ಮಂಡ್ಯ: ಕೆಆರ್‌ಎಸ್ ಡ್ಯಾಮ್‍ಗೆ ಅಪಾಯ ಎದುರಾಗಲಿದೆ ಎಂಬ ಮಾತುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಗಣಿಗಾರಿಕೆಯನ್ನ ನಿಲ್ಲಿಸಲಾಗುವುದು ಎಂದು ಜಿಲ್ಲಾಡಳಿತ ಹೇಳುತ್ತಲೇ ಬಂದಿದೆ. ಆದರು ಕೂಡ ಪ್ರದೇಶದಲ್ಲಿ ಇಂದಿಗೂ ಗಣಿಗಾರಿಕೆ ನಿಂತಿಲ್ಲ.
ಇದೀಗ ಬೇಬಿ ಬೆಟ್ಟದಲ್ಲಿನ ಗಣಿಗಾರಿಕೆ ಬ್ಲಾಸ್ಟ್ ನಿಂದಾಗಿ ಶ್ರೀ ರಾಮಯೋಗೇಶ್ವರ ಮಠದ ಲಿಂಗೈಕ್ಯ ಶ್ರೀ ಸದಾಶಿವ ಸ್ವಾಮೀಜಿಗಳ ಗದ್ದುಗೆಯ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿದ್ದು, ಒಂದೆರಡು ಕಂಬಗಳು ನೆಲಕ್ಕುರುಳಿ ಬಿದ್ದಿವೆ.
ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳನ್ನ ಒತ್ತಾಯಿಸಿರುವ ಮಠದ ಗುರು ಸಿದ್ದೇಶ್ವರ ಸ್ವಾಮೀಜಿ ಅವರು, ಗಣಿಗಾರಿಕೆ ನಿಲ್ಲಿಸಲು ಮುಂದಾಗದಿದ್ದರೆ ತೀವ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಗಣಿಗಾರಿಕೆಯಿಂದ ಕೆಆರ್‌ಎಸ್ ಡ್ಯಾಮ್‍ಗೆ ಅಪಾಯವಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದ ಹಿನ್ನಲೆಯಲ್ಲಿ ಕೆಲವು ದಿನ ಸ್ಥಗಿತಗೊಂಡಿದ್ದ ಗಣಿಕಾರಿಕೆ ಮತ್ತೆ ಅಡೆ-ತಡೆ ಇಲ್ಲದೆ ನಡೆಯುತ್ತಿದೆ.
ಕಳೆದ ತಿಂಗಳು ನಡೆದ ಕೆಡಿಪಿ ಸಭೆಯಲ್ಲೂ ಜಿಲ್ಲಾ ಉಸ್ತುವಾರಿ ಸಚಿವ ಅಶೋಕ್ ಅವರು ಗಣಿಗಾರಿಕೆಯಿಂದಾಗಿ ಡ್ಯಾಮ್‍ಗೆ ಅಪಾಯವಿರುವ ಬಗ್ಗೆ ವೈಜ್ಞಾನಿಕ ವರದಿ ನೀಡುವಂತೆ ಸೂಚಿಸಿದ್ದರು. ಆದರೂ ಕೂಡ ಗಣಿಗಾರಿಕೆ ಮಾತ್ರ ಎಗ್ಗಿಲ್ಲದೆ ನಡೆಯುತ್ತಿದೆ.