ಮಂಗಳೂರು: ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದರಿಂದ ಉದ್ಯಮಿ ಸಿದ್ಧಾರ್ಥ್ ಅವರು ಮಾನಸಿಕವಾಗಿ ಕುಗ್ಗಿದ್ದರು ಎಂದು ಶೃಂಗೇರಿ ಶಾಸಕ ರಾಜೇಗೌಡ ಹೇಳಿದ್ದಾರೆ.
ಶಾಸಕರು ಕಾಫಿ ಡೇ ಎಂಡಿ ಸಿದ್ಧಾರ್ಥ್ ಅವರ ಆಪ್ತ ಸ್ನೇಹಿತ ಹಾಗೂ ಹಿತೈಷಿಯಾಗಿದ್ದಾರೆ. ಸಿದ್ಧಾರ್ಥ್ ಅವರು ನಾಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಕಾರ್ಯಾಚರಣೆ ವೀಕ್ಷಿಸಿದರು. ಈ ವೇಳೆ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಶಾಸಕರು, ಸಿದ್ಧಾರ್ಥ್ ಅವರು ಲಕ್ಷಾಂತರ ಜನರಿಗೆ ಆಸರೆ, ಬದುಕು ಕೊಟ್ಟಿದ್ದಾರೆ. ಅವರು ಯಾವುದಕ್ಕೂ ಹೆದರಿದವರೇ ಅಲ್ಲ ಎಂದು ಕಣ್ಣೀರು ಹಾಕಿದರು.
Advertisement
Advertisement
ದೇಶಕ್ಕಾಗಿ ದುಡಿದು, ತೆರಿಗೆ ಕಟ್ಟಿದರೂ ಬೆಲೆ ಇಲ್ಲ ಎಂಬುದು ಅವರ ಮನಸ್ಸಿಗೆ ಬಂದಿತ್ತು. ಸಿದ್ಧಾರ್ಥ್ ಶಿಸ್ತು ಸಂಯಮದ ವ್ಯಕ್ತಿ. ಬಹಳ ತಾಳ್ಮೆಯಿಂದ ವರ್ತಿಸುತ್ತಿದ್ದರು. ಗ್ರಾಮೀಣ ಮತ್ತು ಗುಡ್ಡಗಾಡು ಜನಕ್ಕೆ ಉದ್ಯೋಗ ಕೊಟ್ಟ ಮಹಾನೀಯ. ಐಟಿ ದಾಳಿಯ ನಂತರ ಸಿದ್ಧಾರ್ಥ ಕುಗ್ಗಿದ್ದರು. ಮನಸ್ಸಿಗೆ ಬಹಳ ನೋವು ಮಾಡಿಕೊಂಡಿದ್ದರು. ಸಿದ್ಧಾರ್ಥ್ ಅವರು ನಾಪತ್ತೆಯಾದ ಸುದ್ದಿ ಆಘಾತ ತಂದಿದೆ ಎಂದು ಶಾಸಕರು ತಿಳಿಸಿದರು.
Advertisement
ಸಿದ್ಧಾರ್ಥ್ ಅವರು ಸೋಮವಾರ ಸಂಜೆ 7 ಗಂಟೆ ಸುಮಾರಿನಿಂದ ಮಂಗಳೂರಿನ ನೇತ್ರಾವತಿ ಸೇತುವೆ ಬಳಿಯಿಂದ ನಾಪತ್ತೆಯಾಗಿದ್ದು, ಇದೀಗ ಅವರ ಹುಡುಕಾಟ ಕಾರ್ಯ ಭರದಿಂದ ಸಾಗುತ್ತಿದೆ. ಸ್ಥಳಕ್ಕೆ ರಾಜಕೀಯ ನಾಯಕರು, ಸಾರ್ವಜನಿಕರು, ಮುಳುಗುತ್ಞರು ಹಾಗೂ ಅಗ್ನಿಶಾಮಕ ದಳದವರು ದೌಡಾಯಿಸಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಸಿದ್ಧಾರ್ಥ್ ಪತ್ತೆಗಾಗಿ ಸೇನಾ ಹೆಲಿಕಾಪ್ಟರ್ ಕೂಡ ಬರುವ ಸಾಧ್ಯತೆಗಳಿವೆ.