– ಮಂಗಳವಾರ ಬೌದ್ಧ ಧರ್ಮದ ಪ್ರಕಾರ ಶ್ರೀನಿವಾಸ್ ಅಂತ್ಯಕ್ರಿಯೆ
ಮೈಸೂರು: ಹಳೆ ಮೈಸೂರು ಭಾಗದ ಪ್ರಭಾವಿ ದಲಿತ ಮುಖಂಡ, ಸ್ವಾಭಿಮಾನಿ ರಾಜಕಾರಣಿ, ದಲಿತ ಸಮುದಾಯದ ಬಹುದೊಡ್ಡ ಧ್ವನಿ, ನಿಷ್ಕಳಂಕ ರಾಜಕೀಯ ಜೀವನ ಪೂರೈಸಿದ್ದ ವಿ. ಶ್ರೀನಿವಾಸ್ ಪ್ರಸಾದ್ (V Srinivasa Prasad) ಅಸ್ತಂಗತರಾಗಿದ್ದಾರೆ. ಈ ಮೂಲಕ ರಾಜ್ಯ ರಾಜಕೀಯದ ಮಹಾನ್ ಕೊಂಡಿ ಕಳಚಿದಂತಾಗಿದೆ.
ಮೈಸೂರಿನ (Mysuru) ಅಶೋಕಪುರಂನ ಶ್ರೀನಿವಾಸ ಪ್ರಸಾದ್ ಚಾಮರಾಜನಗರ (Chamarajanagar) ಮೀಸಲು ಲೋಕಸಭಾ ಕ್ಷೇತ್ರದಿಂದ ಆರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ನಂಜನಗೂಡು ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದರು. ಕೇಂದ್ರ ಮತ್ತು ರಾಜ್ಯದಲ್ಲಿ ಒಮ್ಮೆ ಸಚಿವರಾಗಿ ಕೆಲಸ ಮಾಡಿ ಕಳೆದ ತಿಂಗಳು ರಾಜಕೀಯ ನಿವೃತ್ತಿ ಪಡೆದು ವಿಶ್ರಾಂತಿ ಜೀವನ ಆರಂಭಿಸಿದ್ದರು. ಶ್ರೀನಿವಾಸ್ ಪ್ರಸಾದ್ ಅವರಿಗೆ ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳಿದ್ದಾರೆ. ಇದನ್ನೂ ಓದಿ: ಪ್ರವಾಸಿಗರೇ ಗಮನಿಸಿ – ಊಟಿ, ಕೊಡೈಕೆನಾಲ್‌ಗೆ ಹೋಗಬೇಕಾದ್ರೆ ಇ-ಪಾಸ್ ಕಡ್ಡಾಯ
ರಾಜ್ಯಶಾಸ್ತ್ರದಲ್ಲಿ ಎಂ.ಎ ಮಾಡಿದ್ದ ಶ್ರೀನಿವಾಸ್ ಪ್ರಸಾದ್ 1974ರಲ್ಲಿ ಮೈಸೂರಿನ ಕೃಷ್ಣರಾಜ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಚುನಾವಣಾ ರಾಜಕೀಯ ಪ್ರವೇಶಿಸಿದ್ದರು. ಮೊದಲ ಚುನಾವಣೆಯಲ್ಲಿ ಸೋತಿದ್ದರು. 1978ರಲ್ಲಿ ಟಿ.ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದರು. ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಕಣಕ್ಕೆ ಇಳಿದು ನಾಲ್ಕು ಬಾರಿ ಗೆದ್ದರು. ಒಮ್ಮೆ ಜೆಡಿಯು ಅಭ್ಯರ್ಥಿಯಾಗಿ ಗೆದ್ದು ಕೇಂದ್ರದ ಮಂತ್ರಿಯಾಗಿದ್ದರು. 2019ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸಂಸದನಾಗಿ ಆಯ್ಕೆ ಆಗಿದ್ದರು. ಅಲ್ಲದೆ ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ 2008 ಹಾಗೂ 2013 ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಕಂದಾಯ ಸಚಿವರಾಗಿದ್ದ ಶ್ರೀನಿವಾಸ್ ಪ್ರಸಾದ್ ಅವಿವಾಹಿತ ಮಹಿಳೆಯರಿಗೆ ಮಾಶಾಸನ ನೀಡುವ ಮಹತ್ವದ ಮನಸ್ವಿನಿ ಯೋಜನೆಯನ್ನು ಜಾರಿಗೆ ತಂದಿದ್ದರು. ಇದನ್ನೂ ಓದಿ: ಬೈರತಿ ಬಸವರಾಜ್ ಕಾರು ಪಲ್ಟಿ – ಚಾಲಕ, ಗನ್ ಮ್ಯಾನ್‍ಗೆ ಗಾಯ
ತಮ್ಮ ಸಂಪುಟದಿಂದ ಕೈ ಬಿಟ್ಟ ಕಾರಣ ಕೋಪಗೊಂಡಿದ್ದ ಶ್ರೀನಿವಾಸ್ ಪ್ರಸಾದ್ ಸಿದ್ದರಾಮಯ್ಯ ವಿರುದ್ಧ ಬೇಸರಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರ್ಪಡೆಯಾದರು. ಬಳಿಕ 2018ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಇದನ್ನೂ ಓದಿ: ಮುರುಘಾ ಶ್ರೀಗೆ ಮೇ 27ರವರೆಗೆ ನ್ಯಾಯಾಂಗ ಬಂಧನ
ಆರು ಬಾರಿ ಸಂಸದರು ಹಾಗೂ ಎರಡು ಬಾರಿ ಶಾಸಕರಾಗಿ 40 ವರ್ಷಗಳ ಕಾಲ ಅಧಿಕಾರ ಇದ್ದರೂ ಕೂಡ ಎಂದಿಗೂ ಹೆಸರು ಕೆಡಿಸಿಕೊಳ್ಳದೇ ಕಳಂಕರಹಿತ ರಾಜಕೀಯ ಮಾಡಿದ್ದ ಖ್ಯಾತಿ ಶ್ರೀನಿವಾಸ್ ಪ್ರಸಾದ್ ಅವರಿಗಿದೆ. ದೀರ್ಘಕಾಲ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀನಿವಾಸ್ ಪ್ರಸಾದ್ ಇತ್ತೀಚಿಗೆ ಸಂಪೂರ್ಣ ವಿಶ್ರಾಂತಿಗೆ ಮೊರೆ ಹೋಗಿದ್ದರು. ಮೂತ್ರಪಿಂಡ ಕಾಯಿಲೆ ಉಲ್ಪಣಗೊಂಡು ಕೆಲ ದಿನಗಳ ಹಿಂದೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ. ಇದನ್ನೂ ಓದಿ: ಅಮಿತ್ ಶಾ ಫೇಕ್ ವಿಡಿಯೋ ಕೇಸ್ – ರೇವಂತ್ ರೆಡ್ಡಿಗೆ ಸಮನ್ಸ್, ಓರ್ವ ಕಾಂಗ್ರೆಸ್ ಕಾರ್ಯಕರ್ತ ಅರೆಸ್ಟ್
ಸುತ್ತೂರು ಶ್ರೀಗಳು, ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಹಲವು ಗಣ್ಯರು ಶ್ರೀನಿವಾಸ್ ಪ್ರಸಾದ್ ಅವರಿಗೆ ಅಂತಿಮ ನಮನ ಸಲ್ಲಿಸಿದರು. ನಾಳೆ (ಮಂಗಳವಾರ) ಶ್ರೀನಿವಾಸ್ ಪ್ರಸಾದ್ ಅವರ ಕುಟುಂಬದ ಟ್ರಸ್ಟ್ ಜಾಗದಲ್ಲಿ ಬೌದ್ಧ ಧರ್ಮದ ಪ್ರಕಾರ ಅಂತಿಮ ಸಂಸ್ಕಾರ ನಡೆಯಲಿದೆ. ಇದನ್ನೂ ಓದಿ: ಬಾಗಲಕೋಟೆಯಲ್ಲಿ ಬಾಲಾಕೋಟ್ ಏರ್‌ಸ್ಟ್ರೈಕ್ ರಹಸ್ಯ ರಿವೀಲ್ ಮಾಡಿದ ಮೋದಿ