DistrictsKarnatakaLatestUdupi

ಪೇಜಾವರ ಶ್ರೀಗಳ ಆರೋಗ್ಯದಲ್ಲಿ ವೃದ್ಧಿ- ಕೃಷ್ಣಾಪುರ ಶ್ರೀ

ಉಡುಪಿ: ಪೇಜಾವರ ಶ್ರೀಗಳ ಅನಾರೋಗ್ಯ ಹಿನ್ನೆಲೆಯಲ್ಲಿ ಕೆಎಂಸಿಯಲ್ಲಿ ಕಳೆದೆರಡು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದು, ಶ್ರೀಗಳ ಎದೆಯಲ್ಲಿರುವ ಕಫ ನೀರಾಗುತ್ತಿದೆ. ವೈದ್ಯರು ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಪೇಜಾವರ ಕಿರಿಯಶ್ರೀ, ಕೃಷ್ಣಾಪುರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗುರುಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ವಯೋ ಸಹಜದಿಂದಾಗಿ ನಿಧಾನವಾಗಿ ಗುಣಮುಖರಾಗಲು ಆಗುತ್ತಿದ್ದಾರೆ. ಭಕ್ತರು ಯಾರು ಕೂಡ ಉದ್ವೇಗಕ್ಕೆ ಒಳಗಾಗಬೇಡಿ. ಎಲ್ಲರೂ ಅಲ್ಲಲ್ಲೇ ಪ್ರಾರ್ಥನೆ ಮಾಡಿ ಎಂದು ಹೇಳಿದರು. ವೆಂಟಿಲೇಟರ್ ನಲ್ಲೆ ಉಸಿರಾಟ ಮುಂದುವರಿಸಲಾಗಿದೆ. ನಾವೂ ಪೂಜೆ ಮಾಡುತ್ತಿದ್ದೇವೆ. ಕರ್ನಾಟಕ ಅಲ್ಲದೇ ಇತರ ರಾಜ್ಯಗಳಲ್ಲೂ ಪ್ರಾರ್ಥನೆ ನಡೆಯುತ್ತಿದೆ ಎಂದು ತಿಳಿಸಿದರು.

ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಶ್ರೀಗಳ ಆರೋಗ್ಯ ವಿಚಾರಿಸಿ, ಚೇತರಿಕೆ ನಿಧಾನವಾಗಿ ಆಗುತ್ತಿದೆ. ಬೇಗ ಚೇತರಿಕೆ ಆಗುವಂತೆ ದೇವರು ಮಾಡಲಿ. ಮತ್ತೆ ಅವರು ಬಂದು ನಮಗೆಲ್ಲರಿಗೂ ಮಾರ್ಗದರ್ಶನ ಮಾಡಲಿ ಎಂದು ಹೇಳಿದರು. ಪಲಿಮಾರು ಕಿರಿಯ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಆಸ್ಪತ್ರೆಗೆ ಬಂದು ಪೇಜಾವರಶ್ರೀ ಆರೋಗ್ಯದ ಕಾಳಜಿ ತೋರಿದ್ದಾರೆ.

ಕಳೆದ ಎರಡು ದಿನಗಳಲ್ಲಿ ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮತ್ತು ಅವರ ಶಿಷ್ಯ ಸುಶ್ರೀಂದ್ರ ತೀರ್ಥ, ಸೋದೆ ವಿಶ್ವವಲ್ಲಭ ತೀರ್ಥ ಸ್ವಾಮೀಜಿ, ಕಾಣಿಯೂರು ವಿದ್ಯಾವಲ್ಲಭ ಶ್ರೀ, ಅದಮಾರು ಮಠದ ವಿಶ್ವಪ್ರಿಯ ಮತ್ತು ಈಶಪ್ರಿಯ ತೀರ್ಥ ಸ್ವಾಮೀಜಿಗಳು ಬಂದು ಪೇಜಾವರಶ್ರೀಗಳ ಆರೋಗ್ಯ ವಿಚಾರಿಸಿದ್ದಾರೆ.

Leave a Reply

Your email address will not be published.

Back to top button