ಬೆಂಗಳೂರು: ಕಾಂಗ್ರೆಸ್ ರೆಸಾರ್ಟಿನಿಂದ ರಾತ್ರೋರಾತ್ರಿ ಶಾಸಕ ಶ್ರೀಮಂತ್ ಪಾಟೀಲ್ ನಾಪತ್ತೆಯಾಗಿದ್ದಾರೆ. ಹೀಗಾಗಿ ಕಾಗವಾಡ ಶಾಸಕರನ್ನು ಹುಡುಕಿಕೊಂಡು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಮನೆ ಬಳಿ ಬುಧವಾರ ರಾತ್ರಿ ಗುಪ್ತ ಟೀಂ ಸುತ್ತುವರಿದಿತ್ತು.
ಯಡಿಯೂರಪ್ಪ ಅವರ ಧವಳಗಿರಿ ಮನೆಗೆ ಬುಧವಾರ ರಾತ್ರಿ ಗುಪ್ತಚರ ಇಲಾಖೆಯ ಅಧಿಕಾರಿಗಳು ಬಂದಿದ್ದರು. ಸುಮಾರು ಹೊತ್ತು ಗುಪ್ತಚರ ಇಲಾಖೆಯ ಐವರು ಅಧಿಕಾರಿಗಳು ಬಿಎಸ್‍ವೈ ಮನೆ ಮುಂದೆ ರೌಂಡ್ಸ್ ಹಾಕುತ್ತಿದ್ದರು. ಅಷ್ಟೇ ಅಲ್ಲದೇ ಬಿ.ಎಸ್ ಯಡಿಯೂರಪ್ಪ ಮನೆಯ ಸಿಬ್ಬಂದಿ ಬಳಿಯೂ ಅಧಿಕಾರಿಗಳು ಮಾಹಿತಿ ಕಲೆ ಹಾಕಲು ಯತ್ನಿಸಿದ್ದರು.
Advertisement
Advertisement
ರಮೇಶ್ ಜಾರಕಿಹೊಳಿ ಆಪ್ತ, ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಕಳೆದ ರಾತ್ರಿ ದಿಢೀರ್ ಕಾಂಗ್ರೆಸ್ ಶಾಸಕರು ತಂಗಿರುವ ದೇವನಹಳ್ಳಿಯ ಪ್ರಕೃತಿ ರೆಸಾರ್ಟಿನಿಂದ ನಾಪತ್ತೆಯಾಗಿದ್ದರು. ಅದೇ ಸಮಯದಲ್ಲಿ ಯಡಿಯೂರಪ್ಪ ಅವರ ಆಪ್ತ ಸಂತೋಷ್ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು. ಹೀಗಾಗಿ ಎಸ್ಕೇಪ್ ಆಗಿದ್ದ ಶಾಸಕ ಬಿಎಸ್‍ವೈ ಅವರ ಮನೆಯಲ್ಲಿ ಇರಬಹುದೇ ಎಂಬ ಅನುಮಾನದ ಮೇರೆಗೆ ಗುಪ್ತಚರ ಇಲಾಖೆಯ ಅಧಿಕಾರಿಗಳು ಸಿಎಂ ಆದೇಶದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.
Advertisement
Advertisement
ಇತ್ತ ಬಿಎಸ್‍ವೈ ಆಪ್ತ ಸಹಾಯಕ ಸಂತೋಷ್ ಫೋನನ್ನು ಟ್ರ್ಯಾಕ್ ಮಾಡಿ ಮಾಹಿತಿ ಕಲೆ ಹಾಕಲು ಯತ್ನಿಸಿದ್ದಾರೆ. ಬಿ.ಎಸ್ ಯಡಿಯೂರಪ್ಪ ಮನೆಯ ಸಿಬ್ಬಂದಿ ಬಳಿ ಸಂತೋಷ್ ಬೇರೆ ಫೋನ್ ಬಳಸುತ್ತಿದ್ದಾರೆ. ಅವರ ನಂಬರ್ ಇದ್ಯಾ? ಹೀಗೆ ನಾನಾ ರೀತಿಯಲ್ಲಿ ಅಧಿಕಾರಿಗಳು ಪ್ರಶ್ನೆ ಮಾಡಿದ್ದಾರೆ. ಆದರೆ ಸಿಬ್ಬಂದಿ ಮಾತ್ರ ಯಾವುದೇ ಸುಳಿಯವನ್ನು ಬಿಟ್ಟುಕೊಟ್ಟಿಲ್ಲ. ಯಡಿಯೂರಪ್ಪ ಕೂಡ ರೆಸಾರ್ಟಿನಲ್ಲಿದ್ದ ಕಾರಣ ಅಧಿಕಾರಿಗಳು ಯಾವುದೇ ಮಾಹಿತಿ ಸಿಗದೇ ವಾಪಸ್ ಹೋಗಿದ್ದಾರೆ.