ಚಿಕ್ಕಮಗಳೂರು: ದೇಶಕ್ಕೆ ಮಾರಕವಾಗಿರೋ ಕೊರೊನಾ ವೈರಸ್‍ನಿಂದ ಬಂದಿರುವ ಸಂಕಷ್ಟ ನಿವಾರಣೆಗಾಗಿ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಜಿಲ್ಲೆಯ ಶೃಂಗೇರಿ ಮಠದ ಸಿಬ್ಬಂದಿ ವರ್ಗ 10 ಲಕ್ಷ ರೂಪಾಯಿಯನ್ನ ದೇಣಿಗೆಯಾಗಿ ನೀಡಿದೆ.
ಎಲ್ಲಾ ಸಿಬ್ಬಂದಿ ತಮ್ಮ ಮಾಸಿಕ ವೇತನದಲ್ಲಿ ಈ ಹಣ ನೀಡಿದ್ದಾರೆ. ಅಷ್ಟೇ ಅಲ್ಲದೇ ದೇಶವೇ ಲಾಕ್‍ಡೌನ್ ಆಗಿ ಕೆಲಸ ಕಾರ್ಯಗಳೆಲ್ಲಾ ನಿಂತಿರುವುದರಿಂದ ನಿರ್ಗತಿಕರು, ನಿರಾಶ್ರಿತರು ಹಾಗೂ ತಾಲೂಕಿನಾದ್ಯಂತ ಅವಶ್ಯಕತೆ ಇರುವ ಜನರಿಗೆ ಮಠದ ವತಿಯಿಂದ ಪ್ರತಿದಿನ ಬೆಳಗ್ಗೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿಯ ಊಟದ ವ್ಯವಸ್ಥೆ ಮಾಡುತ್ತಿದೆ. ಇದನ್ನೂ ಓದಿ: ಮೂರು ದಿನದಲ್ಲಿ ಪಿಎಂ ಕೇರ್ಸ್ ನಿಧಿಗೆ 7,314 ಕೋಟಿ ರೂ. ಜಮೆ
ಮಠದ ವಾಹನಗಳಲ್ಲಿ ಊಟ-ತಿಂಡಿಯನ್ನು ಜನರು ಇರುವಲ್ಲಿಗೆ ಹೋಗಿ ಮೂರು ಹೊತ್ತು ಕೂಡ ಆಹಾರ ತಲುಪಿಸಲಾಗುತ್ತಿದೆ. ಜನಸಾಮಾನ್ಯರು ಕೂಡ ಅಗತ್ಯವಿರುವವರಿಗೆ ಸಹಕಾರ ನೀಡಬೇಕೆಂದು ಮಠದ ಆಡಳಿತಾಧಿಕಾರಿ ಗೌರಿಶಂಕರ್ ಮನವಿ ಮಾಡಿದ್ದಾರೆ.
ಜೊತೆಗೆ ಜನಸಾಮಾನ್ಯರು ಕೂಡ ತಮ್ಮ ಕೈಲಾದಷ್ಟು ಮಟ್ಟಿಗೆ ಪ್ರಧಾನಿ ನಿಧಿಗೆ ಸಹಕರಿಸುವಂತೆ ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.