪ-ಮಕ್ಕಳು ಎಷ್ಟೇ ಕಷ್ಟ ಕೊಟ್ಟರೂ, ಅಧಿಕಾರಕ್ಕಾಗಿ ಕಾಂಗ್ರೆಸ್ಸಿನವರು ಇಂದು ಸಹಿಸಿಕೊಳ್ಳುತ್ತಿದ್ದಾರೆ. ಬಳ್ಳಾರಿ ಉಪಚುನಾವಣೆಯಲ್ಲಿ ಶ್ರೀರಾಮುಲು ವರ್ಸಸ್ ಡಿಕೆ ಶಿವಕುಮಾರ್ ಎನ್ನುತ್ತಿದ್ದಾರೆ. ಆದರೆ ಇದು ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧದ ನೇರ ಯುದ್ಧ. ಈ ಮೊದಲು ರಿಪಬ್ಲಿಕ್ ಆಫ್ ಬಳ್ಳಾರಿ ಎಂದು ಕರೆದೂ, ಬಳ್ಳಾರಿ ಜಿಲ್ಲೆಯನ್ನು ಬೇರ್ಪಡಿಸುವಂತಹ ಪ್ರಯತ್ನ ಮಾಡುತ್ತಿದ್ದಾರೆ. ದೇವೇಗೌಡರದ್ದೂ ರಿಪಬ್ಲಿಕ್ ಆಫ್ ಫ್ಯಾಮಿಲಿಯಾಗಿದೆ. ಮೈತ್ರಿಕೂಟ ಸರ್ಕಾರ ಹೈದರಾಬಾದ್ ಕರ್ನಾಟಕ್ಕೆ ನೀಡುವ 500 ಕೋಟಿ ರೂಪಾಯಿ ಅನುದಾನವನ್ನು ಕಟ್ ಮಾಡಿ, ಬೇರೆ ಜಿಲ್ಲೆಗೆ ನೀಡಿದೆ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಜಾತಿ-ಜಾತಿಗಳನ್ನು ಒಡೆದು, ಮಕ್ಕಳಲ್ಲೂ ಸಹ ಜಾತಿಯ ಬೀಜವನ್ನು ಬಿತ್ತುವ ಕೆಲಸ ಮಾಡಿದ್ದರು. ಅವರು ಎಲ್ಲಾ ಜಾತಿಗಳನ್ನು ಒಡೆದು ಆಳಲು ಮುಂದಾಗಿದ್ದರು. ಈ ಬಗ್ಗೆ ಸ್ವತಃ ಡಿಕೆ ಶಿವಕುಮಾರ್ ಅವರೇ, ನಾವು ಧರ್ಮವನ್ನು ಒಡೆಯಲು ಹೋಗಿ ತಪ್ಪುಮಾಡಿದೇವು ಅಂತ ಒಪ್ಪಿಕೊಂಡರು. ಈವಾಗ ಬಳ್ಳಾರಿಯಲ್ಲೂ ವಾಲ್ಮೀಕಿ ಸಮುದಾಯವನ್ನು ಒಡೆದು ಆಳಲು ಅವರು ಯತ್ನಿಸುತ್ತಿದ್ದಾರೆ. ಈ ಉಪ ಚುನಾವಣೆ ಬಳ್ಳಾರಿಗೆ ಸ್ವಾಭಿಮಾನಿ ಚುನಾವಣೆಯಾಗಿದೆ ಎಂದು ಆಕ್ರೋಶ ಹೊರಹಾಕಿದರು.

ಕಾಂಗ್ರೆಸ್ಸಿನವರಿಗೆ ಯಾರೋ ಜ್ಯೋತಿಷಿಯೊಬ್ಬರು, ಬಳ್ಳಾರಿ ಗೆದ್ದರೆ, ಎಲ್ಲವನ್ನೂ ಗೆಲ್ಲಬಹುದು ಅಂತಾ ಹೇಳಿದ್ದಾರಂತೆ. ಹೀಗಾಗಿ ಕಾಂಗ್ರೆಸ್ ನಾಯಕರ ದಂಡೇ ಬಳ್ಳಾರಿಯಲ್ಲಿ ಬೀಡು ಬಿಟ್ಟು ಪ್ರಚಾರ ನಡೆಸುತ್ತಿದ್ದಾರೆ. ಡಿಕೆ ಶಿವಕುಮಾರ್ ತಮ್ಮ ಹಣಬಲದ ಮೂಲಕ ಬಳ್ಳಾರಿ ಗೆಲ್ಲಲು ಸಂಚು ರೂಪಿಸಿದ್ದಾರೆ. ಆದರೆ ಅವರಿಗೆ ಸೋಲಿನ ಭೀತಿ ಎದುರಾಗಿರುವುದರಿಂದ ಹತಾಶರಾಗಿದ್ದಾರೆ. ಡಿಕೆಶಿ ಜಗತ್ತಿನಲ್ಲೇ ಅತೀ ದೊಡ್ಡ ಶ್ರೀಮಂತರಾಗಿದ್ದಾರೆ. ಅವರ ಶ್ರೀಮಂತಿಕೆ ಅವರ ಬಳಿಯೇ ಇರಲಿ. ಬಳ್ಳಾರಿ ಜನ ಹಣಕ್ಕೆ ಮಾರಾಟವಾಗಲ್ಲ. ಕಾಂಗ್ರೆಸ್ಸಿನವರು ಎಷ್ಟೇ ನಾಟಕ ಮಾಡಿದರೂ, ನಿಮ್ಮ ನಾಟಕ ಬಳ್ಳಾರಿಯಲ್ಲಿ ನಡೆಯುವುದಿಲ್ಲ. ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *