ಬಳ್ಳಾರಿ: ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದ 78 ಮಂದಿ ಶಾಸಕರು, 68 ಮಂದಿ ನಾಯಕರು ಬಳ್ಳಾರಿಗೆ ಆಗಮಿಸಿದ್ದು, ಸೋಲಿನ ಭೀತಿ ಇರುವುದರಿಂದಲೇ ಇಷ್ಟು ಮಂದಿ ಆಗಮಿಸಿದ್ದಾರೆ. ಆದರೆ ಅವರು ಚುನಾವಣೆ ಗೆಲ್ಲಲು ರೊಕ್ಕ ತಂದರೆ, ಬಳ್ಳಾರಿ ಮಣ್ಣಿನಲ್ಲೇ ರೊಕ್ಕ ಇದೆ ಎಂದು ಶಾಸಕ ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲೆ ಸಂಡೂರಿನ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಶ್ರೀರಾಮುಲು, ನಾನು ಜಿಲ್ಲೆಯ ಜನತೆಗಾಗಿ ಏನೂ ಕೆಲಸ ಮಾಡಿಲ್ಲ ಎಂದು ಹೇಳುತ್ತಾರೆ. ಆದರೆ ಈ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧವಾಗಿದ್ದೇನೆ. ನನ್ನ ವಿರುದ್ಧ ಅಸಂವಿಧಾನಿಕ ಪದಗಳನ್ನು ಬಳಸಲಾಗುತ್ತಿದೆ. ಕೇವಲ 800 ಮತ ನನಗೆ ಸಿಗುತ್ತಿದ್ದರೆ ಬದಾಮಿಯಲ್ಲಿ ಸಿದ್ದರಾಮಯ್ಯ ಗೆಲ್ಲುತ್ತಿದರಾ ಎಂದು ಪ್ರಶ್ನಿಸಿ ಶ್ರೀರಾಮುಲು ಟಾಂಗ್ ನೀಡಿದರು.
ಹೈದರಾಬಾದ್ ಕರ್ನಾಟಕ್ಕೆ 371 ಜೆ ತರಲು ಉಪವಾಸದ ಹೋರಾಟ ಮಾಡಿದ್ದೇನೆ. ಆದರೆ ಅವರು ಬಳಸುವ ಸೆಕ್ಷನ್ ಗಳು ನಮಗೆ ಗೊತ್ತಿಲ್ಲ. ನಮಗೆ ಗೊತ್ತಿರೋದು ಅಂಬೇಡ್ಕರ್ ಅವರು ಬರೆದ ಸಂವಿಧಾನ ಮಾತ್ರ. ನಾನು ವಾಲ್ಮೀಕಿ ಆದರೂ ಜಿಲ್ಲೆಯ ಎಲ್ಲಾ ಸಮುದಾಯದ ಜನ ನನಗೆ ತುತ್ತು ಹಾಕಿ ಬೆಳೆಸಿದ್ದಾರೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಧ್ವಜಾರೋಹಣ ಮಾಡಲು ಬಂದಿದ್ದ ಸಚಿವರು ಬಳಿಕ ಬಳ್ಳಾರಿ ಜನರನ್ನು ತಿರುಗಿಯೂ ನೋಡಿಲ್ಲ. ಕಾಂಗ್ರೆಸ್ ತನ್ನ ಸ್ವಾರ್ಥಕ್ಕಾಗಿ ಅಪ್ಪಮಕ್ಕಳೊಂದಿಗೆ ಒಪ್ಪಂದ ಮಾಡಿಕೊಂಡು ರಾಜ್ಯ ಹಾಳು ಮಾಡುತ್ತಿದೆ ಎಂದು ಆರೋಪಗಳ ಸುರಿಮಳೆಗೈದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv