ಮುಂಬೈ: ತ್ರಿಲೋಕ ಸುಂದರಿ ಶ್ರೀದೇವಿ ಆಸೆಯಂತೆಯೇ ಮೃತದೇಹಕ್ಕೆ ಚಿನ್ನ ಲೇಪಿತ ಕೆಂಪು ಕಾಂಚಿವರಂ ಸೀರೆ ಉಡಿಸಿ, ಮಾಂಗಲ್ಯ ಸರದ ಜೊತೆ ಚಿನ್ನಾಭರಣ ಹಾಕಿ, ಪಾರ್ಥಿವ ಶರೀರಕ್ಕೆ ತ್ರಿವರ್ಣ ಧ್ವಜವನ್ನು ಹೊದಿಸಿ ಮೆರವಣಿಗೆ ಮಾಡಲಾಗುತ್ತಿದೆ.
ಶ್ರೀದೇವಿಗೆ ಬಿಳಿ ಹೂಗಳೆಂದರೆ ಬಹಳ ಪ್ರೀತಿ. ಹಾಗಾಗಿ ಅವರ ಪಾರ್ಥಿವ ಶರೀರಕ್ಕೆ ಮಲ್ಲಿಗೆ ಹೂ ಮುಡಿಸಲಾಗಿದೆ. ಜೊತೆಗೆ ಅವರ ಅಂತಿಮ ಯಾತ್ರೆಯ ವಾಹನವನ್ನೂ ಕೂಡ ಬಿಳಿ ಹೂಗಳಿಂದ ಸಿಂಗರಿಸಲಾಗಿದೆ.
Advertisement
Advertisement
ವಿಲ್ಲೆ ಪಾರ್ಲೆ ಸೇವಾ ಸಮಾಜ ಚಿತಾಗಾರ, ಹಿಂದೂ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ಸಿದ್ಧತೆ ನಡೆದಿದೆ. ಶ್ರೀದೇವಿ ಅವರ ಚಿತೆಗೆ ಪತಿ ಬೋನಿ ಕಪೂರ್ ಅಗ್ನಿ ಸ್ಪರ್ಶ ಮಾಡಲಿದ್ದಾರೆ. ಅಂತ್ಯ ಸಂಸ್ಕಾರಕ್ಕೆ ಕಪೂರ್ ಕುಟುಂಬದ ಜೊತೆ ಚಿತ್ರರಂಗದ ಗಣ್ಯರು ಭಾಗಿಯಾಗಿದ್ದಾರೆ.
Advertisement
Advertisement
ಮುಂಬೈನ ಲೋಖಂಡ್ವಾಲಾದ ಸೆಲೆಬ್ರೇಷನ್ ಸ್ಪೋಟ್ರ್ಸ್ ಕ್ಲಬ್‍ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಟಿ ಐಶ್ವರ್ಯಾ ರೈ ಬಚ್ಚನ್, ಜಯಾ ಬಚ್ಚನ್, ಜಯಪ್ರದಾ, ತಬು, ಸುಶ್ಮಿತಾ ಸೇನ್, ಮಾಧುರಿ ದೀಕ್ಷಿತ್, ಶ್ರೀದೇವಿಯ ಸೋದರ ಸೊಸೆ ಸೋನಂ ಕಪೂರ್, ಕಾಜೋಲ್, ಅಜಯ್ ದೇವಗನ್ ಮುಂತಾದ ಬಾಲಿವುಡ್ ನಟ ನಟಿಯರು ಸೇರಿದಂತೆ ಇತರೆ ಗಣ್ಯರು ಹಾಗೂ ಅಭಿಮಾನಿಗಳು ಶ್ರೀದೇವಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.
ಸಂಬಂಧಿಕರ ಮದುವೆಗೆಂದು ದುಬೈಗೆ ತೆರಳಿದ್ದ ವೇಳೆ ಕಳೆದ ಶನಿವಾರ ಶ್ರೀದೇವಿ ಮೃತಪಟ್ಟಿದ್ದರು. ವೈದ್ಯಕೀಯ ಹಾಗೂ ಕಾನೂನು ಪ್ರಕ್ರಿಯೆ ಮುಗಿದ ಬಳಿಕ ಶ್ರೀದೇವಿ ಅವರ ಪಾರ್ಥೀವ ಶರೀರವನ್ನು ಮಂಗಳವಾರ ರಾತ್ರಿ ಮುಂಬೈಗೆ ತರಲಾಗಿತ್ತು.
ಆಕಸ್ಮಿಕವಾಗಿ ಬಾತ್‍ಟಬ್‍ನಲ್ಲಿ ಮುಳುಗಿ ಶ್ರೀದೇವಿ ಸಾವನ್ನಪ್ಪಿದ್ದಾರೆಂದು ಮರಣೋತ್ತರ ಪರೀಕ್ಷೆಯ ವರದಿ ತಿಳಿಸಿತ್ತು.