ನಿಮ್ಮ ಆಜ್ಞೆಯಂತೆ ಪಾಲಿಸ್ತೀನಿ: ಅತ್ತಿಗೆ ನೋವಿನಲ್ಲೂ ಶ್ರೀಮುರಳಿ ಹುಟ್ಟುಹಬ್ಬ

Public TV
1 Min Read
srimurali

ನಾಳೆ ನಟ ಶ್ರೀಮುರಳಿ ಅವರ ಹುಟ್ಟು ಹಬ್ಬ (Birthday). ಈ ವರ್ಷದಲ್ಲಿ ಅತ್ತಿಗೆಯ ಸಾವಿನಿಂದಾಗಿ ಬಹುಶಃ ಶ್ರೀಮುರಳಿ (Srimurali) ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದೇ ನಂಬಲಾಗಿತ್ತು. ಆದರೆ, ಅಭಿಮಾನಿಗಳ ಒತ್ತಾಯಕ್ಕೆ ಮಣಿದು, ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಮತ್ತು ಅಭಿಮಾನಿಗಳನ್ನು ಅಂದು ಭೇಟಿ ಕೂಡ ಮಾಡಲಿದ್ದಾರೆ.

Srimurali 2

ಈ ಕುರಿತಂತೆ ವಿಡಿಯೋವೊಂದನ್ನು ಮಾಡಿರುವ ಶ್ರೀಮುರಳಿ, ತಮ್ಮ ಮನದಾಳದ ಮಾತುಗಳನ್ನು ಅದರಲ್ಲಿ ಹಂಚಿಕೊಂಡಿದ್ದಾರೆ. ಅತ್ತಿಗೆಯ ಕಳೆದುಕೊಂಡ ನೋವಿನ ಮಧ್ಯೆಯೂ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವುದಕ್ಕೆ ಅವರು ಕಾರಣವನ್ನೂ ನೀಡಿದ್ದಾರೆ.

Srimurali 1

ಎಲ್ಲರಿಗೂ ನಮಸ್ಕಾರ. ಇಷ್ಟು ವರ್ಷದ ಹುಟ್ಟುಹಬ್ಬಕ್ಕೆ ಸೇರಲು ಆಗಿರಲಿಲ್ಲ. ಯಾಕೆ ಎಂಬುದು ನಿಮಗೂ ಗೊತ್ತು. ಈ ಬಾರಿಯೂ ಸೇರುವ ಪರಿಸ್ಥಿತಿ ಇರಲಿಲ್ಲ. ಆದ್ರೂ, ಅಭಿಮಾನಿಗಳ ಒತ್ತಾಯದ ಮೇರೆಗೆ , ನೀವು ಕೊಡ್ತಿರೋ ಪ್ರೀತಿ, ಏನ್‌ ಹೇಳಬೇಕು ಅಂತ ಗೊತ್ತಾಗ್ತಿಲ್ಲ. ನಿಮ್ಮ ಆಜ್ಞೆಯಂತೆಯೇ ನಡೀಬೇಕು. ಹಾಗಾಗಿ ಈ ವರ್ಷ ನಿಮ್ಮನ್ನೆಲ್ಲ ಭೇಟಿ ಮಾಡೋಕೆ ನನಗೊಂದು ಅವಕಾಶ ಸಿಕ್ಕಿದೆ. ಇದೇ ಡಿಸೆಂಬರ್‌ 17ನೇ ತಾರೀಖು, ವಸಂತ ನಗರದ ದೇವರಾಜ್‌ ಅರಸ್‌ ಭವನ್‌, ಮಿಲರ್ಸ್‌ ರೋಡ್‌, ಅಂಬೇಡ್ಕರ್‌ ಭವನ್‌ ಹಿಂದಿರುವ ಜಾಗದಲ್ಲಿ ಬೆಳಗ್ಗೆ 10:30 ನಂತರ ನಾನು ನಿಮಗೆ ಸಿಗ್ತಿನಿ’.

“ಯಾರ್ಯಾರು ನೋಡಬೇಕು, ಮೀಟ್‌ ಮಾಡಬೇಕೋ, ಜೊತೆಗೆ ಸೇರೋಣ. ಮತ್ತೊಂದು ಮನವಿ. ಯಾರೂ ಹಾರ ತುರಾಯಿ, ಮತ್ತೊಂದು ಮಗದೊಂದು ಗಿಫ್ಟ್‌ ತರಬೇಡಿ. ಹಣ ಖರ್ಚು ಮಾಡಬೇಡಿ. ಅದು ನಿಮ್ಮ ದುಡಿಮೆ. ಇದಕ್ಕೆಲ್ಲ ಖರ್ಷು ಮಾಡಬೇಡಿ. ಮನಸ್ಸಿದ್ದರೆ, ಅನಾಥಾಶ್ರಮಕ್ಕೆ ನೀಡಿ, ದಾನ ಧರ್ಮ ಮಾಡಿ. ಖಾಲಿ ಕೈಯಲ್ಲಿ ಬನ್ನಿ. ಮನಸ್ಸು ಬಿಚ್ಚಿ ಮಾತನಾಡೋಣ. ನಿಮಗಾಗಿ, ನಿಮ್ಮನ್ನು ಭೇಟಿ ಮಾಡುವ ಉದ್ದೇಶಕ್ಕೆ ಮಾತ್ರ ಈ ಭೇಟಿ. ಬನ್ನಿ ಸಿಗೋಣ, ಜೈ ಹಿಂದ್‌’ ಎಂದು ಶ್ರೀಮುರಳಿ ಹೇಳಿದ್ದಾರೆ.

Share This Article