ಬಳ್ಳಾರಿ: ಬಳ್ಳಾರಿ ಚುನಾವಣಾ ರಣಕಣದಲ್ಲಿ ನಾಯಕರು ಜಿದ್ದಾಜಿದ್ದಿಗೆ ಬಿದ್ದಂತೆ ಕಾಣುತ್ತಿದೆ. ಸಚಿವ ಡಿ.ಕೆ.ಶಿವಕುಮಾರ್ ಆಹ್ವಾನವನ್ನು ಶಾಸಕ ಶ್ರೀರಾಮುಲು ಒಪ್ಪಿಕೊಂಡಿದ್ದಾರೆ. ಬಹಿರಂಗ ಚರ್ಚೆಯಲ್ಲಿ ಇಬ್ಬರು ನಾಯಕರು ಭಾಗಿಯಾಗುತ್ತೇವೆ ಎಂದು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
24 ಗಂಟೆ ಮುಂಚಿತವಾಗಿ ಸಮಯ, ಸ್ಥಳ ನಿಗದಿ ಮಾಡಿ ನನಗೆ ಮಾಹಿತಿ ರವಾನಿಸಿವೆ. ನಾನು ಶ್ರೀರಾಮುಲು ವಿರುದ್ಧ ಬಹಿರಂಗ ಚರ್ಚೆಯಲ್ಲಿ ಭಾಗಿಯಾಗುತ್ತೇನೆ. ಕೂಡಲೇ ಅಂದ್ರೆ ಆಗಲ್ಲ ಕೆಲವು ಕಾರ್ಯಕ್ರಮಗಳು ನಿಗದಿ ಆಗಿರುತ್ತವೆ. ಸ್ಥಳವನ್ನು ಶ್ರೀರಾಮುಲು ಅವರೇ ನಿರ್ಧರಿಸಲಿ ಎಂದು ಹೇಳಿದರು.
ಸರ್ಕಾರದ ಪರವಾಗಿ ನಾನು ಬಳ್ಳಾರಿಯ ಉಸ್ತುವಾರಿ ಮಂತ್ರಿಯಾಗಿದ್ದು, ಚುನಾವಣೆಯ ಜವಾಬ್ದಾರಿ ನನ್ನ ಮೇಲಿದೆ. ಶ್ರೀರಾಮುಲು ಸಹ ಹೊರಗಿನವರು, ನಾನು ಬೇರೆ ಜಿಲ್ಲೆಯವನು. ಬಳ್ಳಾರಿಯನ್ನು ತೊರೆದು ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಕಂಡಿದ್ದಾರೆ. ಚುನಾವಣೆ ನಡೆಯುತ್ತಿರೋದು ಉಗ್ರಪ್ಪ ವರ್ಸಸ್ ಶಾಂತಕ್ಕ ಅಥವಾ ಕಾಂಗ್ರೆಸ್ ವರ್ಸಸ್ ಬಿಜೆಪಿ. ನಮ್ಮಿಬ್ಬರ ಮಧ್ಯೆ ಎಲೆಕ್ಷನ್ ಇದೆ ಅನ್ನೋದು ಸುಳ್ಳು. ನಾನು ಕಾಂಗ್ರೆಸ್ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ರು.
ನಾನು ಮತ್ತು ಶ್ರೀರಾಮುಲು ಒಳ್ಳೆಯ ಗೆಳೆಯರು. ಒಂದು ರೀತಿ ಗಳಸ್ಯ-ಕಂಠಸ್ಯ ಇದ್ದಂತೆ. ಆದ್ರೆ ರಾಜಕಾರಣದ ಸಿದ್ದಾಂತದ ಮೇಲೆ ಭಿನ್ನಾಭಿಪ್ರಾಯಗಳಿವೆ. ನಾನು ಜಾತಿ ಮೇಲೆ ರಾಜಕಾರಣ ಮಾಡುವ ವ್ಯಕ್ತಿ ಅಲ್ಲ. ಕಾಂಗ್ರೆಸ್ ನೀತಿ ಮೇಲೆ ರಾಜಕಾರಣ ಮಾಡುತ್ತೇವೆ. ಕುಸ್ತಿ ಮಾಡುವವರ ಮೇಲೆ ಕುಸ್ತಿ ಮಾಡಬೇಕು. ಪಾಪ ಶ್ರೀರಾಮುಲು ಅವರಿಂದ ಏನ್ ಆಗುತ್ತೆ ಎಂದು ಕಳವಳ ವ್ಯಕ್ತಪಡಿಸುವ ಮೂಲಕ ಕಾಲೆಳೆದ್ರು.
ಇತ್ತ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶ್ರೀರಾಮುಲು, ನಾನು ಈ ಭಾಗದಿಂದ ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಈ ಭಾಗದಲ್ಲಿಯ ಜನರು ಮುಂಚೆಯಿಂದಲೂ ನನಗೆ ಸ್ಫೂರ್ತಿಯನ್ನು ತುಂಬಿದ್ದಾರೆ. ನಾನು ಹೇಳಿದ ಸ್ಥಳಕ್ಕೆ ಡಿಕೆ ಶಿವಕುಮಾರ್ ಬರೋದು ಬೇಡ. 24 ಗಂಟೆಯ ಸಮಯವನ್ನು ತೆಗೆದುಕೊಂಡು ಸ್ಥಳವನ್ನು ನಿಗದಿ ಮಾಡಿ, ತಿಳಿಸಿ ದಾಖಲೆ ಸಹಿತ ನಾನು ಚರ್ಚೆಯಲ್ಲಿ ಭಾಗಿಯಾಗುತ್ತೇನೆ ಎಂದು ಉತ್ತರ ನೀಡಿದ್ದಾರೆ.
ಇಬ್ಬರು ನಾಯಕರು ಚರ್ಚೆಗೆ ಸಿದ್ಧರಾಗಿದ್ದು, ವೇದಿಕೆ ಮಾತ್ರ ಎಲ್ಲಿ ಎಂಬುವುದು ನಿಗದಿಯಾಗಿಲ್ಲ. ಹಾಗಾಗಿ ಪಬ್ಲಿಕ್ ಟಿವಿ ಇಬ್ಬರು ನಾಯಕರಿಗೆ ವೇದಿಕೆಯನ್ನು ಮಾಡಿಕೊಡಲಿದೆ. ಒಂದು ವೇಳೆ ನಾಯಕರು ಸಮಯ, ಸ್ಥಳ ಎಲ್ಲವೂ ನಿಗದಿಪಡಿಸಿದ್ರೆ, ಪಬ್ಲಿಕ್ ಟಿವಿ ವೇದಿಕೆ ಮೂಲಕ ನಾಡಿನ ಜನತೆ ಈ ಚರ್ಚೆಯನ್ನು ನೋಡಬಹುದು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv