ಮೈಸೂರು: ಎರಡು ದಿನ ಐಟಿಯವರು ಪರಮೇಶ್ವರ್ ಮನೆಯಲ್ಲಿ ಊಟ ಮಾಡಲು ಹೋಗಿದ್ದರಾ ಎಂದು ಪ್ರಶ್ನಿಸುವ ಮೂಲಕ ಐಟಿ ದಾಳಿ ಕುರಿತು ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಟಿಯವರು ಸುಖಾಸುಮ್ಮನೆ ಪರಮೇಶ್ವರ್ ಮನೆ ಮೇಲೆ ದಾಳಿ ಮಾಡಿಲ್ಲ. ಅವರ ಬಗ್ಗೆ ದೂರು ಬಂದ ಕಾರಣ ದಾಖಲೆಗಳನ್ನು ಸಂಗ್ರಹಿಸಿ ನಂತರ ದಾಳಿ ಮಾಡಿದ್ದಾರೆ. ಇದರಲ್ಲಿ ರಾಜಕೀಯ ಎಲ್ಲಿಂದ ಬಂತು, ಐಟಿ ಮತ್ತು ಇಡಿಯವರು ದೇಶದಲ್ಲಿ ದಿನಕ್ಕೆ ಸಾವಿರಾರು ದಾಳಿ ಮಾಡುತ್ತಾರೆ. ಎಲ್ಲಾ ದಾಳಿಗಳ ಎಲ್ಲಾ ವಿವರವನ್ನು ಎಲ್ಲರಿಗೂ ನೀಡಲಾಗುತ್ತದೆಯೇ? ಮೂರು ಜನ ಕಾಂಗ್ರೆಸ್ ನವರ ಮೇಲೆ ದಾಳಿ ಮಾಡಿದ ಕೂಡಲೇ ಇದು ರಾಜಕೀಯ ಪ್ರೇರಿತ ಎನ್ನುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
Advertisement
Advertisement
ಹಿಂದೆ ಬಿಜೆಪಿ ಸಂಸದ ಜಿ.ಎಂ.ಸಿದ್ದೇಶ್ವರ್ ಮನೆ ಮೇಲೆ ದಾಳಿಯಾಗಿರಲಿಲ್ಲವೇ, ಎಸ್.ಎಂ.ಕೃಷ್ಣ ಅಳಿಯನ ಮನೆ ಮೇಲೆ ದಾಳಿಯಾಗಿರಲಿಲ್ಲವೇ, ಹೀಗಿರುವಾಗ ಐಟಿ ದಾಳಿ ಬಿಜೆಪಿ ಪ್ರೇರಿತ ಎನ್ನುವುದು ಬಾಲಿಶತನ. ದಾಳಿ ಮಾಡಿದ ಕೂಡಲೇ ಅವರು ಅಪರಾಧಿಗಳಲ್ಲ. ಅದರ ಮೇಲೆ ಕೋರ್ಟ್ ಇರುತ್ತದೆ. ಕೋರ್ಟಿನಲ್ಲಿ ವಾದ ಮಾಡಿಕೊಳ್ಳಬಹುದು. ಸ್ವತಂತ್ರ ಸಂಸ್ಥೆ ಬಗ್ಗೆ ಆಧಾರ ರಹಿತ ಆರೋಪ ಮಾಡಬಾರದು ಎಂದು ತಿಳಿಸಿದರು.
Advertisement
ಬಿಜೆಪಿ ಮೇಲೆ ಸುಳ್ಳು ಆರೋಪ ಮಾಡಿ ದೇಶದಲ್ಲಿ ಕಾಂಗ್ರೆಸ್ ಹೇಳ ಹೆಸರಿಲ್ಲದಂತಾಗಿದೆ. ರಾಹುಲ್ ಗಾಂಧಿ ಎಲ್ಲೋ ತಲೆಮರೆಸಿಕೊಂಡು ಓಡಿ ಹೋಗಿದ್ದಾರೆ. ಪಕ್ಷ ನಿಭಾಯಿಸಲಾಗದೆ ಅಧ್ಯಕ್ಷ ಸ್ಥಾನವನ್ನು ಬಿಟ್ಟಿದ್ದಾರೆ. ರಾಜ್ಯದಲ್ಲೂ ಕಾಂಗ್ರೆಸ್ ಸ್ಥಿತಿ ಹೀನಾಯವಾಗಿದೆ. ಆಂತರಿಕ ಕಚ್ಚಾಟಗಳು ಕಾಂಗ್ರೆಸ್ ಪಕ್ಷದೊಳಗೆ ಹೆಚ್ಚಾಗಿವೆ. ಇಷ್ಟಾದರೂ ಕಾಂಗ್ರೆಸ್‍ಗೆ ಬುದ್ಧಿ ಬಂದಿಲ್ಲ. ಇನ್ನಾದರು ಬಿಜೆಪಿ ಮೇಲೆ ಸುಳ್ಳು ಆರೋಪ ಮಾಡುವುದನ್ನು ನಿಲ್ಲಿಸಲಿ. ಜನರ ವಿಶ್ವಾಸ ಗಳಿಸುವ ಪ್ರಯತ್ನ ಮಾಡಲಿ ಎಂದು ಐಟಿ ದಾಳಿ ಬಿಜೆಪಿ ಪ್ರೇರಿತ ಎಂಬ ಕಾಂಗ್ರೆಸ್ ಮುಖಂಡರ ಹೇಳಿಕೆಗೆ ವಿ.ಶ್ರೀನಿವಾಸ್ ಪ್ರಸಾದ್ ತಿರುಗೇಟು ನೀಡಿದ್ದಾರೆ.
Advertisement
ಕಲಾಪಗಳಿಗೆ ಮಾಧ್ಯಮಗಳನ್ನು ಹೊರಗೆ ಇಟ್ಟಿದ್ದು ಸರಿಯಲ್ಲ. ಸ್ಪೀಕರ್ ತಮ್ಮ ಕ್ರಮವನ್ನು ವಾಪಸ್ ಪಡೆಯಬೇಕು. ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುವುದು ನ್ಯಾಯ ಸಮ್ಮತವಲ್ಲ. ಮಾಧ್ಯಮದವರಿಂದ ಕಲಾಪದೊಳಗಿನ ಶಾಸಕರಿಗೆ ವ್ಯಕ್ತಿಗತವಾಗಿ ತೊಂದರೆಯಾದರೆ ಸ್ಪೀಕರ್ ಬಳಿ ಅವರು ದೂರು ಸಲ್ಲಿಸಬಹುದು. ಇದಕ್ಕಾಗಿ ಮಾಧ್ಯಮವನ್ನು ಕಲಾಪದಿಂದ ದೂರ ಇಡುವುದು ನನಗೆ ಸರಿ ಕಾಣುತ್ತಿಲ್ಲ. ಇದು ತಪ್ಪು ಸಂದೇಶ ರವಾನೆ ಮಾಡುತ್ತಿದೆ. ಹಿಂದೊಮ್ಮೆ ಇದೆ ವಿಚಾರದಲ್ಲಿ ಬಿಜೆಪಿಯವರೇ ಮಾಧ್ಯಮದ ಪರವಾಗಿ ನಿಂತಿದ್ದರು. ಈಗ ಅಧಿಕಾರಕ್ಕೆ ಬಂದಾಗ ವಿರೋಧಿ ಆಶಯ ತಳೆಯುವುದು ಸರಿಯಲ್ಲ ಸದನದಲ್ಲಿ ಖಾಸಗಿ ಮಾಧ್ಯಮಗಳಿಗೆ ನಿರ್ಬಂಧ ಹೇರಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.