ಬೆಂಗಳೂರು: ಇದೀಗ ತಾನೇ ಹೊಸತಾಗಿ ಎಂಟ್ರಿ ಕೊಟ್ಟವರ ಮೇಲೂ ಆಗಾಗ ಅಪ್ ಡೇಟ್ ಆಗಿಲ್ಲ ಎಂಬಂಥಾ ಆರೋಪಗಳು ಕೇಳಿ ಬರೋದಿದೆ. ಆದರೆ ಅದೆಷ್ಟೋ ದಶಕಗಳಿಂದ ಚಿತ್ರರಂಗದ ಭಾಗವಾಗಿದ್ದೂ, ಆಯಾ ಕಾಲಘಟ್ಟಗಳಿಗೆ ತಕ್ಕಂತೆ ಹೊಂದಿಕೊಳ್ಳುತ್ತಾ ಮುಂದುವರೆಯೋದು ನಿಜಕ್ಕೂ ಸವಾಲಿನ ಕೆಲಸ. ಅದನ್ನು ಸಾಧ್ಯವಾಗಿಸಿಕೊಳ್ಳುವ ಕಸುವು ಕೆಲವೇ ಕೆಲ ಮಂದಿಗೆ ಮಾತ್ರವೇ ಸಿದ್ಧಿಸಿರುತ್ತೆ. ಸದ್ಯ ಭಾರೀ ನಿರೀಕ್ಷೆಗಳ ಜೊತೆಗೆ ಚಿತ್ರಮಂದಿರದತ್ತ ಪಯಣ ಬೆಳೆಸಿರುವ ವೀಕೆಂಡ್ ಚಿತ್ರದ ನಿರ್ದೇಶಕ ಶೃಂಗೇರಿ ಸುರೇಶ್ ಆ ವಿರಳರ ಸಾಲಿನಲ್ಲಿ ಪ್ರಧಾನವಾಗಿ ಗುರುತಿಸಿಕೊಳ್ಳುತ್ತಾರೆ. ಅಂಥಾ ಗುಣದಿಂದಲೇ ಅವರು ಈ ತಲೆಮಾರಿನ ನಿರ್ದೇಶಕರೂ ಬೆರಗಾಗುವಂಥಾ ವೀಕೆಂಡ್ ಚಿತ್ರದ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗೋ ಉತ್ಸಾಹದಿಂದಿದ್ದಾರೆ.
Advertisement
ಸುರೇಶ್ ಶೃಂಗೇರಿ ಎಂಬುದು ಕನ್ನಡ ಚಿತ್ರರಂಗದ ಪಾಲಿಗೆ ಪರಿಚಿತ ಹೆಸರು. ತೀರಾ ಶಂಕರ್ ನಾಗ್ ಅವರ ಚಿತ್ರಗಳಿಂದ ಆರಂಭವಾಗಿ ಈವರೆಗೂ ಸಲೀಸಾಗಿ ಲೆಕ್ಕಕ್ಕೆ ಸಿಗದಷ್ಟು ಚಿತ್ರಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿರುವವರು ಸುರೇಶ್. ಆ ನಂತರ ಸ್ವತಂತ್ರ ನಿರ್ದೇಶಕರಾಗಿಯೂ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಕೋಮಲ್ ಅಭಿನಯದ ಲೊಡ್ಡೆ ಸೇರಿದಂತೆ ಒಂದಷ್ಟು ಚಿತ್ರಗಳನ್ನು ನಿರ್ದೇಶನ ಮಾಡಿರೋ ಸುರೇಶ್ ಅವರೀಗ ವೀಕೆಂಡ್ ಚಿತ್ರದ ಮೂಲಕ ಯೂಥ್ ಫುಲ್ ಕಥೆಯೊಂದಿಗೆ ಮತ್ತೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ.
Advertisement
Advertisement
ಸುರೇಶ್ ಅವರ ಮೂಲವಿರೋದು ಶೃಂಗೇರಿಯಲ್ಲಿ. ಇಲ್ಲಿನ ಕೆರೆದಂಡೆ ಪ್ರದೇಶದಲ್ಲಿ ಇವತ್ತಿಗೂ ಇವರ ಸಂಬಂಧಿಕರಿದ್ದಾರೆ. ಆದರೆ ಸುರೇಶ್ ಅವರು ಬೆಳೆದದ್ದೆಲ್ಲ ಶಿವಮೊಗ್ಗದಲ್ಲಿ. ಅವರ ತಾಯಿ ಶಿಕ್ಷಕಿಯಾಗಿದ್ದವರು. ಈ ಕಾರಣದಿಂದಲೇ ಆರಂಭ ಕಾಲದಿಂದಲೂ ಓದು ಸೇರಿದಂತೆ ಎಲ್ಲ ಚಟುವಟಿಕೆಯಲ್ಲಿಯೂ ಮುಂದಿದ್ದ ಸುರೇಶ್ ಅವರು ಶಿವಮೊಗ್ಗದ ನ್ಯಾಷನಲ್ ಹೈಸ್ಕೂಲಿನಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಆ ಕಾಲದಿಂದಲೇ ಚಿತ್ರರಂಗದ ಕನಸು ಕಟ್ಟಿಕೊಂಡಿದ್ದ ಅವರು ಅದನ್ನು ನನಸು ಮಾಡಿಕೊಂಡು ಮೂವತ್ತು ವರ್ಷಗಳ ಕಾಲ ಯಾನ ಕೈಗೊಂಡಿದ್ದೇ ಒಂದು ಚೆಂದದ ಕಥೆ.
Advertisement
ಅದು ಹೇಗೋ ಕಷ್ಟಪಟ್ಟು ಚಿತ್ರರಂಗಕ್ಕೆ ಅಡಿಯಿರಿಸಿದ್ದ ಅವರಿಗೆ ಭಕ್ತವತ್ಸಲಂ ಸಹಾಯ ಮಾಡಿದ್ದರು. ಅದಾದ ನಂತರದಲ್ಲಿ ಸಿಕ್ಕಿದ ಸಣ್ಣಪುಟ್ಟ ಅವಕಾಶಗಳನ್ನೂ ಬಳಸಿಕೊಂಡು ಹಂತ ಹಂತವಾಗಿ ಮೇಲೇರಿ ಬಂದ ಸುರೇಶ್ ಅವರ ಪಾಲಿಗೆ ಅತಿರಥ ಮಹಾರಥರ ಸಾಂಗತ್ಯವೂ ದೊರೆತಿತ್ತು. ರಮೇಶ್ ಭಟ್ ಅವರಂಥಾ ಸಂಪರ್ಕಕ್ಕೆ ಬಂದು ಬಿ ಸಿ ಗೌರಿಶಂಕರ್ ಅವರ ಬಳಿ ಎಂಟು ವರ್ಷಗಳ ಕಾಲ ಸುರೇಶ್ ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದರು. ರಾಜೇಂದ್ರ ಬಾಬು ಗರಡಿಯಲ್ಲಿಯೂ ಪಳಗಿಕೊಂಡಿದ್ದರು. ಉಪೇಂದ್ರ ನಿರ್ದೇಶನದ ಮೊದಲ ಚಿತ್ರ ತರ್ಲೆ ನನ್ಮಗಕ್ಕೂ ಅಸೋಸಿಯೇಟ್ ಡೈರೆಕ್ಟರ್ ಆಗಿ ಸುರೇಶ್ ಕಾರ್ಯ ನಿರ್ವಹಿಸಿದ್ದರು. ಕಿಚ್ಚ ಸುದೀಪ್ ಅವರ ಮೈ ಆಟೋಗ್ರಾಫ್ ಚಿತ್ರಕ್ಕೂ ಕೂಡಾ ಅವರು ಕಾರ್ಯ ನಿರ್ವಹಿಸಿದ್ದಾರೆ.
ಹೀಗೆ ಸಾಗಿ ಬಂದಿರೋ ಅವರು ಎಲ್ಲ ಸಂದರ್ಭಗಳಲ್ಲಿಯೂ ಯುವ ಸಮೂಹದ ಸಂಪರ್ಕದಲ್ಲಿದ್ದದ್ದೇ ಹೆಚ್ಚು. ಆದ್ದರಿಂದಲೇ ಜನರೇಷನ್ ಗ್ಯಾಪ್ ನಂಥಾ ಸಮಸ್ಯೆ ಅವರನ್ನೆಂದೂ ಬಾಧಿಸಲೇ ಇಲ್ಲ. ಹೀಗೆ ಅವರು ಮೂರು ದಶಕಗಳ ಕಾಲ ಚಿತ್ರರಂಗದೊಂದಿಗೆ ಒಡನಾಡಿದ್ದಾರೆ. ಇಷ್ಟೊಂದು ಅನುಭವ ಹೊಂದಿದ್ದರೂ ಕೂಡಾ ನಿರ್ದೇಶಕನಾಗೋ ಕನಸು ಮೈ ತುಂಬಾ ಹೊದ್ದುಕೊಂಡಿದ್ದ ಕೆಲಸ ಕಾರ್ಯಗಳ ನಡುವೆ ನನಸಾಗಿರಲಿಲ್ಲ. ಒಂದರ ಹಿಂದೊಂದರಂತೆ ಚಿತ್ರಗಳು ಸಿಗುತ್ತಲೇ ಇದ್ದುದರಿಂದ ಸುರೇಶ್ ಅವರಿಗೆ ಅದೊಂದು ಕೊರಗಾಗಿಯೂ ಕಾಡಲಿಲ್ಲ. ಆದರೆ 2002ರಲ್ಲಿ ಅವರು ಪ್ರೇಮ ಎಂಬ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದರು. ಶಿವಧ್ವಜ್ ಮತ್ತು ಪ್ರೇಮ ಈ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ನಂತರ ಹೆಣ್ಣು ಭ್ರೂಣ ಹತ್ಯೆ ಕುರಿತಾದ ಸ್ತ್ರೀ ಶಕ್ತಿ ಎಂಬ ಸಿನಿಮಾವನ್ನೂ ಅವರು ನಿರ್ದೇಶನ ಮಾಡಿದ್ದರು. ಅದರಲ್ಲಿ ಸೋನು ಗೌಡ ಮನೋಜ್ಞ ಪಾತ್ರದಲ್ಲಿ ನಟಿಸಿದ್ದರು.
ಈ ರೀತಿಯಲ್ಲಿ ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ಅನುಭವ ಹೊಂದಿರುವ ಸುರೇಶ್ ಅವರೀಗ ವೀಕೆಂಡ್ ಎಂಬ ಯುವ ಆವೇಗದ ಕಥೆಯನ್ನು ನಿರ್ದೇಶನ ಮಾಡಿದ್ದಾರೆ. ಇದರ ನವೀನ ಆಲೋಚನಾ ಕ್ರಮವನ್ನು ಹಿರಿಯ ನಟ ಅನಂತ್ ನಾಗ್ ಅವರೇ ಮೆಚ್ಚಿಕೊಂಡಿದ್ದೂ ಆಗಿದೆ. ಅದುವೇ ವೀಕೆಂಡ್ ಕಥೆಯ ಕಸುವೆಂಥಾದ್ದೆಂಬುದಕ್ಕೆ ಉದಾಹರಣೆಯೂ ಹೌದು. ಇದೀಗ ಟ್ರೈಲರ್ ಮೂಲಕ ಎಲ್ಲರನ್ನು ಸೆಳೆದುಕೊಂಡಿರೋ ಈ ಚಿತ್ರ ಇಷ್ಟರಲ್ಲಿಯೇ ತೆರೆ ಕಾಣಲಿದೆ.