ಒಂದು ಎಸೆತ ಎದುರಿಸದೇ ಏಂಜಲೋ ಮಾಥ್ಯೂಸ್ ಔಟ್‌ – ಏನಿದು ಟೈಮ್ಡ್‌ ಔಟ್‌ ನಿಯಮ?

Public TV
2 Min Read
Angelo Mathews timed out

ನವದೆಹಲಿ: ವಿಶ್ವಕಪ್‌ ಕ್ರಿಕೆಟ್‌ನಲ್ಲಿ (World Cup Cricket) ಶ್ರೀಲಂಕಾದ (Sri Lanka) ಏಂಜಲೋ ಮಾಥ್ಯೂಸ್ (Angelo Mathews) ಒಂದು ಎಸೆತ ಎದುರಿಸದೇ ಟೈಮ್ಡ್‌ ಔಟ್‌ಗೆ (timed out) ಬಲಿಯಾದ ವಿಶ್ವದ ಮೊದಲ ಬ್ಯಾಟರ್‌ ಎಂಬ ಕುಖ್ಯಾತಿಗೆ ಪಾತ್ರವಾಗಿದ್ದಾರೆ.

ಬಾಂಗ್ಲಾ (Bangladesh) ವಿರುದ್ಧ ಟಾಸ್‌ ಸೋತು ಬ್ಯಾಟ್‌ ಆರಂಭಿಸಿದ ಶ್ರೀಲಂಕಾ 24.2ನೇ ಓವರ್‌ನಲ್ಲಿ 135 ರನ್‌ಗಳಿಸಿದ್ದಾಗ ಸಮರವಿಕ್ರಮ ಔಟಾದರು. ಈ ವೇಳೆ  ಏಂಜಲೋ ಮಾಥ್ಯೂಸ್ ಕ್ರೀಸ್‌ಗೆ ಆಗಮಿಸಿದರು. ಕ್ರೀಸ್‌ಗೆ ಆಗಮಿಸಿ ಬಾಲ್‌ ಎದುರಿಸಲು ಬ್ಯಾಟ್‌ ಹಿಡಿದಾಗ ಹೆಲ್ಮೆಟ್‌ ಪಟ್ಟಿ ತುಂಡಾಗಿರುವುದು ಗೊತ್ತಾಯಿತು. ಹೀಗಾಗಿ ಬೇರೆ ಹೆಲ್ಮೆಟ್‌ ತರುವಂತೆ ಮಾಥ್ಯೂಸ್ ತಂಡಕ್ಕೆ ಸೂಚಿಸಿದರು.

ಈ ಸಂದರ್ಭದಲ್ಲಿ ಬಾಂಗ್ಲಾ ನಾಯಕ ಶಕೀಬ್‌ ಉಲ್‌ ಹಸನ್‌ ಅಂಪೈರ್‌ ಜೊತೆ ಬ್ಯಾಟರ್‌ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿ ಟೈಮ್ಡ್‌ ಔಟ್‌ಗೆ ಮನವಿ ಮಾಡಿದರು. ಈ ಮನವಿಯನ್ನು ಅಂಪೈರ್‌ ಪುರಸ್ಕರಿಸಿದರು. ಈ ವೇಳೆ ಮ್ಯಾಥ್ಯೂಸ್‌ ಅವರು, ನನ್ನ ಹೆಲ್ಮೆಟ್‌ ಪಟ್ಟಿ ಮುರಿದು ಹೋಗಿದೆ. ಹೀಗಾಗಿ ಬೇರೆ ಹೆಲ್ಮೆಟ್‌ ತರುವಂತೆ ಹೇಳಿದ್ದೇನೆ ಎಂದು ಅಂಪೈರ್‌ಗೆ ಸಮಸ್ಯೆಯನ್ನು ವಿವರಿಸಿದರು.
ಇದನ್ನೂ ಓದಿ: ಭಾರತದ ವಿರುದ್ಧ ಹೀನಾಯ ಸೋಲು – ಶ್ರೀಲಂಕಾ ಕ್ರಿಕೆಟ್‌ ಮಂಡಳಿಯನ್ನೇ ವಜಾಗೊಳಿಸಿದ ಸಚಿವ

ಅಂಪೈರ್‌ ಮತ್ತು ಬಾಂಗ್ಲಾ ಆಟಗಾರರ ಜೊತೆ ಹೆಲ್ಮೆಟ್‌ ದೋಷದ ಬಗ್ಗೆ ಮನವರಿಕೆ ಮಾಡಿದರೂ ಶಕೀಬ್‌ ಮಾತ್ರ ತಮ್ಮ ಟೈಮ್ಡ್‌ ಔಟ್‌ ಮನವಿಯಿಂದ ಹಿಂದಕ್ಕೆ ಸರಿಯಲಿಲ್ಲ. ಕೊನೆಗೆ ಏಂಜಲೋ ಮಾಥ್ಯೂಸ್ ಬಾಂಗ್ಲಾ ವಿರುದ್ಧ ಗೊಣಗುತ್ತಲೇ ಪೆವಿಲಿಯನ್‌ ಕಡೆಗೆ ಹೆಜ್ಜೆ ಹಾಕಿದರು. ಬೌಂಡರಿ ಗೆರೆ ದಾಟುತ್ತಿದ್ದಂತೆ ಹೆಲ್ಮೆಟ್‌ ಎಸೆದು ಸಿಟ್ಟು ಹೊರಹಾಕಿದರು.

 

View this post on Instagram

 

A post shared by ICC (@icc)

ನಿಯಮ ಏನು ಹೇಳುತ್ತದೆ?
ವಿಕೆಟ್‌ ಪತನದ ನಂತರ ಅಥವಾ ಬ್ಯಾಟರ್‌ ನಿವೃತ್ತಿ ಹೊಂದಿದ ಬಳಿಕ 2 ನಿಮಿಷದ ಒಳಗಡೆ ಮುಂದಿನ ಎಸೆತವನ್ನು ಎದುರಿಸಬೇಕು. ಈ ಅವಧಿಯಲ್ಲಿ ಚೆಂಡು ಸ್ವೀಕರಿಸದೇ ಇದ್ದರೆ ಫೀಲ್ಡಿಂಗ್‌ ನಡೆಸುವ ತಂಡ ಟೈಮ್ಡ್‌ ಔಟ್‌ಗೆ ಮನವಿ ಮಾಡಬಹುದು. ಅಂಪೈರ್‌ ನೇರವಾಗಿ ಔಟ್‌ ನೀಡಲು ಬರುವುದಿಲ್ಲ.  ಬೌಲಿಂಗ್‌ ನಡೆಸುವ ತಂಡದ ನಾಯಕ ಮನವಿ ಮಾಡಿದರೆ ಮಾತ್ರ ಟೈಮ್ಡ್‌ ಔಟ್‌ ನೀಡಬಹುದು.

ವಿಕೆಟ್‌ ಸಿಗುತ್ತಾ?
ಬ್ಯಾಟರ್‌ ಟೈಮ್ಡ್‌ ಔಟಾದರೆ ಬೌಲರ್‌ಗೆ ವಿಕೆಟ್‌ ಸಿಗುವುದಿಲ್ಲ.

ಮನವಿ ಮಾಡುವುದು ಸರಿಯೇ?
ಏಕದಿನ, ಟೆಸ್ಟ್‌, ಟಿ20 ಪಂದ್ಯಗಳಿಗೆ ಸಮಯ ನಿಗದಿಯಾಗಿರುತ್ತದೆ. ಒಂದು ವೇಳೆ ಸಮಯ ಮೀರಿಯೂ ಬೌಲಿಂಗ್‌ ಮಾಡಿದರೆ ನಾಯಕನಿಗೆ ದಂಡ ವಿಧಿಸಲಾಗುತ್ತದೆ. ಏಕದಿನ ಕ್ರಿಕೆಟ್‌ನಲ್ಲಿ ಬೌಲಿಂಗ್‌ ತಂಡ 50 ಓವರ್‌ಗಳನ್ನು 3 ಗಂಟೆ 50 ನಿಮಿಷದಲ್ಲಿ ಎಸೆಯಬೇಕಾಗುತ್ತದೆ. ಟಿ20ಯಲ್ಲಿ ಬೌಲಿಂಗ್‌ ತಂಡ 20 ಓವರ್‌ಗಳನ್ನು 1 ಗಂಟೆ 25 ನಿಮಿಷದಲ್ಲಿ 20 ಓವರ್‌ ಎಸೆಯಬೇಕಾಗುತ್ತದೆ. ಈ ಕಾರಣಕ್ಕೆ ಬ್ಯಾಟರ್‌ಗಳು  ಸಮಯ ತೆಗೆದುಕೊಂಡರೆ ಬೌಲಿಂಗ್‌ ನಡೆಸುವ ತಂಡ ಅಂಪೈರ್‌ ಜೊತೆ ಟೈಮ್ಡ್‌ ಔಟ್‌ ಮನವಿ ಮಾಡಲು ಅವಕಾಶ ಸಿಗುತ್ತದೆ.

 

Share This Article