ಕಾಯಕ ಯೋಗಿ ದಿನಕ್ಕೆ 5 ಗಂಟೆ ಮಾತ್ರ ನಿದ್ದೆ!

Public TV
2 Min Read
SRI TMK 1

ಅನ್ನ, ಅಕ್ಷರ, ಜ್ಞಾನವನ್ನು ಸಾವಿರಾರು ಮಂದಿಗೆ ನೀಡಿ ಅವರ ಬಾಳನ್ನು ಬೆಳಗಿಸಿದ ಸಿದ್ದಗಂಗಾ ಶ್ರೀಗಳು ನಿದ್ದೆಗೆಂದು ಮೀಸಲಿಟ್ಟ ಸಮಯ ಕೇವಲ 5 ಗಂಟೆ ಮಾತ್ರ. ಹೌದು. ಶ್ರೀಗಳು ಪ್ರತಿದಿನವೂ ಬೆಳಗಿನ ನಾಲ್ಕು ಗಂಟೆಗೆ ಎದ್ದು ಸ್ನಾನಮಾಡಿ, ಪೂಜಾಕೋಣೆಯಲ್ಲಿ ಒಂದು ತಾಸಿಗೂ ಹೆಚ್ಚು ಸಮಯ ಧ್ಯಾನದಲ್ಲಿ ತಲ್ಲೀನರಾಗುತ್ತಿದ್ದರು. ನಂತರ ಇಷ್ಟಲಿಂಗ ಪೂಜೆ. ದೂರದಿಂದ ಸ್ವಾಮಿಗಳ ದರ್ಶನಕಾಗಿ ಬರುವ ಭಕ್ತರಿಗೆ ತ್ರಿಪುಂಢ್ರ ಭಸ್ಮವನ್ನು ಕೊಟ್ಟು ತಾವೂ ಧರಿಸಿ, ಪೂಜೆಯನ್ನು ಮುಗಿಸುತ್ತಿದ್ದರು.

ಬೆಳಗ್ಗೆ 6.30ರ ಸುಮಾರಿಗೆ ಆಹಾರ ಸೇವನೆ. ಒಂದು ಅಕ್ಕಿ-ಇಡ್ಲಿ, ಸ್ವಲ್ಪ ಹೆಸರು ಬೇಳೆ-ತೊವ್ವೆ, ‘ಸಿಹಿ’ ಹಾಗೂ ‘ಖಾರ ಚಟ್ನಿ’ ಸೇವಿಸುತ್ತಿದ್ದರು. ಎರಡು ತುಂಡು ಸೇಬು. ಇದರ ಬಳಿಕ, ‘ಬೇವಿನ-ಚಕ್ಕೆ ಕಷಾಯ’ ಸೇವನೆ ಮಾಡಿ ಮಕ್ಕಳ ಸಾಮೂಹಿಕ ಪ್ರಾರ್ಥನೆಯಲ್ಲಿ ಅವರು ಪಾಲ್ಗೊಳ್ಳುತ್ತಿದ್ದರು.

160625kpn64 copy

ಪ್ರಾರ್ಥನೆಯ ನಂತರ, ಕಚೇರಿಗೆ ಧಾವಿಸಿ ಅಲ್ಲಿ ಪತ್ರಿಕೆಗಳ ವಾಚನವಾಗುತಿತ್ತು. ಅಲ್ಲಿಗೆ ಬಂದ ಭಕ್ತರಿಗೆ, ದರ್ಶನಾರ್ಥಿಗಳಿಗೆ ದರ್ಶನ ನೀಡುತ್ತಿದ್ದರು. ಈ ವೇಳೆ ಮಳೆ-ಬೆಳೆ, ಕುಶಲೋಪರಿ ವಿಚಾರ, ಗಣ್ಯರ ಭೇಟಿ, ಮಠದ ಆಡಳಿತ ಕಡತಗಳ ಪರಿಶೀಲನೆ, ಪತ್ರವ್ಯವಹಾರಗಳೇ ಮುಂತಾಗಿ ಹಲವಾರು ಕಾರ್ಯಗಳಲ್ಲಿ ನಿರತರಾಗುವುದಲ್ಲದೆ ಇಳಿವಯಸ್ಸಿನಲ್ಲೂ ದಣಿವರಿಯದೇ ಕಾರ್ಯನಿರತರಾಗಿ ‘ಕಾಯಕವೇ ಕೈಲಾಸ’ ಎಂದು ನುಡಿಯಲ್ಲಿ ಮಾತ್ರ ಹೇಳದೇ, ನಡೆಯಲ್ಲೂ ತೋರಿಸಿಕೊಡುತ್ತಿದ್ದರು.

ಮಠದ ಪ್ರಸಾದ ನಿಲಯದ ಮುಂಭಾಗದ ಮಂಚದ ಮೇಲೆ ಆಸೀನರಾದ ಬಳಿಕ ಭಕ್ತರ ಕಷ್ಟ-ಸುಖಕ್ಕೆ ಸ್ಪಂದನೆ ಮಧ್ಯಾಹ್ನ ಮೂರು ಗಂಟೆವರೆಗೆ ನಿರಂತರವಾಗಿ ಸಾಗುತಿತ್ತು. ಬಳಿಕ ಶ್ರೀಗಳು ನೇರವಾಗಿ ಮಠಕ್ಕೆ ಸಾಗಿ, ಸ್ನಾನ ಪೂಜೆಗಳಲ್ಲಿ ಮಗ್ನರಾಗುತ್ತಿದ್ದರು. ನಂತರ ಒಂದು ಎಳ್ಳಿಕಾಯಿ ಗಾತ್ರದ ಮುದ್ದೆ, ಸ್ವಲ್ಪವೇ ಅನ್ನ, ಮತ್ತು ತೊಗರಿ ಬೇಳೆ ಸಾಂಬಾರ್ ಊಟ ಮಾಡುತ್ತಿದ್ದರು. ಸಂಜೆ 4 ಗಂಟೆಯ ನಂತರ ಪುನಃ ಭಕ್ತಗಣದ ಭೇಟಿ ಮಾಡಿ ಮಠದಲ್ಲಿ ಉಳಿದುಕೊಂಡು ವಿದ್ಯಾರ್ಜನೆ ಮಾಡುವ ಮಕ್ಕಳ ಕುಶಲೋಪರಿ, ಬಳಿಕ ದಾಸೋಹದ ಮಾಹಿತಿ, ಸುಮಾರು ರಾತ್ರಿ 9 ಗಂಟೆಯವರೆಗೂ ನಡೆಯುತಿತ್ತು.

150308kpn66 copy

ಹಳೆಯ ಮಠದಲ್ಲಿ ರಾತ್ರಿಯ ಕಾರ್ಯಕ್ರಮ. ಸ್ನಾನ, ಪೂಜೆ, ಮತ್ತು ಪ್ರಸಾದ. ಒಂದು ಚಪಾತಿ ಇಲ್ಲವೇ ಒಂದು ದೋಸೆ. ಅದರ ಜೊತೆಗೆ ಚಟ್ನಿ ಅಥವಾ ಪಲ್ಯ. ಇದಿಲ್ಲದೇ ಹೋದರೆ, ಉಪ್ಪಿಟ್ಟು, ನಂತರ ಹಣ್ಣಿನ ಸೇವನೆ. ಹತ್ತು ಗಂಟೆಗೆ ಸ್ವಾಮಿಗಳು ಸಭಾಂಗಣದಲ್ಲಿ ಹಾಜರಾಗುತ್ತಿದ್ದರು. ‘ಶ್ರೀ ಜಗಜ್ಯೋತಿ ಬಸವೇಶ್ವರ ನಾಟಕ’ದ ಒಂದು ದೃಶ್ಯವನ್ನು ನೋಡಿದ ಬಳಿಕ ಅಂದಿನ ದಿನದ ಕಾಯಕಕ್ಕೆ ವಿರಾಮ ಹಾಕುತ್ತಿದ್ದರು.

ಸ್ವಾಮೀಜಿ ಮಲಗುವ ವೇಳೆ ಪುಸ್ತಕ ಓದಿ ಮಲಗುವ ಹವ್ಯಾಸವಿಟ್ಟುಕೊಂಡಿದ್ದರು. ಇದು ಕನಿಷ್ಠ ಅರ್ಧತಾಸಾದರೂ ನಡೆಯುತ್ತಿತ್ತು. ಹನ್ನೊಂದು ಗಂಟೆಗೆ ಮಲಗುತ್ತಿದ್ದರು. ಓದಿನೊಂದಿಗೆ ಆರಂಭವಾಗುವ ಶ್ರೀಗಳ ದಿನಚರಿ, ಓದಿನೊಂದಿಗೆ ಮುಕ್ತಾಯವಾಗುತಿತ್ತು. ಕೆಲವು ದಿನಗಳಲ್ಲಿ ಧಾರ್ಮಿಕ ಸಮಾರಂಭಗಳಲ್ಲಿ ಪಾಲ್ಗೊಂಡು ಆಹ್ವಾನಿಸುವ ಭಕ್ತರ ಮನೆಗಳಿಗೂ ಭೇಟಿ ನೀಡುತ್ತಿದ್ದರು.

160701kpn03 copy

ಪ್ರಸಾದ ಸ್ವೀಕರಿಸುವ ವೇಳೆಯಲ್ಲಿ ಮಾತ್ರ ಬಿಸಿನೀರು ಸೇವಿಸುತ್ತಿದ್ದ ಶ್ರೀಗಳು ಉಳಿದ ಸಂದರ್ಭದಲ್ಲಿ ಏನನ್ನೂ ಸೇವಿಸುತ್ತಿರಲಿಲ್ಲ. ಕಳೆದ 8 ದಶಕಗಳ ಜೀವನ ಇದೇ ರೀತಿ ಸಾಗಿತ್ತು.

ಶ್ರೀಗಳಿಗೆ ಸಿಕ್ಕ ಪ್ರಶಸ್ತಿಗಳು:
ಕಾಯಕ ಯೋಗಿ ಸಿದ್ದಗಂಗಾ ಶ್ರೀಗಳಿಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿದೆ. 100ನೇ ವರ್ಷದ ಹುಟ್ಟುಹಬ್ಬ ಮತ್ತು ಕರ್ನಾಟಕ ಸುವರ್ಣ ಮಹೋತ್ಸವ ಸಮಯದಲ್ಲಿ ಸರ್ಕಾರದಿಂದ ಕರ್ನಾಟಕ ರತ್ನ ಹಾಗೂ 2015 ನೇ ಇಸವಿಯಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡುವ ಮೂಲಕ ಭಾರತ ಸರ್ಕಾರ ಗೌರವಿಸಿತ್ತು.

https://www.youtube.com/watch?v=2lK_EgaS96U

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *