ಕೊಲಂಬೊ: ಸತತ ಆರ್ಥಿಕ ಬಿಕ್ಕಟ್ಟಿನಿಂದ ತಪ್ಪಿಸಿಕೊಳ್ಳಲು ಆಸ್ಟ್ರೇಲಿಯಾಕ್ಕೆ ಅಕ್ರಮವಾಗಿ ವಲಸೆ ಹೋಗಲು ಮುಂದಾಗುತ್ತಿದ್ದ 51 ಮಂದಿ ಶ್ರೀಲಂಕಾ ಪ್ರಜೆಗಳನ್ನು ಇಂದು ಬಂಧಿಸಲಾಗಿದೆ. ಕಳೆದ ಒಂದು ವಾರದಲ್ಲಿ ಅಕ್ರಮ ವಲಸೆಗೆ ಯತ್ನಿಸಿದ 4ನೇ ಘಟನೆ ಇದಾಗಿದೆ ಎಂದು ಶ್ರೀಲಂಕಾ ವಾಯುಪಡೆ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಇಂದು ಬೆಳಗ್ಗೆ ಲಂಕಾದ ಪಶ್ಚಿಮ ಕರಾವಳಿಯ ಮಾರವಿಲಾದಲ್ಲಿ ಶ್ರೀಲಂಕಾದ ಕೋಸ್ಟ್‌ಗಾರ್ಡ್ ಮತ್ತು ಪೊಲೀಸ್ ತಂಡವು ಕಾರ್ಯಾಚರಣೆ ನಡೆಸಿದೆ. ಈ ವೇಳೆ ಪೂರ್ವ ಸಮುದ್ರದ ಮಾರ್ಗವಾಗಿ ಆಸ್ಟ್ರೇಲಿಯಾಕ್ಕೆ ವಲಸೆ ಹೋಗಲು ಯತ್ನಿಸುತ್ತಿದ್ದದ್ದು ಕಂಡುಬಂದಿದೆ. ಸಮುದ್ರದಲ್ಲಿ ಮೀನುಗಾರಿಕಾ ಟ್ರಾಲರ್ ಅನ್ನು ವಶಪಡಿಸಿಕೊಂಡ ನಂತರ ಅಕ್ರಮವಾಗಿ ವಲಸೆ ಹೋಗಲು ಪ್ರಯತ್ನಿಸುತ್ತಿದ್ದ 51 ಮಂದಿ ಸಿಕ್ಕಿಬಿದ್ದಿದ್ದಾರೆ.
ನೌಕಾಪಡೆಯು ಇಂದು ಬೆಳಿಗ್ಗೆ ಪೂರ್ವ ಸಮುದ್ರದಲ್ಲಿ ಶೋಧ ನಡೆಸಿದಾಗ 51 ಜನರನ್ನು ಹೊತ್ತೊಯ್ಯುತ್ತಿದ್ದ ಸ್ಥಳೀಯ ಬಹು-ದಿನದ ಮೀನುಗಾರಿಕೆ ಟ್ರಾಲರ್ ಅನ್ನು ವಶಪಡಿಸಿಕೊಂಡಿದೆ. ಅವರು ಸಮುದ್ರಮಾರ್ಗದಿಂದ ಅಕ್ರಮವಾಗಿ ವಲಸೆ ಹೋಗುವ ಯತ್ನದಲ್ಲಿದ್ದಾರೆ ಎಂದು ನೌಕಾಪಡೆ ಶಂಕೆ ವ್ಯಕ್ತಪಡಿಸಿದೆ.
ಕಳೆದ ಜೂನ್ 27, 28ರಂದು ಅಕ್ರಮವಾಗಿ ವಲಸೆ ಹೋಗುತ್ತಿದ್ದ 100ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿತ್ತು. ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದಾಗಿ ಜನರು ಪಲಾಯನ ಮಾಡುತ್ತಿದ್ದು, ಈ ವರ್ಷಾರಂಭದಿಂದ ಇದು ಶುರುವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆಸ್ಟ್ರೇಲಿಯಾ ಅಕ್ರಮ ವಲಸಿಗರನ್ನು ನಿಯಂತ್ರಿಸಲು ಕ್ರಮ ವಹಿಸಿದೆ.