ಮೈಸೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ದಿನದಿನಕ್ಕೂ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದೆ. ಮೈಸೂರಿನ ನಂಜನಗೂಡಿನ ಬಿಜೆಪಿ ಶಾಸಕ ಹರ್ಷವರ್ಧನ್ ತಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಈ ಬಗ್ಗೆ ಸಿಎಂ ಅವರಿಗೂ ಖುದ್ದಾಗಿ ಹೇಳಿದ್ದೇನೆ ಎಂದು ಹೇಳುವ ಮೂಲಕ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ ಬೆಳೆಸಿದ್ದಾರೆ.
ಹರ್ಷವರ್ಧನ್ ಸಂಸದ ಶ್ರೀನಿವಾಸ್ ಪ್ರಸಾದ್ ಅವರ ಅಳಿಯ. ಹೀಗಾಗಿ, ಇವರ ಹೇಳಿಕೆ ಗಂಭೀರತೆ ಪಡೆದು ಕೊಂಡಿದೆ. ಕೇಂದ್ರದಲ್ಲಿ ಇನ್ನೊಮ್ಮೆ ಮಂತ್ರಿ ಆಗಬೇಕು ಎಂಬ ಆಸೆ ಹೊಂದಿದ್ದ ಶ್ರೀನಿವಾಸ್ ಪ್ರಸಾದ್ ಅವರಿಗೆ ಅದು ಸಾಧ್ಯವಾಗಿಲ್ಲ. ಹೀಗಾಗಿ, ರಾಜ್ಯದಲ್ಲಿ ತಮ್ಮ ಅಳಿಯನ ಮಂತ್ರಿ ಮಾಡಲು ಲಾಬಿ ಆರಂಭಿಸಿದ್ದಾರಾ ಎಂಬ ಚರ್ಚೆ ಈಗ ಶುರುವಾಗಿದೆ.
Advertisement
Advertisement
ತಮ್ಮ ಮನದ ಬಯಕೆ ಹೇಳಿಕೊಂಡ ಹರ್ಷವರ್ಧನ್, ಕೇಂದ್ರದಲ್ಲಿ ಮಾಜಿ ಮಂತ್ರಿ ವಿ.ಶ್ರೀನಿವಾಸ್ ಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡಲಿಲ್ಲ. ಹಾಗಾಗಿ ರಾಜ್ಯದಲ್ಲಿ ಪ.ಜಾ. ಬಲಗೈ ಜನಾಂಗದಿಂದ ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಚಾಮರಾಜನಗರ ಲೋಕಸಭಾ ವ್ಯಾಪ್ತಿಯಲ್ಲಿ ವಿ.ಶ್ರೀನಿವಾಸ್ ಪ್ರಸಾದ್ ರವರ ಪ್ರಭಾವ ಅಗಾಧವಾಗಿದೆ. ಚಾಮರಾಜನಗರ ಲೋಕಸಭಾ ಮತ್ತು ನಂಜನಗೂಡಿನ ವಿಧಾನಸಭಾ ಕ್ಷೇತ್ರದಲ್ಲಿ ಮೊಟ್ಟಮೊದಲ ಬಾರಿಗೆ ಬಿಜೆಪಿ ಪಕ್ಷದ ಬಾವುಟವನ್ನು ಹಾರಿಸಿದ್ದೇವೆ. ಹೀಗಾಗಿ ಈ ಲೋಕಸಭಾ ಕ್ಷೇತ್ರ ಮತ್ತು ವಿಧಾನಸಭಾ ಕ್ಷೇತ್ರ ಹೆಚ್ಚು ಹೆಚ್ಚು ಅಭಿವೃದ್ಧಿಯಾಗಬೇಕಾದರೆ ಸಚಿವ ಸ್ಥಾನ ಇರಲೇಬೇಕು. ಇದು ಕ್ಷೇತ್ರದ ಜನರ ಬಯಕೆ ಕೂಡ ಎಂದರು.
Advertisement
ಸಮುದಾಯದ ಬಲಗೈ ಜನಾಂಗದ ಪರವಾಗಿ ನನಗೆ ಸಚಿವ ಸ್ಥಾನ ನೀಡಿದರೆ ಚಾಮರಾಜನಗರ ಲೋಕಸಭಾ ಕ್ಷೇತ್ರ ಮತ್ತು ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಇನ್ನಷ್ಟು ಪಕ್ಷವನ್ನು ಪ್ರಬಲ ಗೊಳಿಸಿ ಅಭಿವೃದ್ಧಿಕಾರ್ಯ ಮಾಡುತ್ತೇನೆ. ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ರವರಿಗೆ ನಮ್ಮ ಸಚಿವ ಸ್ಥಾನಗಳು ಬಯಕೆಯನ್ನು ತಿಳಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.