CricketLatestMain PostSports

ಕೊನೆಯ 3 ಓವರ್‌ಗಳಲ್ಲಿ 59 ರನ್ ಚಚ್ಚಿ ದಾಖಲೆಯ ಚೇಸಿಂಗ್ – ಲಂಕಾ ತಂಡದ ಹೀರೋ ಆದ ಶನಕ

ಕೊಲಂಬೊ: ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ನಡುವಿನ 3 ಟಿ-20 ಸರಣಿಯ ಅಂತಿಮ ಪಂದ್ಯದಲ್ಲಿ ಶ್ರೀಲಂಕಾ ತಂಡವು ಚೇಸಿಂಗ್‍ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೆಚ್ಚೆದೆಯ ದಾಖಲೆಯ ಚೇಸಿಂಗ್ ಮೂಲಕ ಪಂದ್ಯದ ಕೊನೆಯ ಒಂದು ಬಾಲ್ ಬಾಕಿ ಇರುವಾಗಲೇ ಗೆಲ್ಲುವ ಮೂಲಕ ವೈಟ್ ವಾಶ್ ಮುಖಭಂಗವನ್ನು ತಪ್ಪಿಸಿಕೊಂಡಿದೆ.

3 ಪಂದ್ಯಗಳ ಟಿ-20 ಸರಣಿಯಲ್ಲಿ 2-1ರಲ್ಲಿ ಕಾಂಗರೂ ಪಡೆ ಸರಣಿಯನ್ನು ವಶಪಡಿಸಿಕೊಂಡಿದೆ. ಪಲ್ಲೆಕೆಲೆಯ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ತೃತೀಯ ಟಿ-20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 176 ರನ್ ಕಲೆಹಾಕಿ ಆತಿಥೇಯ ಶ್ರೀಲಂಕಾ ತಂಡಕ್ಕೆ 177 ರನ್‍ಗಳ ಕಠಿಣ ಗುರಿಯನ್ನು ನೀಡಿತ್ತು.

ಇತ್ತ ಮೊದಲೆರಡು ಪಂದ್ಯಗಳಲ್ಲಿ ಹೀನಾಯವಾಗಿ ಸೋತು ವೈಟ್ ವಾಶ್ ಮುಖಭಂಗದ ಒತ್ತಡದೊಂದಿಗೆ ಕಣಕ್ಕಿಳಿದಿದ್ದ ಶ್ರೀಲಂಕಾ ತಂಡದ ನಾಯಕ ದಾಸನ್ ಶನಕ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ 19.5 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 177 ರನ್ ಕಲೆಹಾಕಿ 4 ವಿಕೆಟ್‍ಗಳ ರೋಚಕ ಜಯ ಸಾಧಿಸಿ ಮುಖಭಂಗದಿಂದ ಪಾರಾಗಿದೆ.

ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದಾಸನ್ ಶನಕ ಹೇಜಲ್ ವುಡ್ ಎಸೆದ 18ನೇ ಓವರ್‌ನಲ್ಲಿ 2 ಸಿಕ್ಸರ್ ಮತ್ತು 2 ಬೌಂಡರಿ ಬಾರಿಸುವದರ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸಿಬಿಟ್ಟರು. ಆ ಒಂದು ಓವರ್‍ನಲ್ಲಿಯೇ 22 ರನ್ ಹರಿದು ಬಂದ ಕಾರಣ ಆಸ್ಟ್ರೇಲಿಯಾ ಪರ ಇದ್ದ ಪಂದ್ಯ ತಿರುವು ಪಡೆದುಕೊಂಡಿತು.

17 ನೇ ಓವರ್‌ಗೂ ಮುನ್ನ 18 ಎಸೆತಗಳಿಗೆ 59 ರನ್ ಅಗತ್ಯವಿತ್ತು ಆದರೆ ಓವರ್ ಮುಕ್ತಾಯದ ನಂತರ 12 ಎಸೆತಗಳಿಗೆ 37 ರನ್ ಬಾರಿಸಬೇಕಾದ ಅಗತ್ಯ ಎದುರಾಯಿತು. ನಂತರ 19ನೇ ಓವರ್‌ನಲ್ಲಿಯೂ ಅಬ್ಬರಿಸಿದ ಶನಕ ಜೇ ರಿಚರ್ಡ್ ಸನ್ ಎಸೆತಗಳಿಗೆ 1 ಸಿಕ್ಸರ್ ಮತ್ತು 1 ಬೌಂಡರಿ ಹಾಗೂ ಕರುಣರತ್ನೆ ಸಹ 1 ಬೌಂಡರಿ ಚಚ್ಚಿದ್ದರು. ಈ ಮೂಲಕ ಅಂತಿಮ 6 ಎಸೆತಗಳಲ್ಲಿ ತಂಡಕ್ಕೆ ಗೆಲ್ಲಲು 19 ರನ್ ಬೇಕಾಗಿತ್ತು.

ಈ ಸಂದರ್ಭದಲ್ಲಿ ಶನಕ ಓವರ್‌ನ ಮೂರನೇ ಎಸೆತಕ್ಕೆ ಬೌಂಡರಿ, ನಾಲ್ಕನೇ ಎಸೆತಕ್ಕೆ ಬೌಂಡರಿ ಮತ್ತು 5ನೇ ಎಸೆತಕ್ಕೆ ಸಿಕ್ಸರ್ ಚಚ್ಚಿದರು. ಈ ಮೂಲಕ ಲಂಕಾಗೆ ಕೊನೆಯ ಎಸೆತದಲ್ಲಿ ಗೆಲ್ಲಲು 1 ರನ್ ಬೇಕಿತ್ತು ಹಾಗೂ ಕೇನ್ ರಿಚರ್ಡ್ ಸನ್ ವೈಡ್ ಎಸೆದ ಪರಿಣಾಮ ಲಂಕಾ ಜಯದ ನಗೆ ಬೀರಿತು. ಹೀಗೆ ಎಲ್ಲಿಯೂ ಎದೆಗುಂದದೆ ಮುಂದೆ ನಿಂತು ಹೋರಾಡಿದ ದಾಸನ್ ಶನಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಸರಣಿಯುದ್ದಕ್ಕೂ ಉತ್ತಮ ಆಟವಾಡಿದ ಆಸ್ಟ್ರೇಲಿಯಾದ ನಾಯಕ ಆರನ್ ಫಿಂಚ್ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Leave a Reply

Your email address will not be published.

Back to top button