ಬೆಳಗಾವಿ: ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ನಡೆಗೆ ಬೇಸತ್ತು, ಒಂದು ಸಾವಿರಕ್ಕೂ ಅಧಿಕ ಸೇನಾ ಕಾರ್ಯಕರ್ತರು ನಗರದ ಖಾಸಬಾಗ್ ನಲ್ಲಿರುವ ಸಾಯಿ ಭವನದಲ್ಲಿ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಶ್ರೀರಾಮ ಸೇನೆಯ ಮಾಜಿ ಜಿಲ್ಲಾಧ್ಯಕ್ಷ ರಮಾಕಾಂತ್ ಕೊಂಡುಸ್ಕರ್ ರವರು, ಶ್ರೀರಾಮ ಸೇನೆಗೆ ಸೇರುವ ಮುನ್ನ ಯಾವುದೇ ರಾಜಕೀಯ ಪಕ್ಷಗಳ ಅಡಿಯಲ್ಲಿ ಕೆಲಸ ಮಾಡಬಾರದೆಂದು ಪ್ರಮಾಣ ಮಾಡಿದ್ದೇವು. ಆದರೆ ಶ್ರೀರಾಮ ಸೇನೆಯ ಮುಖ್ಯಸ್ಥರಾದ ಪ್ರಮೋದ್ ಮುತಾಲಿಕ್‍ರವರು ತಮಗೆ ಬೇಕಾದ ರಾಜಕೀಯ ಪಕ್ಷಗಳಿಗೆ ಬೆಂಬಲ ನೀಡುವಂತೆ ಹೇಳುತ್ತಾರೆ. ಅಲ್ಲದೇ ಬಿಜೆಪಿಯಲ್ಲಿ ಟಿಕೆಟ್ ನೀಡದಿದ್ದಾಗ, ಬಿಜೆಪಿಗೆ ವಿರೋಧ ಮಾಡಿ ಅನ್ನುತ್ತಾರೆ. ಮತ್ತೊಂದು ದಿನ ಅದೇ ಪಕ್ಷಕ್ಕೆ ಬೆಂಬಲ ನೀಡಬೇಕು ಎಂದು ಹೇಳುತ್ತಾರೆ. ಹೀಗಾಗಿ ಅವರ ನಡೆಗೆ ಬೇಸತ್ತು ಸಂಘಟನೆಯಿಂದ ಹೊರಬರಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.
ಪ್ರಮೋದ್ ಮುತಾಲಿಕ್‍ರವರು ಕಾರ್ಯಕರ್ತರನ್ನು ತಮಗೆ ಬೇಕಾದ ಹಾಗೇ ಬಳಕೆ ಮಾಡಿಕೊಂಡು, ಆಮೇಲೆ ಕೈ ಬಿಡುತ್ತಾರೆ. ಹೀಗಾಗಿ ಜಿಲ್ಲೆಯ ಬಹುತೇಕ ಕಾರ್ಯಕರ್ತರು ಇಂದು ಸಾಮೂಹಿಕ ರಾಜೀನಾಮೆ ನೀಡಿದ್ದೇವೆ. ಇನ್ನು ಮುಂದೆ ಶ್ರೀರಾಮಸೇನೆ ಹಿಂದೂಸ್ಥಾನ ಎನ್ನುವ ಹೊಸ ಸಂಘಟನೆಯ ಮೂಲಕ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುತ್ತೇವೆ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv