ಯುವ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷರಾಗಿ ಭದ್ರಾವತಿಯ ಶ್ರೀನಿವಾಸ್ ಬಿವಿ ಆಯ್ಕೆ

Public TV
2 Min Read
srinivas BV

ನವದೆಹಲಿ: ಭಾರತ ಯುವ ಕಾಂಗ್ರೆಸ್ಸಿನ(ಐವೈಸಿ) ಹಂಗಾಮಿ ಅಧ್ಯಕ್ಷರಾಗಿ ಕರ್ನಾಟಕ ಮೂಲದ ಶ್ರೀನಿವಾಸ್ ಬಿ.ವಿ ಅವರನ್ನು ಆಯ್ಕೆ ಮಾಡಲಾಗಿದೆ.

ಕರ್ನಾಟದ ಭದ್ರಾವತಿಯವರಾದ ಶ್ರೀನಿವಾಸ್.ಬಿ.ವಿ ಅವರು ಈ ಹಿಂದೆ ಅಖಿಲ ಭಾರತ ಯುವ ಕಾಂಗ್ರೆಸ್ ಘಟಕದ ಉಪಾಧ್ಯಕ್ಷರಾಗಿದ್ದ ಕಾರ್ಯನಿರ್ವಹಿಸಿದ್ದರು. ಆದರೆ ಈಗ ಅವರಿಗೆ ಸಂಘಟನೆಯ ಹಂಗಾಮಿ ಅಧ್ಯಕ್ಷರಾಗಿ ಬಡ್ತಿ ನೀಡಲಾಗಿದೆ.

ಈ ಹಿಂದೆ ಕೇಶವ್ ಚಂದ್ ಯಾದವ್ ಆವರು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಆದರೆ 2019ರ ಲೋಕಸಭಾ ಚುನಾವಣೆ ಸೋಲಿನ ಹೊಣೆ ಹೊತ್ತು ಅವರು ತಮ್ಮ ಹುದ್ದೆ ತ್ಯಜಿಸಿದ್ದರು. ಯಾದವ್ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಖಾಲಿಯಿದ್ದ ಸ್ಥಾನಕ್ಕೆ ಶ್ರೀನಿವಾಸ್ ಅವರನ್ನು ಆಯ್ಕೆ ಮಾಡಲಾಗಿದೆ.

srinivas BV 1

ಈ ಬಗ್ಗೆ ಟ್ವೀಟ್ ಮಾಡಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಪ್ರಕಟಣೆ ಹೊರಡಿಸಿದ್ದಾರೆ. ಶ್ರೀನಿವಾಸ್ ಬಿ.ವಿ ಅವರನ್ನು ಅಖಿಲ ಭಾರತ ಯುವ ಕಾಂಗ್ರೆಸ್ ಘಟಕದ ಮಧ್ಯಂತರ ಅಧ್ಯಕ್ಷರನ್ನಾಗಿ ಎಐಸಿಸಿ ಅಧ್ಯಕ್ಷರು ನೇಮಕ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಹಾಗೆಯೇ ಐವೈಸಿ ಕೂಡ ಈ ಬಗ್ಗೆ ಟ್ವೀಟ್ ಮಾಡಿ ಶುಭಕೋರಿದೆ. ಅಖಿಲ ಭಾರತ ಯುವ ಕಾಂಗ್ರೆಸ್ ಘಟಕದ ಮಧ್ಯಂತರ ಅಧ್ಯಕ್ಷರನ್ನಾಗಿ ಆಯ್ಕೆಯಾಗಿರುವುದಕ್ಕೆ ನಮ್ಮ ಪ್ರೀತಿಯ ನಾಯಕ ಶ್ರೀನಿವಾಸ್ ಬಿ.ವಿ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ನಿಮ್ಮ ನಮ್ರತೆ, ಪ್ರೀತಿ, ಸ್ವೀಕಾರಿಸುವ ರೀತಿ ಹಾಗೂ ಧೈರ್ಯದಿಂದ ಮುನ್ನುಗುವ ಛಲ ಎಲ್ಲರನ್ನು ಪ್ರೇರೆಪಿಸುತ್ತದೆ. ಇದು ಹೀಗೆಯೇ ಮುಂದುವರಿಯಲಿ. ದೇವರು ಒಳ್ಳೆದು ಮಾಡಲಿ ಎಂದು ಬರೆದು ಟ್ವೀಟ್ ಮಾಡಿದೆ.

ಈ ಹಿಂದೆ ಯುವ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿಯಾಗಿದ್ದ ಶ್ರೀನಿವಾಸ್ ಅವರು, ಪಕ್ಷ ನೀಡಿದ ಹಲವು ಗುರುತರ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಗುಜರಾತ್, ಉತ್ತರಪ್ರದೇಶ, ತೆಲಂಗಾಣ ಉಸ್ತುವಾರಿಯನ್ನು ನಿರ್ವಹಿಸಿದ್ದರು. ಗುಜರಾತ್ ವಿಧಾನಸಭಾ ಚುನಾವಣೆ ವೇಳೆ ರಾಹುಲ್ ಗಾಂಧಿ ಅವರ ಮೆಚ್ಚುಗೆಗೆ ಪಾತ್ರವಾಗಿದ್ದರು.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರೇಮಿಗಳ ದಿನಾಚರಣೆ ದಿನಕ್ಕೆ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅಡ್ಡಿಪಡಿಸಿದಾಗ ಅವರ ಮುಖಕ್ಕೆ ಮಸಿ ಬಳಿಯುವ ಮೂಲಕ ಶ್ರೀನಿವಾಸ್ ಮುನ್ನೆಲೆಗೆ ಬಂದಿದ್ದರು. ಆದಾದ ಬಳಿಕ ಇವರನ್ನು ರಾಹುಲ್ ಗಾಂಧಿ ಅವರು ಯೂತ್ ಕಾಂಗ್ರೆಸ್ ಘಟಕಕ್ಕೆ ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *