ಬೆಂಗಳೂರು: ಗೆಲುವಿನ ಹಾದಿಯಲ್ಲಿ ಮುನ್ನುಗ್ಗುತ್ತಿರುವ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 2020 ವರ್ಷಾರಂಭದಲ್ಲಿ ಅತಿಥಿ ಶ್ರೀಲಂಕಾ ತಂಡವನ್ನು ಮಣಿಸಲು ಸಿದ್ಧತೆ ನಡೆಸಿದೆ. ವೆಸ್ಟ್ ಇಂಡೀಸ್ ವಿರುದ್ಧ ಅಬ್ಬರಿಸಿದ್ದ ವಿರಾಟ್ ಕೊಹ್ಲಿ ಹಾಗೂ ಕೆ.ಎಲ್.ರಾಹುಲ್ ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ದಾಖಲೆ ಬರೆಯುವ ಸಾಧ್ಯತೆಯಿದೆ.
ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಹಿಟ್‍ಮ್ಯಾನ್ ರೋಹಿತ್ ಶರ್ಮಾ ಲಭ್ಯವಿಲ್ಲ. ಆಯ್ಕೆ ಸಮಿತಿಯು ಅವರಿಗೆ ಸರಣಿಯಲ್ಲಿ ವಿಶ್ರಾಂತಿ ನೀಡಿದೆ. ಹೀಗಾಗಿ ರನ್ ಮೆಷಿನ್ ವಿರಾಟ್ ಕೊಹ್ಲಿ ಭಾರತದ ಪರ ಅಂತರಾಷ್ಟ್ರೀಯ ಟಿ20ಯಲ್ಲಿ ಅತಿ ಹೆಚ್ಚು ರನ್‍ಗಳಿಸಿದ ದಾಖಲೆಯನ್ನು ಬರೆಯಲು ಸಿದ್ಧರಾಗಿದ್ದಾರೆ. ಈ ಇಬ್ಬರು ಆಟಗಾರರು ಅಂತರಾಷ್ಟ್ರೀಯ ಟಿ20ಯಲ್ಲಿ ಭಾರತದ ಪರ ತಲಾ 2,633 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ.
Advertisement
Advertisement
ಶ್ರೀಲಂಕಾ ವಿರುದ್ಧ ಜನವರಿ 5ರಂದು ನಡೆಯಲಿರುವ ಮೊದಲ ಟಿ20 ಪಂದ್ಯದಲ್ಲಿ ಒಂದು ರನ್ ಗಳಿಸಿದರೆ ಕೊಹ್ಲಿ ಭಾರತದ ಪರ ಅಂತರಾಷ್ಟ್ರೀಯ ಟಿ20 ಅತಿ ಹೆಚ್ಚು ರನ್‍ಗಳಿಸಿ ದಾಖಲೆ ಬರೆಯಲಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ 2ನೇ ಪಂದ್ಯದಲ್ಲಿ 19 ರನ್ ಗಳಿಸುವ ಮೂಲಕ ವಿರಾಟ್ ಕೊಹ್ಲಿ ಭಾರತದ ಪರ ಅಂತರಾಷ್ಟ್ರೀಯ ಟಿ20ಯಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದ ರೋಹಿತ್ ದಾಖಲೆಯನ್ನು ಹಿಂದಿಕ್ಕಿದ್ದರು. ಆದರೆ 3ನೇ ಹಾಗೂ ಕೊನೆಯ ಪಂದ್ಯದಲ್ಲಿ 71 ಸಿಡಿಸುವ ಮೂಲಕ ರೋಹಿತ್ ಶರ್ಮಾ ಮತ್ತೆ ಅಗ್ರಸ್ಥಾನಕ್ಕೆ ಏರಿದ್ದರು. ಈ ಬೆನ್ನಲ್ಲೇ ಮೈದಾಕ್ಕಿಳಿದ ವಿರಾಟ್ 70 ರನ್ ಗಳಿಸಿ ರೋಹಿತ್‍ರನ್ನು ಸರಿಗಟ್ಟಿದ್ದರು.
Advertisement
ರೋಹಿತ್ ಶರ್ಮಾ 96 ಇನ್ನಿಂಗ್ಸ್ ಗಳಲ್ಲಿ 2,633 ರನ್ ಗಳಿಸಿದರೆ, ವಿರಾಟ್ ಕೊಹ್ಲಿ 70 ಇನ್ನಿಂಗ್ಸ್ ಗಳಲ್ಲಿ ಈ ದಾಖಲೆ ಮಾಡಿದ್ದಾರೆ. ರೋಹಿತ್ ಶರ್ಮಾ 234 ಬೌಂಡರಿ, 120 ಸಿಕ್ಸರ್ ಸಿಡಿಸಿದರೆ, ವಿರಾಟ್ 247 ಬೌಂಡರಿ, 71 ಸಿಕ್ಸರ್ ದಾಖಲಿಸಿದ್ದಾರೆ.
Advertisement
ಯುವಿಯನ್ನು ಹಿಂದಿಕ್ಕಲಿರುವ ರಾಹುಲ್:
ಅಂತರರಾಷ್ಟ್ರೀಯ ಟಿ20ಯಲ್ಲಿ 8 ಅರ್ಧ ಶತಕ ಸಿಡಿಸುವ ಮೂಲಕ ಕೆ.ಎಲ್.ರಾಹುಲ್ ಈಗಾಗಲೇ ಟೀಂ ಇಂಡಿಯಾ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ಸಾಧನೆಯನ್ನು ಸರಿಗಟ್ಟಿದ್ದಾರೆ. ಈಗ ಯುವಿ ಒಟ್ಟು ರನ್ ಹಿಂದಿಕ್ಕಲು ರಾಹುಲ್ ಸಿದ್ಧರಾಗಿದ್ದಾರೆ. ಈ ಸಾಧನೆ ಮಾಡಲು ರಾಹುಲ್‍ಗೆ 40 ರನ್ ಅಗತ್ಯವಿದೆ.
ಯುವಿ 51 ಇನ್ನಿಂಗ್ಸ್ ಗಳಲ್ಲಿ 8 ಅರ್ಧಶತಕಗಳ ಸಾಧನೆ ಮಾಡಿದರೆ, ಕೆ.ಎಲ್.ರಾಹುಲ್ 31 ಇನ್ನಿಂಗ್ಸ್ ಗಳಲ್ಲಿ ಪೂರೈಸಿದ್ದಾರೆ. ಟೀಂ ಇಂಡಿಯಾ ಪರ ಯುವರಾಜ್ ಸಿಂಗ್ 51 ಇನ್ನಿಂಗ್ಸ್ ಗಳಲ್ಲಿ 1,177 ರನ್ ಗಳಿಸಿದರೆ, ಕೆ.ಎಲ್.ರಾಹುಲ್ 31 ಇನ್ನಿಂಗ್ಸ್ ಗಳಲ್ಲಿ 1,138 ರನ್ ಪೇರಿಸಿದ್ದಾರೆ.
ಭಾರತವೇ ಫೇವರೇಟ್:
2017ರಿಂದ ಈವರೆಗೆ ಟೀಂ ಇಂಡಿಯಾ ಹಾಗೂ ಶ್ರೀಲಂಕಾ ತಂಡದ ಮಧ್ಯೆ ಐದು ಟಿ20 ಪಂದ್ಯಗಳು ನಡೆದಿದ್ದು, ಅದರಲ್ಲಿ 4 ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿದೆ. 2017ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ಶ್ರೀಲಂಕಾ ಟೀಂ ಇಂಡಿಯಾ ವಿರುದ್ಧ ಆಡಿದ್ದ ಮೂರು ಟಿ20 ಸರಣಿಯಲ್ಲಿ 3-0 ಅಂತರದಿಂದ ಸೋತಿತ್ತು. ಬಳಿಕ 2018ರಲ್ಲಿ ನಡೆದ ನಿದಾಸ್ ಟ್ರೋಫಿಯಲ್ಲಿ ಸರಣಿಯಲ್ಲಿ ಭಾರತ ಮತ್ತು ಲಂಕಾ ತಲಾ ಒಂದೊಂದು ಪಂದ್ಯವನ್ನು ಗೆದ್ದುಕೊಂಡಿತ್ತು. ಈ ಮೂಲಕ 2018ರ ನಿದಾಸ್ ಟ್ರೋಫಿಯ ಫೈನಲ್ ಪ್ರವೇಶಿಸಿದ್ದ ಭಾರತ ತಂಡವು ದಿನೇಶ್ ಕಾರ್ತಿಕ್ ಅವರ ಸ್ಫೋಟಕ ಬ್ಯಾಟಿಂಗ್ ನಿಂದಾಗಿ(ಔಟಾಗದೇ 29 ರನ್, 8 ಎಸೆತ, 2 ಬೌಂಡರಿ, 3 ಸಿಕ್ಸರ್) ಬಾಂಗ್ಲಾದೇಶವನ್ನು ಮಣಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು.
ಸರಣಿ ವೇಳಾಪಟ್ಟಿ:
ಮೊದಲ ಟಿ20: ಜನವರಿ 5, ಗುವಾಹಟಿ
ದ್ವಿತೀಯ ಟಿ20: ಜನವರಿ 7, ಇಂದೋರ್
ಅಂತಿಮ ಟಿ20: ಜನವರಿ 10, ಪುಣೆ
ಭಾರತ ತಂಡ:
ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಕೆ.ಎಲ್ ರಾಹುಲ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್‍ಕೀಪರ್), ರವೀಂದ್ರ ಜಡೇಜಾ, ಶಿವಂ ದುಬೇ, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ಜಸ್‍ಪ್ರೀತ್ ಬುಮ್ರಾ, ನವದೀಪ್ ಸೈನಿ, ಶಾರ್ದುಲ್ ಠಾಕೂರ್, ಮನೀಶ್ ಪಾಂಡೆ, ವಾಷಿಂಗ್ಟನ್ ಸುಂದರ್, ಸಂಜು ಸ್ಯಾಮ್ಸನ್.
ಶ್ರೀಲಂಕಾ ತಂಡ:
ಲಸಿತ್ ಮಾಲಿಂಗ (ನಾಯಕ), ಧನುಷ್ಕಾ ಗುಣತಿಲಕ, ಅವಿಷ್ಕಾ ಫರ್ನಾಂಡೊ, ಏಂಜಲೊ ಮ್ಯಾಥ್ಯೂಸ್, ದಸುನ್ ಶನಕ, ಕುಸಲ್ ಪೆರೆರಾ, ನಿರೋಶನ್ ಡಿಕ್ವೆಲ್ಲಾ, ಧನಂಜಯ ಡಿ’ಸಿಲ್ವಾ, ಇಸುರು ಉದನಾ, ಭಾನುಕ ರಾಜಪಕ್ಷ, ಒಶಾದ ಫರ್ನಾಂಡೊ, ವಾನಿಂದು ಹಸರಂಗ, ಲಾಹಿರು ಕುಮಾರ, ಕುಶಲ್ ಮೆಂಡಿಸ್, ಲಕ್ಷಣ್ ಸಂದಕನ್, ಕಸುನ್ ರಜಿತ.