ಮೈಸೂರು: ರಾಜಕೀಯದಲ್ಲಿ ಬದ್ಧ ವೈರಿಗಗಳೆಂದೇ ಗುರುತಿಸಿಕೊಂಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಒಂದೇ ವೇದಿಕೆಯಲ್ಲಿ ಇಂದು ಕಾಣಿಸಿಕೊಂಡರು.
ಟಿ.ನರಸೀಪುರದಲ್ಲಿ ನಡೆದ ಅಂಬೇಡ್ಕರ್ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಈ ಇಬ್ಬರು ನಾಯಕರು ಭಾಗಿಯಾಗಿದ್ದರು. ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿ ಸಂಸದ ಶ್ರೀನಿವಾಸ್ ಪ್ರಸಾದ್ ಅವರಿಗಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೆಲ ಸಮಯದ ಕಾದು ನಿಂತರು. ಶ್ರೀನಿವಾಸ್ ಪ್ರಸಾದ್ ಅವರು ಆಗಮಿಸಿದ ಬಳಿಕವೇ ಪ್ರತಿಮೆಯನ್ನು ಅನಾವರಣ ಮಾಡಿದರು.
Advertisement
Advertisement
ನರಸೀಪುರದ ತಾಲೂಕು ಕಚೇರಿ ಮುಂದೆ ನಿರ್ಮಿಸಿರುವ ಪ್ರತಿಮೆಯ ಅನಾವರಣ ಕಾರ್ಯಕ್ರಮದಲ್ಲಿ ಶ್ರೀನಿವಾಸ್ ಪ್ರಸಾದ್, ಸಿದ್ದರಾಮಯ್ಯ ಸೇರಿದಂತೆ ಮಾಜಿ ಸಚಿವ ಮಹದೇವಪ್ಪ, ಶಾಸಕರಾದ ಯತೀಂದ್ರ ಭಾಗಿಯಾಗಿದ್ದರು. ಕಾರ್ಯಕ್ರಮದ ಸಂದರ್ಭದಲ್ಲಿ ಮಹದೇವಪ್ಪ ಪುತ್ರ ಸುನೀಲ್ ಬೋಸ್ ಹಾಗೂ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರೊಂದಿಗೆ ಶ್ರೀನಿವಾಸ್ ಪ್ರಸಾದ್ ಆತ್ಮೀಯವಾಗಿ ಮಾತನಾಡಿದರು.
Advertisement
ಪ್ರತಿಮೆ ಅನಾವರಣ ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, ನಮಗೆ ರಾಜಕೀಯ ಸ್ವಾತಂತ್ರ್ಯ ಕೇವಲ ಮತ ಹಾಕುವಾಗ ಮಾತ್ರ ಇರುತ್ತದೆ. ನಾವೆಲ್ಲ ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ದೇಶದಲ್ಲಿ ಸಂವಿಧಾನ ಬದಲಾವಣೆ ಮಾಡಲು ಯಾರಾದರೂ ಹೋದರೆ ರಕ್ತಪಾತವಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಅಲ್ಲದೇ ಅಂಬೇಡ್ಕರ್ ಅವರು ಒಂದು ಜಾತಿಗೆ ಸಿಮೀತವಾಗಿಲ್ಲ. ಒಂದೇ ಜಾತಿಗೋಸ್ಕರ ಕೆಲಸ ಮಾಡಿಲ್ಲ. ಎಲ್ಲಾ ಶೋಷಿತರ ಪರವಾಗಿ ಕೆಲಸ ಮಾಡಿದ್ದಾರೆ. ನಮ್ಮ ಸರ್ಕಾರ ಇದ್ದಾಗ ಯಾವ ದಲಿತರು ಬಂದು ಕೇಳಿರಲಿಲ್ಲ. ಆದರೂ ಮುಖ್ಯಮಂತ್ರಿಯಾಗಿ ಎಸ್‍ಟಿ ಮತ್ತು ಎಸ್‍ಸಿ ಸಮುದಾಯಕ್ಕೆ ಹಣವನ್ನ ಮೀಸಲಿಟ್ಟು ಅವರ ಪರ ನಿಂತೆ. ನಮ್ಮ ಸರ್ಕಾರ ದಲಿತರ ಪರವಾಗಿ ಹಲವು ಕಾರ್ಯಕ್ರಮಗಳನ್ನು ಮಾಡಿದೆ ಎಂದರು.
Advertisement
ಆ ಬಳಿಕ ಮಾತನಾಡಿದ ಶ್ರೀನಿವಾಸ್ ಪ್ರಸಾದ್ ಅವರು, ನಮ್ಮನ್ನು ಒಡೆದು ಆಳುವವರು ನಮ್ಮ ನಡುವೆ ಹಲವರಿದ್ದಾರೆ. ಅವರ ಬಗ್ಗೆ ನಾವು ಎಚ್ಚರಿಕೆಯಿಂದ ಇರಬೇಕು. ಎಲ್ಲರೂ ಒಟ್ಟಾಗಿ ನಡೆಯಬೇಕು ಎಂದು ಹೇಳುವ ಮೂಲಕ, ಸಿದ್ದರಾಮಯ್ಯ ಹೆಸರನ್ನು ಪ್ರಸ್ತಾಪಿಸದೆ ನುಡಿದರು. ಆದರೆ ಈ ಸಂದರ್ಭದಲ್ಲಿ ಸಿದ್ಧರಾಮಯ್ಯ ನಿದ್ರೆಗೆ ಜಾರಿದ್ದು ಕಂಡು ಬಂತು.