ಬೆಂಗಳೂರು: ಶ್ರೀಮುರಳಿ ಇತ್ತೀಚಿನ ವರ್ಷಗಳಲ್ಲಿ ಯಾವುದೇ ಸಿನಿಮಾ ಮಾಡಿದರೂ ಮಾಸ್ ಅವತಾರದಲ್ಲಿ ಮಿಂಚುತ್ತಾ ಬರುತ್ತಿದ್ದಾರೆ. ಉಗ್ರಂ ಚಿತ್ರದ ಮೂಲಕ ಶುರವಾಗಿದ್ದ ಆ ಹಂಗಾಮಾ ರಥಾವರ ಮತ್ತು ಮಫ್ತಿ ಮೂಲಕ ಮತ್ತಷ್ಟು ಕಳೆಗಟ್ಟಿಕೊಂಡಿದೆ. ಹೀಗೆ ಸಾಗಿ ಬಂದಿರೋ ಶ್ರೀಮುರಳಿ ಭರಾಟೆಯಲ್ಲಿಯೂ ಮತ್ತದೇ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆಂಬುದು ಈ ಹಿಂದೆಯೇ ಸಾಬೀತಾಗಿತ್ತು. ಆದರೆ ಟ್ರೇಲರ್ ಮೂಲಕ ಕಾಣಿಸಿದ್ದು ಮಾತ್ರ ಮತ್ತೊಂದು ಥರದ ಛಾಯೆ. ಯಾವ ಕ್ರಿಯಾಶೀಲ ನಟರೂ ಮತ್ತೆ ಮತ್ತೆ ಒಂದೇ ಥರದ ಗೆಟಪ್ಪಿನಲ್ಲಿ ಕಾಣಿಸಿಕೊಳ್ಳಲು ಇಷ್ಟ ಪಡುವುದಿಲ್ಲ. ಅಂಥಾ ಬದಲಾವಣೆಯ ಪರ್ವ ಕಾಲದಲ್ಲಿದ್ದ ಶ್ರೀಮುರಳಿಯೀಗ ಅತ್ಯಂತ ಭಿನ್ನವಾದ ಕಥೆ ಮತ್ತು ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಅಂಥಾ ಬದಲಾವಣೆಗೆ ಕಾರವಾಗಿರೋ ‘ಭರಾಟೆ’ ಇದೀಗ ಶುರುವಾಗಿದೆ.
Advertisement
ಇದು ಬೊಬ್ಬಿರಿದು ಅಬ್ಬರಿಸಿದ ಶ್ರೀಮುರಳಿಯ ಭರ್ಜರಿ ಭರಾಟೆ ಅಂತ ನಿಸ್ಸಂಶಯವಾಗಿ ಯಾರಿಗಾದರೂ ಅನ್ನಿಸದಿರೋದಿಲ್ಲ. ಅಂಥಾ ರುಚಿಕಟ್ಟಾದ ಚಿತ್ರವನ್ನೇ ಚೇತನ್ ಕುಮಾರ್ ಕಟ್ಟಿ ಕೊಟ್ಟಿದ್ದಾರೆ. ಆರಂಭದಿಂದಲೂ ಇದೊಂದು ವಿಶೇಷವಾದ ಕಥೆಯ ಚಿತ್ರ ಎಂಬ ಬಗ್ಗೆ ಚಿತ್ರತಂಡ ಸುಳಿವುಗಳನ್ನು ಬಿಟ್ಟು ಕೊಡುತ್ತಲೇ ಬಂದಿತ್ತು. ಅದಕ್ಕೆ ತಕ್ಕುದಾದ ಕಥೆಯೊಂದಿಗೆ ಈ ಚಿತ್ರ ಶ್ರೀಮುರಳಿಯವರನ್ನು ಹಲವಾರು ಶೇಡುಗಳಲ್ಲಿ ಪ್ರೇಕ್ಷಕರ ಮುಂದೆ ಅನಾವರಣಗೊಳಿಸುವಲ್ಲಿ ಗೆದ್ದಿದೆ. ಥರ ಥರದ ಶೇಡುಗಳಿರೋ ಪಾತ್ರದ ಮೂಲಕ ಶ್ರೀಮುರಳಿ ಕೂಡಾ ಎಲ್ಲರೂ ಅಚ್ಚರಿಗೊಳ್ಳುವಂಥಾ ಅಭಿನಯ ನೀಡಿದ್ದಾರೆ.
Advertisement
Advertisement
ಭರಾಟೆಯ ಕಥೆ ತೆರೆದುಕೊಳ್ಳುವುದೇ ರಾಜಸ್ಥಾನದಿಂದ. ಇಲ್ಲಿ ಶ್ರೀಮುರಳಿ ಜಗನ್ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಈತನಿಗೆ ನಾಟಿ ಔಷಧದ ವಿದ್ಯೆ ಎಂಬುದು ತಂದೆಯಿಂದ ಬಂದ ಬಳುವಳಿ. ನಾನಾ ರೀತಿಯ ಕಾಯಿಲೆಗಳಿಗೆ ಈ ಮೂಲಕವೇ ಔಷಧಿ ಕೊಡುತ್ತಾ ಅದರ ನಡುವೆಯೇ ಪ್ರವಾಸಿಗರ ಪಾಲಿಗೆ ಗೈಡ್ ಆಗಿಯೂ ಜನ್ ಕಾರ್ಯ ನಿರ್ವಹಿಸುತ್ತಿರುತ್ತಾನೆ. ಈ ನಾಟಿ ವೈದ್ಯ ಮತ್ತು ಗೈಡ್ ಕೆಲಸದ ನಡುವೆಯೇ ಜನುಮಾಂತರದ್ದೆಂಬಂತಿರೋ ವೈಶಮ್ಯದ ಕಥೆಯೊಂದು ಬಿಚ್ಚಿಕೊಳ್ಳುತ್ತದೆ. ಇದೇ ಹೊತ್ತಿನಲ್ಲಿ ಜಗನ್ ಕರ್ನಾಟಕಕ್ಕೆ ಪ್ರವೇಶಿಸುವಂಥಾ ಸಂದರ್ಭ ಸೃಷ್ಟಿಯಾಗುತ್ತೆ. ಅಲ್ಲೆಯೇ ತಾಜಸ್ಥಾನದಲ್ಲಿ ಗೈಡ್ ಆಗಿದ್ದಾಗ ಸಿಕ್ಕಿದ್ದ ಹುಡುಗಿ ಮತ್ತೆ ಮುಖಾ ಮುಖಿಯಾಗುತ್ತಾಳೆ.
Advertisement
ಅಲ್ಲಿಂದ ಗಾಢ ಪ್ರೇಮ ಮತ್ತು ನಖಶಿಖಾಂತ ಉರಿದು ಬೀಳುವಂಥಾ ದ್ವೇಷದ ಕಥಾನಕ ಗರಿಗೆದರಿಕೊಳ್ಳುತ್ತದೆ. ಅಲ್ಲಿಂದಾಚೆಗೆ ರೋಮ ರೋಮವೂ ನಿಮಿರಿಕೊಳ್ಳುವಂತಾ ಮಾಸ್ ಸನ್ನಿವೇಶಗಳು, ರೋಮಾಂಚನಗೊಳಿಸೋ ಪ್ರೇಮ ಸನ್ನಿವೇಶಗಳು ಮತ್ತು ಮನಮಿಡಿಯುವ ಕೌಟುಂಬಿಕ ಕಥನದೊಂದಿಗೆ ಕಥೆ ಮುಂದುವರೆಯುತ್ತೆ. ಮೊದಲೇ ತಿಳಿದಿರುವಂತೆ ಇಲ್ಲಿ ಖಳ ನಟರ ದಂಡೇ ಇದೆ. ಅವರೆಲ್ಲರ ಪಾತ್ರಗಳನ್ನೂ ಕೂಡಾ ಚೇತನ್ ಕುಮಾರ್ ಅಷ್ಟೇ ಆಸ್ಥೆಯಿಂದ ಎದುರಾಳಿಗಳ ಎದೆ ಅದುರುವಂತೆ ಕಟ್ಟಿ ಕೊಟ್ಟಿದ್ದಾರೆ. ಇದೊಂದು ಸಂಕೀರ್ಣವಾದ ಕಥೆ. ಒಂದೆಳೆ ಆಚೀಚೆಯಾದರೂ ಗೊತ್ತುಗುರಿಗಳೆಲ್ಲ ಚೆದುರಿ ಚೆಲ್ಲಾಪಿಲ್ಲಿಯಾಗುವ ದುರಂತವೆದುರಾಗುತ್ತಿತ್ತು.
ಆದರೆ ಚೇತನ್ ಕುಮಾರ್ ಅದನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಯಾವ ಗೊಂದಲ ಗೋಜಲುಗಳಿಗೂ ಆಸ್ಪದವಿಲ್ಲದಂತೆ ಉಸಿರು ಬಿಗಿ ಹಿಡಿದು ನೋಡುವಂಥಾ ಆವೇಗದೊಂದಿಗೆ ಭರಾಟೆಯನ್ನು ಕಟ್ಟಿ ಕೊಟ್ಟಿದ್ದಾರೆ. ಜಗನ್ ಆಗಿ ಶ್ರೀಮುರಳಿ ನಟನೆಯ ವಿರಾಟ್ ರೂಪವನ್ನೇ ಪ್ರದರ್ಶಿಸಿದ್ದಾರೆ. ಕಿಸ್ ಮೂಲಕ ಗಮನ ಸೆಳೆದಿದ್ದ ಶ್ರೀಲೀಲಾ ಮಹತ್ವದ ತಮ್ಮ ಪಾತ್ರವನ್ನು ಸಮರ್ಥವಾಗಿಯೇ ನಿಭಾಯಿಸಿದ್ದಾರೆ. ಸಾಯಿಕುಮಾರ್ ಬ್ರದರ್ಸ್ ಸೇರಿದಂತೆ ಎಲ್ಲರ ಪಾತ್ರಗಳೂ ನೆನಪಿಟ್ಟುಕೊಳ್ಳುವಂತಿವೆ. ಕ್ಯಾಮೆರಾ ವರ್ಕ್, ಹಿನ್ನೆಲೆ ಸಂಗೀತ, ಸಂಕಲನ ಸೇರಿದಂತೆ ಎಲ್ಲವೂ ಫುಲ್ ಮಾಕ್ರ್ಸ್ ತೆಗೆದುಕೊಳ್ಳಬಹುದಾದ ಶೈಲಿಯಲ್ಲಿಯೇ ಮೂಡಿ ಬಂದಿವೆ. ಈ ಮೂಲಕ ನಿರ್ದೇಶಕ ಚೇತನ್ ಕುಮಾರ್ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ನಿರ್ಮಾಪಕ ಸುಪ್ರೀತ್ ಅವರ ಶ್ರದ್ಧೆಗೆ, ಕನಸುಗಾರಿಕೆಗೆ ಪ್ರತೀ ಫ್ರೇಮುಗಳಲ್ಲಿಯೂ ಸಾಕ್ಷಿಗಳು ಸಿಗುತ್ತವೆ. ಒಟ್ಟಾರೆಯಾಗಿ ಭರಾಟೆ ಫ್ಯಾಮಿಲಿ ಪ್ಯಾಕೇಜಿನಂತೆ ಮೂಡಿ ಬಂದಿದೆ.
ರೇಟಿಂಗ್ : 4/5